ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಇಲ್ಲದೆಯೇ ಬಜೆಟ್‌ಗೆ ಅಂಗೀಕಾರ

ಆಡಿಯೊ ಗದ್ದಲದ ನಡುವೆ ಒಂದು ದಿನ ಮೊದಲೇ ಕೊನೆಗೊಂಡ ಅಧಿವೇಶನ
Last Updated 14 ಫೆಬ್ರುವರಿ 2019, 20:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಒಂದು ವರ್ಷದ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಹೇಗಿರಬೇಕು ಎಂಬ ಬಗ್ಗೆ ಚೌಕಟ್ಟು ಹಾಕಿಕೊಡುವ ಬಜೆಟ್‌ ಯಾವುದೇ ಚರ್ಚೆ ನಡೆಯದೆ ಉಭಯ ಸದನಗಳಲ್ಲೂ ಗುರುವಾರ ಅಂಗೀಕಾರ ಪಡೆದಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಳೆದ ಶುಕ್ರವಾರ ₹2.34 ಲಕ್ಷ ಕೋಟಿ ಮೊತ್ತದ ಬಜೆಟ್‌ ಮಂಡಿಸಿದ್ದರು. ಅದರ ಮೂರನೇ ಒಂದು ಪಾಲಿನಷ್ಟು ಇರುವ ಧನ ವಿನಿಯೋಗ ಮಸೂದೆಗೆ (₹80 ಸಾವಿರ ಕೋಟಿ) ಬಿಜೆಪಿ ಸದಸ್ಯರ ಧರಣಿಯ ನಡುವೆ ಒಪ್ಪಿಗೆ ನೀಡಲಾಯಿತು.

‘ಬಜೆಟ್‌ ಅಧಿವೇಶನದ ವೇಳೆ ಅತೃಪ್ತರ ಸಂಖ್ಯೆ 15 ಆಗಲಿದೆ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಈ ಶಾಸಕರೇ ಸರ್ಕಾರವನ್ನು ಪತನಗೊಳಿಸಲಿದ್ದಾರೆ’ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳಿಕೆ ನೀಡಿದ್ದರು.

ಸರ್ಕಾರ ಪತನಕ್ಕೆ ‘ಆಪರೇಷನ್‌ ಕಮಲ’ದ ತಂತ್ರ ಹೆಣೆದಿದ್ದ ಬಿಜೆ‍ಪಿ ನಾಯಕರು ಅದೇ ಉಮೇದಿನಲ್ಲಿ ಸದನಕ್ಕೆ ಬಂದಿದ್ದರು. ರಾಜ್ಯಪಾಲರ ಭಾಷಣದ ವೇಳೆ ಗದ್ದಲ ಎಬ್ಬಿಸಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿದ್ದರು. ಬಜೆಟ್‌ ಮಂಡನೆಗೆ ಮುನ್ನವೇ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ಪಾಳಯದಲ್ಲಿ ಹರಿದಾಡಿತ್ತು. ಅದಕ್ಕೆ ಪೂರಕವಾಗಿ, ಶುಕ್ರವಾರ ಪತ್ರಿಕಾಗೋಷ್ಠಿ ನಡೆಸುವುದಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ್ದು ಇದಕ್ಕೆ ರೆಕ್ಕೆಪುಕ್ಕ ನೀಡಿದಂತಾಗಿತ್ತು.

ಅದಕ್ಕೂ ಮುನ್ನವೇ (ಶುಕ್ರವಾರ ಬೆಳಿಗ್ಗೆ 10 ಗಂಟೆಗೆ) ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮೇಲೆ ಆಡಿಯೊ ಬಾಂಬ್‌ ಎಸೆದಿದ್ದರು. ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ₹50 ಕೋಟಿ ನೀಡಲಾಗಿದೆ ಎಂಬ ಅಂಶ ಆಡಿಯೊದಲ್ಲಿದೆ ಎಂದೂ ಉಲ್ಲೇಖಿಸಿದ್ದರು.

ರಮೇಶ್‌ ಕುಮಾರ್ ಅವರು ಸದನದಲ್ಲಿ ಸೋಮವಾರ ಬೆಳಿಗ್ಗೆ ಪ್ರಸ್ತಾಪಿಸಿದ್ದರು. ತಮ್ಮ ಮೇಲಿನ ಆರೋಪದ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ ವಹಿಸಬೇಕು ಎಂದೂ ರೂಲಿಂಗ್‌ ನೀಡಿದ್ದರು. ಈ ವಿಷಯದ ಕುರಿತು ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ವಾಗ್ವಾದ ನಡೆದಿತ್ತು. ಈ ಪ್ರಕರಣವೇ ಎರಡು ದಿನದ ಕಲಾಪವನ್ನು ನುಂಗಿ ಹಾಕಿತ್ತು.

ಅದರ ಬೆನ್ನಲ್ಲೇ, ಶಾಸಕ ಪ್ರೀತಂ ಗೌಡ ಮನೆ ಮೇಲೆ ದಾಳಿ ಪ್ರಕರಣನ್ನು ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಂಡಿತು. ಈ ವಿಷಯವನ್ನು ಮುಂದಿಟ್ಟುಕೊಂಡು ಬುಧವಾರ ಸಂಜೆ ಹಾಗೂ ಗುರುವಾರ ಬೆಳಿಗ್ಗೆ ಧರಣಿ ನಡೆಸಿತು. ಶಾಸಕ ಪ್ರೀತಂಗೌಡ ಮನೆ ಮೇಲಿನ ದಾಳಿ ಪ್ರಕರಣ ಮುಂದಿಟ್ಟು ಬಿಜೆಪಿ ಧರಣಿ ನಡೆಸಿದ್ದರಿಂದಾಗಿ ನಿಗದಿಗಿಂತ ಒಂದು ದಿನ ಮೊದಲೇ ಕಲಾಪ ಕೊನೆಗೊಂಡಿತು.

ಸಾಮಾನ್ಯವಾಗಿ ಬಜೆಟ್‌ ಅಧಿವೇಶನ 10 ದಿನಗಳು ನಡೆಸುವುದು ರೂಢಿ. ಆದರೆ, ಈ ಸಲದ ಬಜೆಟ್‌ ಅಧಿವೇಶನವನ್ನು ಐದು ದಿನಕ್ಕೇ ಸೀಮಿತಗೊಳಿಸಲಾಯಿತು.

ಬಜೆಟ್ ಪಾಸ್–ಬಿಜೆಪಿ ಫೇಲ್‌

‘ಆಪರೇಷನ್’ ಆತಂಕಗಳ ಮಧ್ಯೆಯೇ ಆರಂಭವಾದ ಬಜೆಟ್ ಅಧಿವೇಶನ, ಗದ್ದಲದ ಗೊಡವೆಗಳ ಮಧ್ಯೆಯೇ ಕೊನೆಗೊಂಡಿತು.

ಬಜೆಟ್ ಮಂಡನೆಯಾಗುವುದಿಲ್ಲ, ಮಂಡನೆಯಾದರೂ ಧನವಿನಿಯೋಗ ಮಸೂದೆ ಬೀಳಲಿದೆ, ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ‘ಮೈತ್ರಿ’ ನಾಯಕರಲ್ಲಿ ಕೂಡ ಇಂತಹದೊಂದು ಭೀತಿಯ ಎಳೆ ಮೂಡಿತ್ತು.

ಅದಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಂಡ ಆಡಳಿತಾರೂಢ ಮಿತ್ರ ಪಕ್ಷಗಳ ನಾಯಕರು, ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರಲ್ಲದೇ, ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಹೀಗಾಗಿ, ಬಿಜೆಪಿಯ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಯಿತು. ಧನವಿನಿಯೋಗ ಮಸೂದೆಯನ್ನು ಮತಕ್ಕೆ ಹಾಕಬೇಕು ಎಂದು ಬಿಜೆಪಿ ಕೋರಿಕೆ ಸಲ್ಲಿಸಲೇ ಇಲ್ಲ. ಹೀಗಾಗಿ, ಗದ್ದಲದ ಮಧ್ಯೆಯೇ ಬಜೆಟ್ ಅನುಮೋದನೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT