ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಗೆ ಗುದ್ದಿದ ನೋಟು ರದ್ದತಿ

ಪ್ರಧಾನಿ ಮಾಜಿ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯನ್‌
Last Updated 29 ನವೆಂಬರ್ 2018, 20:48 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದತಿಯ ಆಘಾತವು ಭಾರತದ ಅರ್ಥ ವ್ಯವಸ್ಥೆಯ ಪ್ರಗತಿಯನ್ನು ಬಹಳ ಬೇಗನೆ ತಗ್ಗಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಹ್ಮಣ್ಯನ್‌ ಹೇಳಿದ್ದಾರೆ.

ನೋಟು ರದ್ದತಿ ಎಂಬುದು ಬೃಹತ್ತಾದ ಮತ್ತು ಅತ್ಯಂತ ಕಠೋರವಾದ ಕ್ರಮ ಎಂದೂ ಅವರು ಇನ್ನಷ್ಟೇ ಪ್ರಕಟವಾಗಬೇಕಿರುವ ತಮ್ಮ ಪುಸ್ತಕದಲ್ಲಿ ಬಣ್ಣಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯಿಂದ ಅವರು ಅವಧಿಗೆ ಮುನ್ನವೇ ನಿರ್ಗಮಿಸಿದ್ದರು.

‘ಆರ್ಥಿಕ ಪ್ರಗತಿ ಆಗಲೇ ನಿಧಾನವಾಗಿತ್ತು. ನೋಟು ರದ್ದತಿಗೆ ಮುನ್ನ ಆರ್ಥಿಕ ಪ್ರಗತಿಯ ದರ ಶೇ 8ರಷ್ಟಿತ್ತು. ನೋಟು ರದ್ದತಿಯ ನಂತರದ ತ್ರೈಮಾಸಿಕದಲ್ಲಿ ಇದು ಶೇ 6.8ಕ್ಕೆ ಇಳಿಯಿತು’ ಎಂದು ಅವರು ಹೇಳಿದ್ದಾರೆ. ನೋಟು ರದ್ದತಿಯ ನಂತರದ ದಿನಗಳಲ್ಲಿ ಹೊಸದಾರಿಗಳನ್ನು ಕಂಡುಕೊಳ್ಳುವುದು ತಮ್ಮ ದೊಡ್ಡ ಸವಾಲುಗಳಲ್ಲಿ ಒಂದಾಗಿತ್ತು ಎಂದೂ ಅವರು ಒಪ್ಪಿಕೊಂಡಿದ್ದಾರೆ.

ಒಟ್ಟು ದೇಶೀ ಉತ್ಪನ್ನ (ಜಿಡಿಪಿ)ಲೆಕ್ಕ ಹಾಕುವ ಪದ್ಧತಿಯನ್ನು ಪರಿಷ್ಕರಿಸಿ ಹಿಂದಿನ ಯುಪಿಎ ಸರ್ಕಾರದ ಅವಧಿಗಿಂತ ಎನ್‌ಡಿಎ ಅವಧಿ ಚೆನ್ನಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆದ ಮರು ದಿನವೇ ಸುಬ್ರಹ್ಮಣ್ಯನ್‌ ಅವರ ನಿಲುವು ಬಹಿರಂಗವಾಗಿದೆ.

ನೋಟು ರದ್ದತಿಯ ಬಳಿಕ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಜಯ ಸಿಕ್ಕಿತ್ತು. ಇದು ನೋಟು ರದ್ದತಿಯ ಪರ ಜನಾಭಿಪ್ರಾಯ ಅಲ್ಲ. ಜನರ ಮೇಲೆ ಪ್ರತಿಕೂಲ ಪರಿಣಾಮಬೀರಬಲ್ಲ ಕ್ರಮ ಕೈಗೊಂಡರೂ ಜನರನ್ನು ಆಕರ್ಷಿಸಬಲ್ಲ ನಾಯಕರಿದ್ದರೆ ಇಂತಹ ಸ್ಥಿತಿಯನ್ನು ಮೀರಬಲ್ಲರು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT