ಶುಕ್ರವಾರ, ಡಿಸೆಂಬರ್ 13, 2019
27 °C
ಅಕ್ರಮವಾಗಿ ನೇಮಕಗೊಂಡಿರುವ ಎಪಿಪಿಗಳನ್ನು ವಜಾಗೊಳಿಸಿ

ಜನಾರ್ದನ ರೆಡ್ಡಿ ಬಂಧಿಸಿ: ಎಸ್‌.ಆರ್. ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಡೀಲ್ ಕುದುರಿಸಿದ ಆರೋಪ ಹೊತ್ತಿರುವ, ಸಾವಿರಾರು ಕೋಟಿ ಗಣಿ ಹಗರಣದ ಆರೋಪಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಆಗ್ರಹಿಸಿದರು.

ಅಕ್ರಮ ಗಣಿಗಾರಿಕೆ ನಡೆಸಿ ಸುಮಾರು ಒಂದು ಲಕ್ಷ ಕೋಟಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪ ರೆಡ್ಡಿ ಮೇಲಿದೆ. ಸಂಪುಟ ಉಪ ಸಮಿತಿಯೇ ಈ ಬಗ್ಗೆ ವರದಿ ನೀಡಿದೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ಪೈಸೆಯನ್ನು ಆತನಿಂದ ವಸೂಲಿ  ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಕೈಗೊಂಡಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕದಲ್ಲಿ ಅಕ್ರಮವಾಗಿದ್ದು, ಆ ನೇಮಕಾತಿಯನ್ನು ಈ ಕೂಡಲೇ ರದ್ದುಪಡಿಸಬೇಕು. ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅಕ್ರಮದ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅಕ್ರಮ ಎಸಗಿರುವವರ ವಿರುದ್ಧ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಎಎಪಿ ಪರೀಕ್ಷೆಯ ಉತ್ತರ ಪತ್ರಿಕೆ ಮತ್ತು ಅಂಕಗಳನ್ನು ತಿದ್ದಿರುವುದು ಸಾಬೀತಾಗಿದೆ. ಮೌಲ್ಯ ಮಾಪನ ಮಾಡಿದ ಜಿಲ್ಲಾ ನ್ಯಾಯಾಧೀಶರ ಸಹಿಯನ್ನು ಸಹ ಫೋರ್ಜರಿ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಎಎಪಿಗಳನ್ನು ವಜಾಗೊಳಿಸಿದರೆ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಅಕ್ರಮವಾಗಿ ನೇಮಕವಾದರೂ ಪರವಾಗಿಲ್ಲ ಎಂಬ ಧೋರಣೆ ಸರ್ಕಾರದ್ದಾಗಿದೆ. ಈ ರೀತಿ ವಾಮ ಮಾರ್ಗದಲ್ಲಿ ನೇಮಕವಾದವರು ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವೇ ಎಂದು ಉದ್ಯೋಗ ವಂಚಿತ ಮಲ್ಲೇಶ್ ಚಿನಿವಾರ್ ಪ್ರಶ್ನಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸಬೇಕು. ನೋಟು ರದ್ದತಿಯಿಂದ ದೇಶಕ್ಕೆ ಹಾಗೂ ಜನರಿಗೆ ಹಾನಿಯಾಗಿದೆ. ಆದರೆ ಆ ತಪ್ಪನ್ನು ಒಪ್ಪಿಕೊಳ್ಳಲು ಸಹ ಪ್ರಧಾನಿ ಮೋದಿ, ಸಚಿವ ಅರುಣ್ ಜೇಟ್ಲಿ ಸಿದ್ಧರಿಲ್ಲ. ಕಾರ್ಪೋರೇಟ್‌ ಸಂಸ್ಥೆಗಳು ಬರೆದುಕೊಟ್ಟ ಭಾಷಣವನ್ನು ಮೋದಿ ಓದುತ್ತಿದ್ದಾರೆ.   ಬೋಫೋರ್ಸ್‌ ಹಗರಣ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಬದಲಾಯಿಸಿತ್ತು. ರಫೇಲ್ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ಸರ್ಕಾರಕ್ಕೂ ಅದೇ ಗತಿ ಬರಲಿದೆ ಎಂದು ಹಿರೇಮಠ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು