ಶುಕ್ರವಾರ, ನವೆಂಬರ್ 22, 2019
21 °C
ಭದ್ರಾ ಮೇಲ್ದಂಡೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು

ಇಂದಿನಿಂದ ಹಳ್ಳದಲ್ಲಿ ನೀರು ಹರಿಸಲು ವ್ಯವಸ್ಥೆ

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಮೇಲ್ದಂಡೆಯಿಂದ ಹಳ್ಳದ ಮೂಲಕ ಪ್ರಾಯೋಗಿಕವಾಗಿ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ಇದೇ 20ರಿಂದ ನೀರು ಹರಿಸಲು ನಿರ್ಧರಿಸಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆ ಉಪವಿಭಾಗದ ಎಂಜಿನಿಯರುಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಲುವೆಯಿಂದ ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಬಳಿಯ ಹಳ್ಳದ ಮೂಲಕ ನೀರು ಹರಿಸಲಾಗುವುದು.

ಹೆಬ್ಬೂರು, ಅಬ್ಬಿನಹೊಳಲು, ಕಾಟಿಗನೆರೆ, ಮುಗುಳಿ, ಬೇಗೂರು, ಆಸಂದಿ, ಕಲ್ಕೆರೆ, ಗ್ರಾಮಗಳ ಹಳ್ಳದ ಸರವು ವ್ಯಾಪ್ತಿಯಲ್ಲಿ ಹರಿದು ಕುಕ್ಕೆ ಸಮುದ್ರ ಕೆರೆ ಹಾದು ಕಡೂರು ತಾಲ್ಲೂಕಿನ ವೇದಾವತಿ ನದಿ ಸೇರಿ ವಾಣಿವಿಲಾಸ ಸಾಗರ ತಲುಪಲಿದೆ.

ನೀರು ಹರಿಸುವ ಬಗ್ಗೆ ಹಳ್ಳದ ಪಾತ್ರದ ಜನರಿಗೆ ಮಾಹಿತಿ ನೀಡಬೇಕು. ಗ್ರಾಮಸ್ಥರು, ಜಾನುವಾರು, ಮಕ್ಕಳು ಹಳ್ಳದ ಪಾತ್ರದಲ್ಲಿ ಓಡಾಡದಂತೆ ಜಾಗೃತಿ ಮೂಡಿಸುವಂತೆ ಅಜ್ಜಂಪುರ ಮತ್ತು ಕಡೂರು ತಹಶೀಲ್ದಾರ್‌ ಅವರಿಗೆ ತರೀಕೆರೆ ಉಪ ವಿಭಾಗಾಧಿಕಾರಿ ರೂಪಾ ಸೂಚನೆ ನೀಡಿದ್ದಾರೆ.

ರೂಪಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಭದ್ರಾ ಮೇಲ್ದಂಡೆಯಿಂದ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ನಾಲೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಹಳ್ಳದ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಶುಕ್ರವಾರ ಮಧ್ಯಾಹ್ನ 12.30ರ ಹೊತ್ತಿಗೆ ನೀರು ಹರಿಸಲಾಗುವುದು. ಮೊದಲು ಕಾಲುವೆಯಲ್ಲಿರುವ ನೀರು ಹರಿಬಿಡಲಾಗುವುದು. ನಂತರ, ಶಾಂತಿಪುರ ಮತ್ತು ಬೆಟ್ಟತಾವರೆಕೆರೆ ಪಂಪ್‌ಹೌಸ್‌ನಲ್ಲಿ ಮೋಟರ್‌ ಚಾಲೂ ಮಾಡಿ ನೀರು ಹರಿಸಲಾಗುವುದು’ ಎಂದು ಎಂಜಿನಿಯರ್‌ ರವಿಕುಮಾರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)