ಸದನದಲ್ಲಿ ಮಹಾಭಾರತದ ಕಥಾಪ್ರಸಂಗ

7
ಕಾವೇರಿದ ಕಲಾಪದಲ್ಲಿ ಅರೆಕ್ಷಣ ನಗು

ಸದನದಲ್ಲಿ ಮಹಾಭಾರತದ ಕಥಾಪ್ರಸಂಗ

Published:
Updated:

ಬೆಂಗಳೂರು: ‘ಕರ್ಣನನ್ನು ಅಂಗ ರಾಜ್ಯದ ರಾಜನನ್ನಾಗಿ ಮಾಡಿದ ವಿಚಾರದಲ್ಲಿ ದುರ್ಯೋಧನ ಒಬ್ಬ ಹೀರೊ. ಅದೇ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗದಲ್ಲಿ ವಿಲನ್‌. ಎಲ್ಲ ವಿಷಯದಲ್ಲೂ ಆತನನ್ನು ವಿಲನ್‌ನಂತೆ ಬಿಂಬಿಸೋಕೆ ಹೋಗಬೇಡಿ’

–ವಿಧಾನಸಭೆಯಲ್ಲಿ ಸೋಮವಾರ ಬಿಜೆಪಿ ಸದಸ್ಯರಿಗೆ ಸಭಾಧ್ಯಕ್ಷ ಕೆ.ಆರ್‌. ರಮೇಶಕುಮಾರ್‌ ಹೇಳಿದ ಕಿವಿಮಾತು ಇದು. ಸಭಾಧ್ಯಕ್ಷರು ಹೇಳಿದ ಮಹಾಭಾರತದ ಕಥಾ ಪ್ರಸಂಗ ಕಾವೇರಿದ ಸದನದಲ್ಲಿ ಅರೆಕ್ಷಣ ನಗು ಉಕ್ಕುವಂತೆ ಮಾಡಿತು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕರ್ಣನನ್ನು ಸಾಂದರ್ಭಿಕ ಶಿಶುವೆಂದು ಕರೆದು ಆತನ ಕಥೆ ಹೇಳಿದರು.

‘ಋಷಿ ಕೊಟ್ಟ ವರದಿಂದ ಕರ್ಣನನ್ನು ಪಡೆದ ಆತನ ತಾಯಿ, ಸಮಾಜಕ್ಕೆ ಅಂಜಿ ಆತನನ್ನು ನದಿಗೆ ಬಿಡುತ್ತಾಳೆ. ಬೆಸ್ತರ ಮನೆಯಲ್ಲಿ ಬೆಳೆದ ಆತನಿಗೆ ಮುಂದೆ ದುರ್ಯೋಧನ ರಾಜ್ಯವನ್ನೇ ನೀಡುತ್ತಾನೆ. ಕರ್ಣನೊಬ್ಬ ಸಾಂದರ್ಭಿಕ ಶಿಶು. ನಾನು ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿದ್ದು ಕೂಡ ಇದೇ ಅರ್ಥದಲ್ಲಿ’ ಎಂದು ವ್ಯಾಖ್ಯಾನಿಸಿದರು.

ಆಗ ಬಿಜೆಪಿಯ ವೀರಣ್ಣ ಚರಂತಿಮಠ, ‘ಹಾಗಾದರೆ ಕಾಂಗ್ರೆಸ್‌ ಪಕ್ಷವನ್ನು ದುರ್ಯೋಧನನಿಗೆ ಹೋಲಿಕೆ ಮಾಡುತ್ತಿದ್ದೀರಾ’ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ‘ಮಹಾಭಾರತ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ದುರ್ಯೋಧನನು ಕರ್ಣನಿಗೆ ಅಂಗ ರಾಜ್ಯವನ್ನು ಕೊಟ್ಟ ಪ್ರಸಂಗವನ್ನು ಇಡೀ ಮನುಕುಲವೇ ಶ್ಲಾಘಿಸಬೇಕು’ ಎಂದು ವಿಶ್ಲೇಷಿಸಿದರು.

‘ಕ್ಷತ್ರಿಯನಲ್ಲ ಎಂಬ ಕಾರಣಕ್ಕೆ ಕರ್ಣನಿಗೆ ದ್ರೋಣಾಚಾರ್ಯರು ಅವಕಾಶ ನಿರಾಕರಿಸಿದಾಗ, ಕರ್ಣನು ಕ್ಷತ್ರಿಯನಾಗುವುದು ಹೇಗೆ ಎಂದು ದುರ್ಯೋಧನ ಪ್ರಶ್ನಿಸುತ್ತಾನೆ. ಆತ ರಾಜನಾದರೆ ಮಾತ್ರ ಅದು ಸಾಧ್ಯ ಎಂದು ಆಚಾರ್ಯರು ಮಾರುತ್ತರ ನೀಡುತ್ತಾರೆ. ಮರು ಮಾತನಾಡದೆ ದುರ್ಯೋಧನ, ಕರ್ಣನಿಗೆ ಅಂಗ ರಾಜ್ಯದ ಪಟ್ಟ ಕಟ್ಟುತ್ತಾನೆ’ ಎಂದು ಮೇಷ್ಟ್ರು, ಮಕ್ಕಳಿಗೆ ಹೇಳುವಂತೆ ಕಥೆ ಹೇಳಿದರು.

‘ಧರ್ಮರಾಯನು ಒಳ್ಳೆಯವನಾದರೂ ಪತ್ನಿಯನ್ನು ಜೂಜಿಗಾಗಿ ಒತ್ತೆ ಇಟ್ಟವನು ಎಂಬುದನ್ನು ಮರೆಯುವಂತಿಲ್ಲ’ ಎಂದು ನೆನಪಿಸಿಕೊಟ್ಟರು. ಆಗ ಕಾಂಗ್ರೆಸ್‌ನ ಮುನಿರತ್ನ, ‘ನನ್ನ ಮುಂದಿನ ಚಿತ್ರದ ಕಥೆಯನ್ನೆಲ್ಲ ನೀವು ಬಹಿರಂಗ ಮಾಡಿದ್ದೀರಿ’ ಎಂದು ಚರ್ಚೆಗೆ ಇನ್ನಷ್ಟು ರಂಗು ತುಂಬಿದರು. ‘ಸಭಾಧ್ಯಕ್ಷರಿಂದ ನಿಮ್ಮ ಚಿತ್ರಕ್ಕೆ ಒಳ್ಳೆಯ ಪ್ರಚಾರ ಸಿಗುತ್ತದೆ ಬಿಡಿ’ ಎಂದು ಮುಖ್ಯಮಂತ್ರಿ ನಕ್ಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !