ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ನಗಣ್ಯ, ಮೋದಿ ಸಾಧನೆಯೇ ಶ್ರೀರಕ್ಷೆ: ಅಶ್ವತ್ಥನಾರಾಯಣ

Last Updated 25 ಏಪ್ರಿಲ್ 2019, 8:24 IST
ಅಕ್ಷರ ಗಾತ್ರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಶ್ವತ್ಥನಾರಾಯಣ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ವಕ್ತಾರರಾಗಿರುವ ಅವರು ವಿಧಾನ ಪರಿಷತ್‌ ಸದಸ್ಯರಾಗಿಯೂ ಅನುಭವ ಹೊಂದಿದ್ದಾರೆ.

* ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕೋಟೆಯನ್ನು ಹೇಗೆ ಭೇದಿಸುತ್ತೀರಿ?
ಕಳೆದ ಚುನಾವಣೆಯಲ್ಲಿ ಯೋಗೇಶ್ವರ್‌ ಕಾಂಗ್ರೆಸ್‌ ಜೊತೆ ಇದ್ದರು. ಈ ಸಲ ನಮ್ಮೊಂದಿಗಿದ್ದಾರೆ. ಚನ್ನಪಟ್ಟಣದಲ್ಲಿ ನಾವು ಈ ಬಾರಿ 30 ಸಾವಿರ ಮತಗಳ ಮುನ್ನಡೆ ಪಡೆಯುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್‌ನಲ್ಲಿ ನಮ್ಮ ಅಭ್ಯರ್ಥಿ ಅಲ್ಪ ಅಂತರದಲ್ಲಿ ಸೋತಿದ್ದರು. ಅಲ್ಲಿ ಈ ಬಾರಿ ನಮಗೆ ಮುನ್ನಡೆ ಸಿಗುತ್ತದೆ. ಮಾಗಡಿಯಲ್ಲೂ ನಮ್ಮ ಬಲ ವೃದ್ಧಿಸಿದೆ. ರಾಮನಗರದಲ್ಲಿ ಸಂಸದರಿಂದ ಆಗಿರುವ ಕೆಲಸಗಳು ಏನೂ ಇಲ್ಲ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ (ಬೆಂ.ದಕ್ಷಿಣ, ಆನೇಕಲ್‌, ರಾಜರಾಜೇಶ್ವರಿನಗರ) ನಮ್ಮ ಪಕ್ಷಕ್ಕೆ ಉತ್ತಮ ನೆಲೆ ಇದೆ.

* ಕ್ಷೇತ್ರದ ಪ್ರಗತಿಗೆ ನಿಮ್ಮ ಕಾರ್ಯಸೂಚಿಗಳೇನು?
ಶ್ರೀರಂಗ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗದ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಮಂಚನಬೆಲೆ ನೀರಾವರಿ ಯೋಜನೆಗೆ ಕಾಲುವೆ ಹಾಕಿದ ಕಲ್ಲು, ಸಿಮೆಂಟ್‌, ಪೈಪ್‌ ಕಿತ್ತುಹೋಗಿದೆ. ತಿಪ್ಪಗೊಂಡನಹಳ್ಳಿ ಕೆರೆಯಿಂದ ಮಂಚನಬೆಲೆಗೆ ನೀರು ಬರುತ್ತದೆ. ಅಲ್ಲಿಂದ ನೆಲ್ಲಿಗುಡ್ಡೆ ಅಣೆಕಟ್ಟೆಗೆ ಅದನ್ನು ಹಾಯಿಸಬಹುದು. ಈ ಬಗ್ಗೆ ನನ್ನದೇ ಆದ ಯೋಚನೆಗಳಿವೆ.

ಆನೇಕಲ್‌, ಎಲೆಕ್ಟ್ರಾನಿಕ್‌ ಸಿಟಿ, ಜಿಗಣಿ, ವೀರೇಶಪುರ, ಹಾರೊಹಳ್ಳಿ, ಬಿಡದಿ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಿಗೆ ಕೈಗಾರಿಕಾ ಕಾರಿಡಾರ್‌ ನಿರ್ಮಿಸಬಹುದು. ಇದರಿಂದ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ.

* ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದ್ದರೂ ಉಪನಗರ ರೈಲು ಯೋಜನೆ ತಾರ್ಕಿಕ ಅಂತ್ಯ ಕಂಡಿಲ್ಲ ಏಕೆ?
ರಾಜ್ಯ ಸರ್ಕಾರ 20 ಷರತ್ತುಗಳನ್ನು ಹಾಕಿದ್ದರಿಂದ ಯೋಜನೆಗೆ ಹಿನ್ನಡೆ ಆಗಿದೆ. ಚನ್ನಪಟ್ಟಣ ರೈಲು ನಿಲ್ದಾಣದ ಮೂಲಕ ನಿತ್ಯ ಗಾರ್ಮೆಂಟ್ಸ್‌ ಕಾರ್ಖಾನೆಗಳ ಸಾವಿರಾರು ಉದ್ಯೋಗಿಗಳು ಪ್ರಯಾಣಿಸುತ್ತಾರೆ. ದೊಡ್ಡಿಗೆ ಕುರಿಗಳನ್ನು ತುಂಬಿದಂತೆ ಬೋಗಿಗೆ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಆದರೂ ಸಂಸದರು ಹೆಚ್ಚುವರಿ ಬೋಗಿ ಹಾಕಿಸಿಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ 60 ಕಿ.ಮೀ.ಗೂ ಹೆಚ್ಚು ಉದ್ದದ ರೈಲ್ವೆ ಹಳಿ ಇದೆ. ಲೆವೆಲ್‌ ಕ್ರಾಸಿಂಗ್‌ ಬಳಿ ಮೇಲ್ಸೇತುವೆಯಾಗಲೀ, ಕೆಳಸೇತುವೆಯನ್ನಾಗಲೀ ನಿರ್ಮಿಸಿಲ್ಲ.

* ಉದ್ಯೋಗ ಸೃಷ್ಟಿ ಆಗುತ್ತಿಲ್ಲ ಎಂದು ಯುವಜನರು ದೂರುತ್ತಿದ್ದಾರಲ್ಲಾ?
ಮೂಲಸೌಕರ್ಯ ಹೆಚ್ಚಳಕ್ಕೆ ಕೇಂದ್ರ ಆದ್ಯತೆ ನೀಡಿದೆ. ಉದಾಹರಣೆಗೆ, ಬೆಂಗಳೂರು– ಮೈಸೂರು ನಡುವೆ 117 ಕಿ.ಮಿ. ಹೆದ್ದಾರಿ ನಿರ್ಮಿಸುವ ಯೋಜನೆಯೊಂದರಿಂದಲೇ ಎಂಜಿನಿಯರ್‌, ಪೂರೈಕೆದಾರರು, ಕಾರ್ಮಿಕರು, ಮಿಕ್ಸಿಂಗ್‌ ಘಟಕದ ಸಿಬ್ಬಂದಿ ಸೇರಿದಂತೆ ಸುಮಾರು 6500ರಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಇದೇ ರೀತಿ ದೇಶದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ.

ಇಪಿಎಫ್‌, ಇಎಸ್‌ಐ ನೋಂದಣಿ ಮಾಡಿಸಿದವರ ಅಂಕಿ ಅಂಶವನ್ನು ಆಧರಿಸಿ ಕೇಂದ್ರ ಅಂಕಿ ಅಂಶ ಬಿಡುಗಡೆ ಮಾಡುತ್ತದೆ. ಅಸಂಘಟಿತ ಕಾರ್ಮಿಕರು ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ ಸಂಖ್ಯೆ ಕಡಿಮೆ ಕಾಣಿಸುತ್ತದೆ.

* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪರಿಸರ ಸೂಕ್ಷ್ಮ ಪ್ರದೇಶವನ್ನು ಕುಗ್ಗಿಸುವ ಬಗ್ಗೆ ನಿಮ್ಮ ನಿಲುವೇನು?

ಪರಿಸರ ಸೂಕ್ಷ್ಮ ಪ್ರದೇಶ ಕಡಿಮೆ ಮಾಡುವುದಕ್ಕೆ ನನ್ನ ವಿರೋಧವಿದೆ. ಕೆಲವು ಸಂಘಟನೆಗಳು ಈ ಬಗ್ಗೆ ಹೋರಾಟ ಕೈಗೆತ್ತಿಕೊಂಡಿವೆ. ನಾವು ಮಧ್ಯಪ್ರವೇಶ ಮಾಡಿದರೆ ಅದು ರಾಜಕೀಯಕ್ಕೆ ತಿರುಗುತ್ತದೆ.

* ನಗರದ ಹೊರವಲಯದಲ್ಲಿ ಅಕ್ರಮ ಗಣಿಗಾರಿಕೆ ಜೋರಾಗಿ ಸದ್ದು ಮಾಡುತ್ತಿದೆಯಲ್ಲ?
ಅಕ್ರಮ ಗಣಿಗಾರಿಕೆಗೆ ನಮ್ಮ ಬೆಂಬಲ ಇಲ್ಲ. ಕೆಲವರು ಬನ್ನೇರುಘಟ್ಟ, ಬಿಡದಿ, ರಾಮನಗರ, ಮಾಗಡಿಯನ್ನು ಗಣಿಗಾರಿಕೆ ಕಾರಿಡಾರ್‌ ಮಾಡಿಕೊಂಡಿದ್ದಾರೆ. ಕೆಲವು ಹಳ್ಳಿಗಳಲ್ಲಿ ದೂಳು, ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಗಣಿಗಾರಿಕೆಯಿಂದ ಸಂಗ್ರಹವಾಗುವ ಸೆಸ್‌ ಅನ್ನು ಮಾಲಿನ್ಯ ನಿಯಂತ್ರಣಕ್ಕೆ ಬಳಸುತ್ತಿಲ್ಲ. ಅಕ್ರಮ ಗಣಿಗಾರಿಕೆ ತಡೆಯಲು ಪರಿಸರ ಇಲಾಖೆ ಮೂಲಕ ಒತ್ತಡ ಹೇರುತ್ತೇನೆ.

* ಜನ ನಿಮಗೆ ಏಕೆ ಮತ ನೀಡಬೇಕು ಎಂದು ಬಯಸುತ್ತೀರಿ?
ನಮ್ಮಲ್ಲಿ ನಗರ ಪ್ರದೇಶ, ಅರೆನಗರ, ಗ್ರಾಮಾಂತರ ಪ್ರದೇಶ...ಹೀಗೆ ವಿವಿಧ ರೀತಿಯ ಪ್ರದೇಶಗಳಿವೆ. ಒಂದೊಂದರಲ್ಲೂ ವಿಭಿನ್ನ ರೀತಿಯ ಸಮಸ್ಯೆಗಳಿವೆ. ಚನ್ನಪಟ್ಟಣದಲ್ಲಿ ನೀರಾವರಿ ಹೆಚ್ಚಿಸಬೇಕಿದೆ. ಇಗ್ಗಲೂರು ಬ್ಯಾರೇಜ್‌, ಕಣ್ವ ಅಣೆಕಟ್ಟು, ಜೋಡಿಕೆರೆಗಳಿಗೆ ನಿರಂತರ ನೀರು ಹಾಯಿಸಬೇಕು. ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಬೇಕು. ಮಾಗಡಿ, ಬಿಡದಿ ಹಾಗೂರಾಮನಗರಗಳಲ್ಲಿ ಹೈನುಗಾರಿಕೆ, ನೇಕಾರಿಕೆ ಮತ್ತು ರೇಷ್ಮೆ ಜಾಸ್ತಿ. ಇವುಗಳಿಗೆ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸುತ್ತೇವೆ.

* ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೇಂದ್ರದ ನೀತಿಯೂ ಇದಕ್ಕೆ ಕಾರಣ ಎಂಬ ದೂರಿದೆಯಲ್ಲವೆ?
ಕೇಂದ್ರವು ಆಮದು ಸುಂಕ ಕಡಿಮೆ ಮಾಡಿದಾಗ ರೇಷ್ಮೆ ದರ ಕುಸಿತ ಕಾಣುತ್ತದೆ. ಚೀನಾ ರೇಷ್ಮೆಗೆ ಅವಕಾಶ ನೀಡಿದ್ದರಿಂದ ಸಮಸ್ಯೆ ಆಗಿದ್ದು ನಿಜ. ಈಗ ಪರಿಸ್ಥಿತಿ ಸುಧಾರಿಸಿದೆ. ರೈತರಿಗೆ ಪ್ರತಿ ಕೆ.ಜಿ. ರೇಷ್ಮೆಗೆ ಕನಿಷ್ಠ ₹ 350ರಂದ ₹ 380 ಸಿಗಬೇಕು. ಪ್ರತಿ ಕೆ.ಜಿ. ರೇಷ್ಮೆಗೆ ₹ 100 ಬೆಂಬಲ ಬೆಲೆ ನೀಡಬೇಕು.

* ಮಾವು ಬೆಳೆಗಾರರೂ ನಷ್ಟದಲ್ಲಿದ್ದಾರೆ. ಅವರನ್ನು ಮೇಲೆತ್ತುವ ಬಗೆ ಹೇಗೆ?
ಕಳೆದ ಬಾರಿ ಮಾವಿನ ದರ ಕೆ.ಜಿ.ಗೆ ₹ 3ವರೆಗೆ ಕುಸಿಯಿತು. ಇದನ್ನು ತಡೆಯಲು ಸಂತೆ ಮೇಳಗಳ ಮೂಲಕ ಮಾವಿಗೆ ಮಾರುಕಟ್ಟೆ ಒದಗಿಸಬೇಕು. ಇದಕ್ಕೆ ಸರ್ಕಾರ ಮೂಲಸೌಕರ್ಯ ಒದಗಿಸಬೇಕು. ವಾರದ ಸಂತೆಗಳಿಗೆ ಉತ್ತೇಜನ ನೀಡಬೇಕು.

* ನಿಮಗೆ ಕೊನೆ ಕ್ಷಣದಲ್ಲಿ ಟಿಕೆಟ್‌ ನೀಡಿದ್ದೇಕೆ? ಇದರಿಂದ ಪೂರ್ವತಯಾರಿಗೆ ಸಮಯದ ಕೊರತೆ ಆಗಿಲ್ಲವೇ?
ಈ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಯಾರೆಂಬುದು ನಗಣ್ಯ. ಪ್ರಧಾನಿ ನರೇಂದ್ರ ಮೋದಿ ಸಾಧನೆಯೇ ನಮಗೆ ಶ್ರೀರಕ್ಷೆ. ಜನರಲ್ಲಿ ಮೋದಿ ಮೂಡ್‌ ಇದೆ.

ತಯಾರಿಗೆ ಸಮಯದ ಕೊರತೆ ಏನಿಲ್ಲ. ಅಭ್ಯರ್ಥಿ ಯಾರೇ ಆಗಿರಲಿ, ಪಕ್ಷದ ಕಾರ್ಯಕರ್ತರು ಚುನಾವಣೆಗೆ ಮೂರು ತಿಂಗಳು ಮುನ್ನವೇ ಸಿದ್ಧತೆ ಆರಂಭಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT