ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದೊಳಗಿನ ತಂತ್ರಜ್ಞಾನ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವೈದ್ಯಕೀಯ ವಿಜ್ಞಾನ ಬೆಳವಣಿಗೆಯ ನಡುವೆಯೂ ರೋಗ ಗುಣಪಡಿಸಲೆಂದೇ ನೀಡುವ ಔಷಧಿ, ಚಿಕಿತ್ಸೆ ಮತ್ತಷ್ಟು ಅಡ್ಡ ಪರಿಣಾಮ ಉಂಟುಮಾಡಿರುವ ಪ್ರಕರಣಗಳ ಪ್ರಮಾಣದಲ್ಲಿ ಈಗ ಏರಿಕೆಯಾಗಿದೆ. ದೇಹಕ್ಕೆ ಯಾವುದೇ ಹಾನಿಯಾಗದಂತೆ ಸೂಕ್ತ ಚಿಕಿತ್ಸೆ ನೀಡಲು ಅನುವಾಗುವಂತೆ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆ ಮತ್ತೊಂದು ಮಜಲನ್ನು ಮುಟ್ಟಿದೆ. ಇದಕ್ಕೆ ಉದಾ ಹರಣೆ, ದೇಹದೊಳಗೆ ಅಳವಡಿಸುವ ಸೂಕ್ಷ್ಮ ಚಿಪ್ ಹಾಗೂ ಅದರ ಸಂವಹನಕ್ಕೆ ಅಲ್ಟ್ರಾಸೌಂಡ್ ಬಳಕೆ ಚಿಕಿತ್ಸಾ ವಿಧಾನದಲ್ಲಿ ಹೊಸ ಕ್ರಾಂತಿಯಾಗಿ ಗೋಚರಿಸುತ್ತಿದೆ.

ಪುಟ್ಟ ಎಲೆಕ್ಟ್ರಾನಿಕ್ ಉಪಕರಣಗಳನ್ನು ದೇಹದೊಳಗೆ ಇಳಿಸಿ, ಸೆನ್ಸರ್‌ಗಳ ಮೂಲಕ ನಿರ್ದಿಷ್ಟ ಅಂಗದ ಮಾಹಿತಿ ಪಡೆಯುವುದು, ಹಾಗೆಯೇ, ಅಗತ್ಯವಿರುವ ಭಾಗಕ್ಕೇ ಔಷಧಿ ಸೇರಿಸುವ ವಿಧಾನದಲ್ಲಿ ಹತ್ತು ಹಲವು ತೊಡಕುಗಳು ಎದುರಾಗಿದ್ದವು. ಎಲೆಕ್ಟ್ರೊಸ್ಯುಟಿಕಲ್ಸ್ ಎಂದೂ ಕರೆಯಬಹುದಾದ ಎಲೆಕ್ಟ್ರಾನಿಕ್ ಉಪಕರಣಗಳ ಪರಿಕಲ್ಪನೆಯ ಹಂತದಿಂದ ಅವುಗಳ ಅಳವಡಿಕೆಯಲ್ಲಿ ಅತಿ ಮುಖ್ಯ ಸವಾಲು ವಿದ್ಯುತ್‍ಶಕ್ತಿ ಪೂರೈಕೆ. ದೇಹದೊಳಗೆ ಸೇರಿಸಿರುವ ಚಿಕ್ಕ ಉಪಕರಣಗಳಿಗೆ ಶಕ್ತಿ ಪೂರೈಕೆಗೆ ದೊಡ್ಡ ಬ್ಯಾಟರಿಗಳನ್ನು ಬಳಸುವ ಅವಕಾಶವಿಲ್ಲ. ಸೋಂಕು ಉಂಟಾಗುವ ಕಾರಣ ವೈರ್ ಬಳಸುವಂತಿಲ್ಲ. ಈ ಸಮಸ್ಯೆಗೆ ಶ್ರವಣಾತೀತ ತರಂಗಗಳ (ಅಲ್ಟ್ರಾಸೌಂಡ್) ಬಳಕೆಯನ್ನು ಪರಿಹಾರವಾಗಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳ ತಂಡ ನಿರೂಪಿಸಿದೆ.

ಭ್ರೂಣಕ್ಕೆ ಸಂಬಂಧಿಸಿದ ಚಿತ್ರಸಹಿತ ವಿವರ ಪಡೆಯಲು ವೈದ್ಯಕೀಯ ಪರೀಕ್ಷಾ ಕೇಂದ್ರಗಳಲ್ಲಿ ಇದೇ ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತಿದೆ. ಅಲ್ಟ್ರಾಸೌಂಡ್ ತರಂಗಗಳನ್ನು ಕೇಂದ್ರೀಕರಿಸಿ ಅಂಗದೊಳಗಿನ ಕಿರಿದಾದ ಎಲೆಕ್ಟ್ರಾನಿಕ್ ಉಪಕರಣವನ್ನು ಕಾರ್ಯನಿರ್ವಹಿಸುವಂತೆ ಮಾಡಬಹುದು.

ಅಲ್ಟ್ರಾಸೌಂಡ್ ತರಂಗಗಳಿಂದ ಆ ಉಪಕರಣದ ಒಳಗೆ ಎಲೆಕ್ಟ್ರೋಮ್ಯಾಗ್ನೆಟಿಕ್ ವಲಯ ಸೃಷ್ಟಿಯಾಗಿ ನಿರ್ದಿಷ್ಟ ಕಂಪನಾಂಕ ಹೊಮ್ಮುವ ಮೂಲಕ ಮಾಹಿತಿ ರವಾನೆಯಾಗುತ್ತದೆ. ಹೀಗಾಗಿ ಪ್ರತ್ಯೇಕ ವಿದ್ಯುತ್ ಸಂಚಯ ಅಥವಾ ಶಕ್ತಿಯ ಪೂರೈಕೆ ಇಲ್ಲದೆಯೇ ಶಬ್ದ ತರಂಗಗಳಿಂದಲೇ ಎಲೆಕ್ಟ್ರಾನಿಕ್ ಉಪಕರಣ ಕಾರ್ಯನಿರ್ವಹಿಸುವ ಜತೆಗೆ ಮಾಹಿತಿಯನ್ನೂ ಒದಗಿಸುತ್ತದೆ. ಇದೇ ವ್ಯವಸ್ಥೆ ಬಳಸಿ ದೇಹದ ವಿವಿಧ ಭಾಗಗಳಲ್ಲಿ ಅಳವಡಿಸುವ ಉಪಕರಣಗಳ ಸಮೂಹದೊಂದಿಗೆ ಸಂಪರ್ಕ ಸಾಧಿಸುವುದು ಸಾಧ್ಯವಿದೆ. ದೇಹ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲು ಈ ವೈರ್‌ಲೆಸ್‌ ವ್ಯವಸ್ಥೆ ಸಹಕಾರಿಯಾಗಲಿದೆ. ದೇಹದೊಳಗಿನ ಎಲೆಕ್ಟ್ರಾನಿಕ್ ಉಪಕರಣಗಳು ಒಂದಕ್ಕೊಂದು ಸಂಪರ್ಕ ಹೊಂದುವುದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಮೂರ್ಛೆ ರೋಗಗಳನ್ನು ಅಲ್ಟ್ರಾಸೌಂಡ್ ತರಂಗಗಳ ಮೂಲಕ ಕಳುಹಿಸುವ ಸೂಕ್ತ ಸಂದೇಶದಿಂದ ನಿಯಂತ್ರಿಸಬಹುದು.

ಶಸ್ತ್ರಚಿಕಿತ್ಸೆ, ಕೀಮೋಥೆರಪಿಗೂ ಪರ್ಯಾಯವಾಗಿ ಬಳಕೆಯಾಗಬಹುದಾದ ಈ ವ್ಯವಸ್ಥೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಸ್ಟ್ಯಾನ್‍ಫೋರ್ಡ್‌ನ ಎಲೆಕ್ಟ್ರಿಕಲ್ ಎಂಜಿನಿಯರ್ ಆಮಿನ್ ಅರ್ಬಾನಿಯನ್ ಮತ್ತವರ ತಂಡವು ಇತರ ವೈದ್ಯಕೀಯ ಸಂಶೋಧಕರೊಂದಿಗೆ ಸೇರಿ ಪ್ರಾಣಿಗಳಲ್ಲಿ ಉಪಕರಣ ಅಳವಡಿಸಿ ಹೆಚ್ಚಿನ ಅಧ್ಯಯನ ನಡೆಸುತ್ತಿದೆ.

ಸಂಶೋಧನೆ ಒಂದು, ಉಪಯೋಗ ಹಲವು

ಕಾರಿನ ಚಾಸಿಸ್ ಮೇಲೆ ಅಗತ್ಯಕ್ಕೆ ತಕ್ಕಂತೆ ವಾಹನ ವಿನ್ಯಾಸ ಮಾಡಿಕೊಳ್ಳ ಬಹುದು. ಚಾಸಿಸ್ ಒಂದೇ ಆದರೂ ಅದರ ಬಳಕೆ ಹಲವು. ಹಾಗೆಯೇ ಅಲ್ಟ್ರಾಸೌಂಡ್‍ನಿಂದ ನಿರ್ವಹಿಸಬಹುದಾದ ಅಕ್ಕಿ ಕಾಳು ಗಾತ್ರದ ಎಲೆಕ್ಟ್ರಾನಿಕ್ ಉಪಕರಣದ ಉಪಯೋಗಗಳನ್ನು ಇನ್ನೂ ಕಂಡುಕೊಳ್ಳಬೇಕಿದೆ.

ಪೀಜೋಎಲೆಕ್ಟ್ರಿಸಿಟಿ ನಿಯಮದಂತೆ, ಶಬ್ದ ತರಂಗದಿಂದ ಉಂಟಾಗುವ ಒತ್ತಡವು ಉಪಕರಣದ ಒಳಗೆ ಎಲೆಕ್ಟ್ರಾನ್‍ಗಳನ್ನು ಹರಿಯುವಂತೆ ಮಾಡುತ್ತದೆ. ತರಂಗಗಳನ್ನು ಬರಮಾಡಿಕೊಳ್ಳುವ ಉಪಕರಣದ ರಿಸೀವರ್ ಭಾಗದಲ್ಲಿ ತರಂಗಗಳು ವಿದ್ಯುತ್ ಆಗಿ ಪರಿವರ್ತನೆಯಾಗುತ್ತದೆ.

ಚಿಪ್‍ನಲ್ಲಿ ನ್ಯಾನೊ ಕೆಪಾಸಿಟರ್ ಅಳವಡಿಸಿರುವುದರಿಂದ ಅತಿ ಕಡಿಮೆ ವಿದ್ಯುತ್‍ನಿಂದ ಕಾರ್ಯನಿರ್ವಹಣೆ ಸಾಧ್ಯ. ಪ್ರಸ್ತುತ 12 ಸೆಂ.ಮೀ. ಅಂತರದಿಂದ ಅಲ್ಟ್ರಾಸೌಂಡ್ ತರಂಗಗಳ ಮೂಲಕ ಶಕ್ತಿ ಪಡೆಯು ವಷ್ಟು ಉಪಕರಣಗಳು ಸಮರ್ಥವಾಗಿವೆ. ಇದರಿಂದಾಗಿ ದೇಹದ ಯಾವುದೇ ಅಂಗದ ಒಳಗೂ ಪುಟ್ಟದಾದ ಉಪಕರಣವನ್ನು ಇಟ್ಟು ಗಮನಿಸಬಹುದಾಗಿದೆ.

100 ಕೋಟಿ ಜನರಿಗೆ ಡಿಜಿಟಲ್ ಗುರುತು

ಜಗತ್ತಿನಾದ್ಯಂತ ಆರು ಜನರಲ್ಲಿ ಒಬ್ಬರು ಅಧಿಕೃತ ಗುರುತು ದಾಖಲೆ ಇಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವರನ್ನು ಡಿಜಿಟಲ್ ಗುರುತು ವ್ಯವಸ್ಥೆಯಡಿ ತರಲು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ‘ಐಡಿ2020’ ಯೋಜನೆ ರೂಪಿಸಲಾಗಿದೆ.

ಭಾರತದಲ್ಲಿ ಸಕಲ ಸೇವೆ ಹಾಗೂ ಸೌಲಭ್ಯಗಳಿಗೂ ವಿಶಿಷ್ಟ ಗುರುತಿನ ಚೀಟಿ ಜೋಡಣೆ ಕಡ್ಡಾಯದ ಪರ-ವಿರೋಧ ಚರ್ಚೆ, ಕೋರ್ಟ್ ಆದೇಶ, ಸರ್ಕಾರದ ನಿರ್ಣಯಗಳು, ಸುರಕ್ಷತಾ ಕ್ರಮಗಳ ಬಗ್ಗೆ ಎದ್ದಿರುವ ಪ್ರಶ್ನೆ ಹಾಗೂ ವೈಯಕ್ತಿಕ ಮಾಹಿತಿ ಸೋರಿಕೆ ಸಂಬಂಧಿತ ವಿಚಾರಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿವೆ. ‘ಆಧಾರ್’ ದೃಢೀಕರಣಕ್ಕೆ ಮುಖದ ಗುರುತು ಬಳಸುವ ಬಗ್ಗೆಯೂ ಪ್ರಸ್ತಾಪವಾಗಿದೆ. ಸರ್ಕಾರದ ಮಾಹಿತಿ ಪ್ರಕಾರ, ದೇಶದಲ್ಲಿ 111 ಕೋಟಿಗೂ ಹೆಚ್ಚು ಆಧಾರ್ ಗುರುತು ಚೀಟಿ ವಿತರಣೆ ಯಾಗಿದೆ. ದೇಶದ ಹೊರಗೆ, ಜಗತ್ತಿನ ಹಲವು ಭಾಗಗಳಲ್ಲಿ ಬದುಕು ದೂಡುತ್ತಿರುವ 100 ಕೋಟಿಗೂ ಅಧಿಕ ಜನರು ಕಾನೂನುಬದ್ಧ ಯಾವ ಗುರುತನ್ನೂ ಹೊಂದಿಲ್ಲ.

‘ನಾವು ನಾವೇ’ ಎಂದು ಗುರುತಿಸಿಕೊಳ್ಳಲು ಅಧಿಕೃತ ದಾಖಲೆ ಇಲ್ಲದೆ ಮಕ್ಕಳು, ಮಹಿಳೆಯರು, ನಿರಾಶ್ರಿತರು ಮತದಾನದ ಹಕ್ಕು, ಆರೋಗ್ಯ-ಶಿಕ್ಷಣ ಸೌಲಭ್ಯಗಳನ್ನು ಪಡೆಯದಂತಾಗಿದೆ. ಇದೀಗ ಅಭಿವೃದ್ಧಿ ತಂತ್ರಜ್ಞಾನ ಬಳಸಿ ಡಿಜಿಟಲ್ ಗುರುತು ನೀಡಲು 10 ಲಕ್ಷ ಡಾಲರ್ ಆರ್ಥಿಕ ನೆರವಿನ ಜೊತೆಗೆ ಗುರುತು ದಾಖಲಿಸುವ ಪ್ರಕ್ರಿಯೆಗೆ ಅಗತ್ಯವಿರುವ ತಂತ್ರಜ್ಞಾನ ಸಹಕಾರವನ್ನು ಮೈಕ್ರೋಸಾಫ್ಟ್ ಪೂರೈಸುತ್ತಿದೆ. ಅಸೆಂಚರ್ ಕೂಡ ಮೈಕ್ರೋಸಾಫ್ಟ್ ಅಝೂರ್‌ನೊಂದಿಗೆ ಕೈಜೋಡಿಸಿದೆ. ಬಯೋಮೆಟ್ರಿಕ್ ಸೇರಿ ಹಲವು ನೂತನ ಹಾಗೂ ಸರಳ ವ್ಯವಸ್ಥೆಯ ಮೂಲಕ ಜಗತ್ತಿನ 1.1 ಶತಕೋಟಿ ಜನರಿಗೆ ಡಿಜಿಟಲ್ ಗುರುತು ನೀಡುವ ಗುರಿ ಇದೆ.

ಪ್ರಾಯೋಗಿಕವಾಗಿ ಅಝೂರ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವ ಗುರುತು ಸುರಕ್ಷತಾ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಬ್ಲಾಕ್‍ಚೇನ್ ತಂತ್ರಜ್ಞಾನ ಬಳಸಲಾಗಿದ್ದು, ಇತರರು ವೈಯಕ್ತಿಕ ಮಾಹಿತಿ ಪಡೆಯುವುದನ್ನು ಬಳಕೆದಾರ ನಿಯಂತ್ರಿಸಲು ಸಾಧ್ಯವಿದೆ. ಗುರುತಿಗಾಗಿ ಪೇಪರ್, ಕಾರ್ಡ್‌ಗಳನ್ನು ಬಳಸದೆಯೇ ಸೌಲಭ್ಯ, ಸೇವೆಗಳನ್ನು ಡಿಜಿಟಲ್ ಗುರುತಿನಿಂದ ಪಡೆಯಬಹುದಾಗಿದೆ. ಇದು ಆಧಾರ್‌ಗಿಂತ ಕೊಂಚ ಭಿನ್ನ. ವಿಶ್ವಸಂಸ್ಥೆ ಈಗಾಗಲೇ ಏಷ್ಯಾ, ಆಫ್ರಿಕಾ ಖಂಡದ 29 ದೇಶಗಳ 13 ಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಬಯೋಮೆಟ್ರಿಕ್ ಗುರುತಿನ ಮೂಲಕ ನೋಂದಣಿ ಮಾಡಿಕೊಂಡಿದೆ. ಈ ವ್ಯವಸ್ಥೆಯನ್ನು 75 ರಾಷ್ಟ್ರಗಳ ನಿರಾಶ್ರಿತರ ಗುರುತಿಗಾಗಿ ಬಳಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT