ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷ ಮೀರಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸೂಚನೆ

ಜಿಲ್ಲೆಗೆ ಭೇಟಿ ನೀಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಓಕಾ ಅವರಿಂದ ನಿರ್ದೇಶನ
Last Updated 27 ಜುಲೈ 2019, 10:58 IST
ಅಕ್ಷರ ಗಾತ್ರ

ಧಾರವಾಡ: ‘ಐದು ವರ್ಷ ಮೀರಿದ ಪ್ರಕರಣಗಳು ಬಾಕಿ ಉಳಿಯದ ರಾಜ್ಯವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದು, ಅದರ ಆರಂಭ ಧಾರವಾಡದಿಂದಲೇ ಆಗಬೇಕು’ ಎಂದು ನ್ಯಾಯಾಂಗ ಸಿಬ್ಬಂದಿಗೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ ಓಕಾ ನಿರ್ದೇಶಿಸಿದರು.

ಇಲ್ಲಿನ ವಕೀಲರ ಸಂಘವು ಶನಿವಾರ ಆಯೋಜಿಸಿದ್ದ ಸಕ್ತಾರ ಸ್ವೀಕರಿಸಿ ಮಾತನಾಡಿದ ಅವರು, ‘ಇತರ ಯಾವುದೇ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಗೆ ನೀಡಿರುವ ಮೂಲಸೌಕರ್ಯ ಅತ್ಯುತ್ತಮವಾಗಿದೆ. ಲಭಿಸಿರುವ ಉತ್ತಮ ಸೌಕರ್ಯಗಳನ್ನು ಬಳಸಿಕೊಂಡು ಕಕ್ಷೀದಾರರಿಗೆ ಶೀಘ್ರ ನ್ಯಾಯಧಾನ ಸಿಗುವಂತೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಬಾಕಿ ಉಳಿದ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಬೇಕು’ ಎಂದರು.

‘ನ್ಯಾಯಾಲಯ ಎಂದರೆ ಕೇವಲ ಸುಂದರ ಮತ್ತು ಸುಸಜ್ಜಿತ ಕಟ್ಟಡ ಮಾತ್ರವಲ್ಲ, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿನೂತನ ತಂತ್ರಜ್ಞಾನ ಅಳವಡಿಸುವ ಅಗತ್ಯವೂ ಇದೆ. ರಾಜ್ಯ ಸರ್ಕಾರ 4ನೇ ಶನಿವಾರವನ್ನು ರಜೆಯನ್ನಾಗಿ ಘೋಷಿಸಿದ್ದರಿಂದ ವರ್ಷದಲ್ಲಿ 10ರಿಂದ 12 ದಿನಗಳ ಕಲಾಪಕ್ಕೆ ಸಮಯ ಕಡಿಮೆಯಾಗಲಿದೆ. ಹೀಗಾಗಿ ನ್ಯಾಯಾಲಯದ ಸಮಯವನ್ನು ವಕೀಲರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದು ಓಗಾ ಸಲಹೆ ನೀಡಿದರು.

‘ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಮಾದರಿನ್ಯಾಯಾಲಯಗಳ ಸಾಲಿನಲ್ಲಿ ದೆಹಲಿ, ಹರಿಯಾಣ, ಲಕ್ನೋ ನ್ಯಾಯಾಲಯಗಳು ಸೇರುತ್ತವೆ. ಹುಬ್ಬಳ್ಳಿಯ ನೂತನ ತಾಲ್ಲುಕು ನ್ಯಾಯಾಲಯವೂ ಈ ಸಾಲಿನಲ್ಲಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಹುಬ್ಬಳ್ಳಿ ನ್ಯಾಯಾಲಯಕ್ಕೆ ಭೇಟಿ ನೀಡಿ ಎಂದು ರಾಜ್ಯದ ಎಲ್ಲಾ ಜಿಲ್ಲೆಗಳ ನ್ಯಾಯಾಧೀಶರಿಗೆ ಸೂಚಿಸಿದ್ದೇನೆ’ ಎಂದರು.

ಸಂಘದ ಅಧ್ಯಕ್ಷ ಬಿ.ಎಸ್‌. ಗೋಡ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು.ನ್ಯಾಯಮೂರ್ತಿ ದಿನೇಶಕುಮಾರ, ರಾಜ್ಯ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್ ವಿ.ಶ್ರೀಶಾನಂದ, ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ, ಸಂಘದ ಉಪಾಧ್ಯಕ್ಷ ಎನ್.ಆರ್.ಮಟ್ಟಿ ಇದ್ದರು.

ಇದಕ್ಕೂ ಮೊದಲು ಭೇಟಿಯ ನೆನಪಿಗಾಗಿ ನ್ಯಾಯಾಲಯದ ಆವರಣದಲ್ಲಿ ಅಭಯ ಓಕಾ ಅವರು ಸಸಿ ನೆಟ್ಟು ನೀರುಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT