ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮ್ಮ ನೇತೃತ್ವದಲ್ಲೇ ಬಿಜೆಪಿಗೆ ಹೋಗೋಣ’– ಶಾಸಕರ ಬಂಡವಾಳ ಬಿಚ್ಚಿಟ್ಟ ಡಿಕೆಶಿ

ಕಲಾಪದಲ್ಲಿ ಭಿನ್ನ ಶಾಸಕರ ಬಂಡವಾಳ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್‌
Last Updated 23 ಜುಲೈ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆ ಬಳಿಕ 30 ಸಂಸದರಿಗೆ ಭೋಜನ ಕೂಟ ಇಟ್ಟುಕೊಂಡಿದ್ದೆ. ಆವತ್ತು ಶಾಸಕ ಮುನಿರತ್ನ, ‘ಅಣ್ಣಾ, ನಿಮ್ಮ ನೇತೃತ್ವದಲ್ಲೇ ಬಿಜೆಪಿಗೆ ಹೋಗಿ ಬಿಡೋಣ’ ಎಂದು ಹೇಳಿದ್ದ. ಈ ರೀತಿ ಮಾಡಿದರೆ ನಮ್ಮನ್ನು ಆಯ್ಕೆ ಮಾಡಿದ ಮತದಾರರು ಮೇಲೆ ಕೆಳಗೆ ನೋಡದೆ ಬಡಿದು ಹಾಕುತ್ತಾರೆ ಎಂದು ಎಚ್ಚರಿಸಿ ಕಳುಹಿಸಿದ್ದೆ’.

15 ಶಾಸಕರು ರಾಜೀನಾಮೆ ನೀಡುವ ಮುನ್ನ ನಡೆದ ಬೆಳವಣಿಗೆಗಳ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಬೆಳಕು ಚೆಲ್ಲಿದ್ದು ಹೀಗೆ. ವಿಧಾನಸಭೆಯಲ್ಲಿ ಮಂಗಳವಾರ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ‘ಮುಂಬೈಯಲ್ಲಿ ಇರುವವರು ಅತೃಪ್ತ ಶಾಸಕರು ಅಲ್ಲ, ಸಂಪೂರ್ಣ ತೃಪ್ತ ಶಾಸಕರು. ಸಂಪೂರ್ಣ ತೃಪ್ತಿ ಆಗಿರುವುದರಿಂದ ಅಲ್ಲಿಗೆ ಹೋಗಿದ್ದಾರೆ’ ಎಂದು ಲೇವಡಿ ಮಾಡಿದರು.

‘ಮುಂಬೈಯಲ್ಲಿ ಇರುವ ಇಬ್ಬರು ಶಾಸಕರು ಸೋಮವಾರ ರಾತ್ರಿ ಕರೆ ಮಾಡಿದ್ದರು. ಇಲ್ಲಿಗೆ ಬಂದು ಬಿಡಿಯ‍ಪ್ಪ ಎಂದು ಮನವಿ ಮಾಡಿದ್ದೆ. ಮಿನಿಸ್ಟರ್‌ ಆಗುತ್ತೇವೆ, ಬಿಟ್ಟು ಬಿಡಣ್ಣ ಎಂದು ಕೋರಿಕೊಂಡರು. ಉಪಮುಖ್ಯಮಂತ್ರಿ, ಗೃಹ, ಇಂಧನ, ಜಲಸಂಪನ್ಮೂಲ ಸಚಿವರಾಗುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಈ ಶಾಸಕರು ತೊಡಗಿದ್ದಾರೆ. ಆದರೆ, ಅವರಿಗೆ ಒಂದು ವಿಷಯ ಗೊತ್ತಿಲ್ಲ. ಬಿಜೆಪಿ ಸಹವಾಸದಿಂದ ಅವರ ರಾಜಕೀಯ ಜೀವನವೇ ಸರ್ವನಾಶವಾಗಲಿದೆ. ಸಮಾಧಿಯಾಗುತ್ತೀರಿ. ಅವರ ಬಲೆಗೆ ಬೀಳಬೇಡಿ’ ಎಂದು ಅವರು ಎಚ್ಚರಿಸಿದರು.

‘ರಾಜೀನಾಮೆ ನೀಡಿರುವ ಕೆಲವು ಶಾಸಕರು 30–40 ವರ್ಷಗಳಿಂದ ಸ್ನೇಹಿತರು. ಅವರು ಕುಟುಂಬದ ಸದಸ್ಯರಂತೆ. 15 ಶಾಸಕರ ಪೈಕಿ 10–12 ಶಾಸಕರ ಗೆಲುವಿಗೆ ಅಳಿಲು ಸೇವೆ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಮುನಿರತ್ನ ಗೆಲುವಿಗೆ ಏನೆಲ್ಲ ಕಸರತ್ತು ಮಾಡಿದ್ದೇನೆ ಎಂಬುದು ನನಗಷ್ಟೇ ಗೊತ್ತು. 15 ಶಾಸಕರ ಬಗ್ಗೆ ಟಿ.ವಿ.ಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಬರುತ್ತಿದೆ. ಅವರೆಲ್ಲ ನಮ್ಮ ಕುಟುಂಬದ ಸದಸ್ಯರು. ಏನೋ ಒಂದು ಸಣ್ಣ ಕಾರಣಕ್ಕೆ ಹೋಗಿದ್ದಾರೆ ಅಷ್ಟೇ. ನಾವು ಶ್ರದ್ಧಾಂಜಲಿಯಂತಹ ಸುದ್ದಿಗಳನ್ನು ನೋಡಬೇಕೇ’ ಎಂದೂ ಅವರು ಪ್ರಶ್ನಿಸಿದರು.

ಯತ್ನಾಳ ವಿರುದ್ಧ ಮಾನನಷ್ಟ: ‘ನಾನು ವ್ಯವಹಾರದಲ್ಲಿ ತೊಡಗಿದವನು. ಗುಜರಾತ್‌ ಶಾಸಕರಿಗೆ ರಕ್ಷಣೆ ನೀಡಿದ ಕಾರಣಕ್ಕೆ ನನ್ನ ವಿರುದ್ಧ ದಾಳಿಗಳನ್ನು ಮಾಡಲಾಯಿತು. ಅವುಗಳನ್ನು ಕಾನೂನುಪ್ರಕಾರವೇ ಎದುರಿಸುತ್ತೇನೆ. ಅದಕ್ಕೆಲ್ಲ ಹೆದರುವುದಿಲ್ಲ. ನಾನು ಜೈಲು ಮಂತ್ರಿಯಾಗಿದ್ದವನು. ಜೈಲಿಗೆ ಹೋಗಲು ಹೆದರುವುದಿಲ್ಲ’ ಎಂದು ಅವರು ಸವಾಲು ಎಸೆದರು.

‘ಬಿಜೆಪಿ ಸರ್ಕಾರ ಬರಲು ನಾನು ನೆರವು ನೀಡುತ್ತಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿರುವ ವೇಳೆಯೇ ಅವರು ಇಂತಹ ಹೇಳಿಕೆ ನೀಡುವುದು ಸರಿಯೇ. ಅವರ ವಿರುದ್ಧ ₹2.04 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ’ ಎಂದು ಅವರು ಹೇಳಿದರು.

ಪಕ್ಷಾಂತರಿಗಳನ್ನು 10 ವರ್ಷ ನಿಷೇಧಿಸಿ ಎಂದಿದ್ದ ಬಿಎಸ್‌ವೈ

ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷಾಂತರ ನಿಷೇಧದ ಬಗ್ಗೆ ಮಾತನಾಡಿದ್ದರು. ರಾಜೀನಾಮೆ ನೀಡಿದ ಶಾಸಕರಿಗೆ 10 ವರ್ಷಗಳ ಕಾಲ ಚುನಾವಣೆ ನಿಲ್ಲದಂತೆ ಮಾಡುವ ಕಾನೂನು ತರಬೇಕು ಎಂದು ಹೇಳಿದ್ದರು. ಈಗ ಆ ಕಾಲ ಸನ್ನಿಹಿತವಾಗಿದೆ. ದೆಹಲಿಯಲ್ಲಿ ನಿಮ್ಮದೇ ಸರ್ಕಾರ ಇದೆ. ಕಾನೂನು ತರುವ ಕೆಲಸವನ್ನು ಮಾಡಿಸಿ ಯಡಿಯೂರಪ್ಪ ಅವರೇ.

*ಧರ್ಮರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಇದ್ದ ಹಾಗೆ ಯಡಿಯೂರಪ್ಪ ಅವರ ಛಲಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ಯಡಿಯೂರಪ್ಪ ಅವರು ಆಪರೇಷನ್‌ ಕಮಲ ಮಾಡಲು 6–7 ಸಲ ಪ್ರಯತ್ನ ಮಾಡಿದ್ದರು. ಕೊನೆಗೂ ಯಶಸ್ಸು ಸಿಕ್ಕಿ 15 ಶಾಸಕರು ಬಲೆಗೆ ಬಿದ್ದರು.

*ಮುಂಬೈಯಲ್ಲಿ ಠಿಕಾಣಿ ಹೂಡಿರುವ ಶಾಸಕರು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರು ನಾಳೆ ಮಂತ್ರಿಗಳಾಗುವುದಿಲ್ಲ. ಅವರಿಗೆ ಪಲ್ಲಕ್ಕಿ ಸಿಗುವುದಿಲ್ಲ. ವಿಶ್ವನಾಥ್ ಅವರ ಮಲ್ಲಿಗೆ ಹೂವಿನ ಕನಸು ನನಸಾಗುವುದಿಲ್ಲ. ನಮ್ಮ ಮನೆಯ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬ ಕಾರಣಕ್ಕೆ ನಮಗೆ ಹೊಟ್ಟೆ ಉರಿಯುತ್ತಿದೆ.

*ನೀವು ಕರೆದ ತಕ್ಷಣ ಬರುತ್ತೇವೆ. ನೀವು ಇಲ್ಲಿಗೆ ಬನ್ನಿ ಎಂದು ಮುಂಬೈಯಲ್ಲಿದ್ದ ಇಬ್ಬರು ಶಾಸಕರು ನನಗೆ ಹಾಗೂ ಮುಖ್ಯಮಂತ್ರಿ ಅವರಿಗೆ ಕರೆ ಮಾಡಿದ್ದರು. ಹೀಗಾಗಿ, ನಾನು ಅಲ್ಲಿಗೆ ಹೋದೆ. ಆದರೆ, ನನಗೆ ಹೋಟೆಲ್‌ ಒಳಗೆ ಹೋಗಲೂ ಬಿಡಲಿಲ್ಲ. ನಾನೇನೂ ಡಕಾಯಿತನೇ?

*ಎಂ.ಟಿ.ಬಿ.ನಾಗರಾಜ್‌ ಅವರಿಗೆ ಮೊದಲ ಬಾರಿಗೆ ಟಿಕೆಟ್‌ ಸಿಗಲು ನಾನೂ ಕಾರಣ. ಅವರಿಗೆ ನಾವೆಲ್ಲ ಮನವೊಲಿಕೆ ಮಾಡಿದ್ದೆವು. ಬಳಿಕ ಸ್ವಚ್ಛಂದವಾಗಿ ಬಿಟ್ಟಿದ್ದೆವು. ನಾನು ಮನಸ್ಸು ಮಾಡಿದ್ದರೆ ಅವರನ್ನು ಹಾಗೂ ನಾಲ್ವರು ಶಾಸಕರನ್ನು ಲಾಕ್‌ ಮಾಡಲು ಆಗುತ್ತಿರಲಿಲ್ಲವೇ. ಇನ್ನು ನನ್ನ ಹಾಗೂ ಎಂಟಿಬಿ ಅವರ ಭೇಟಿ ಚುನಾವಣಾ ರಣರಂಗದಲ್ಲಿ ಮಾತ್ರ.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT