ಅಶ್ರಫ್‌ ‍ಪ್ರಕರಣ: ವಿಚಾರಣೆಗೆ ಸಚಿವ ಖಾದರ್ ಸೂಚನೆ

7

ಅಶ್ರಫ್‌ ‍ಪ್ರಕರಣ: ವಿಚಾರಣೆಗೆ ಸಚಿವ ಖಾದರ್ ಸೂಚನೆ

Published:
Updated:
ಅಶ್ರಫ್‌ ಎಂ ಸಾಲೆತ್ತೂರು

ಮಂಗಳೂರು: ಮೂಢನಂಬಿಕೆ ಪ್ರಶ್ನಿಸಿ ಫೇಸ್‌ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಅಶ್ರಫ್‌ ಸಾಲೆತ್ತೂರು ಎಂಬ ಯುವಕನಿಗೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ವಿಚಾರಣೆ ನಡೆಸಿ, ತಪ್ಪೆಸಗಿರುವುದು ಕಂಡುಬಂದರೆ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್ ಅವರಿಗೆ ಸೂಚಿಸಿದ್ದಾರೆ.

ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಬುಧವಾರ ಸಚಿವರನ್ನು ಭೇಟಿಮಾಡಿದ ಅಶ್ರಫ್‌, ಪೊಲೀಸರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಮನವಿ ಸಲ್ಲಿಸಿದರು. ಅದೇ ವೇಳೆಗೆ ಅಲ್ಲಿಗೆ ಬಂದ ಪೊಲೀಸ್ ಕಮಿಷನರ್‌, ಸಚಿವರ ಎದುರಿನಲ್ಲೇ ಅಶ್ರಫ್‌ ಅವರಿಂದ ಪ್ರಕರಣದ ಕುರಿತು ವಿಸ್ತೃತ ಮಾಹಿತಿ ಪಡೆದರು.

ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಖಾದರ್‌, ‘ನನ್ನ ಎದುರಿನಲ್ಲೇ ಪೊಲೀಸ್ ಕಮಿಷನರ್‌ ಅವರು ಅಶ್ರಫ್‌ ಅವರಿಂದ ಎಲ್ಲ ಮಾಹಿತಿಯನ್ನೂ ಪಡೆದಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸುವಂತೆ ಸೂಚಿಸಿದ್ದೇನೆ. ಪೊಲೀಸರು ತಪ್ಪೆಸಗಿರುವುದು ಕಂಡುಬಂದರೆ ಕಮಿಷನರ್‌ ಕ್ರಮ ಜರುಗಿಸುತ್ತಾರೆ. ಯುವಕನಿಗೆ ನ್ಯಾಯ ದೊರಕಿಸುವುದಾಗಿ ಕಮಿಷನರ್‌ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಫೇಸ್‌ ಬುಕ್, ವಾಟ್ಸ್ ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಈವರೆಗೆ ದಾಖಲಿಸಿರುವ ಪ್ರಕರಣಗಳು, ತನಿಖೆಯ ವಿಧಾನದ ಕುರಿತು ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಪಕ್ಷಪಾತದ ನಿಲುವು ತಳೆಯದಂತೆ ಎಚ್ಚರಿಕೆ ವಹಿಸುವಂತೆಯೂ ಕಮಿನಷರ್‌ಗೆ ಸೂಚಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !