ವಾಜಪೇಯಿ ಶತ್ರುವನ್ನೂ ಟೀಕಿಸಿದವರಲ್ಲ: ಎಚ್‌.ಡಿ.ದೇವೇಗೌಡ

7

ವಾಜಪೇಯಿ ಶತ್ರುವನ್ನೂ ಟೀಕಿಸಿದವರಲ್ಲ: ಎಚ್‌.ಡಿ.ದೇವೇಗೌಡ

Published:
Updated:

ಬೆಂಗಳೂರು: ‘ರಾಜಕೀಯ ಜೀವನದಲ್ಲಿ ವಾಜಪೇಯಿ ಅವರು ಶತ್ರುವನ್ನೂ ಕಟುವಾದ ಶಬ್ಧದಿಂದ ಟೀಕಿಸಿದವರಲ್ಲ. ಅವರೊಬ್ಬ ಶ್ರೇಷ್ಠ ನಾಯಕ, ಸಂಸದೀಯ ಪಟು, ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮೃತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಂತಾಪ ಸೂಚಿಸಿದ್ದಾರೆ. 

‘ನಾನು ಪ್ರಧಾನಿಯಾಗಿ ರಾಜೀನಾಮೆ ಕೊಡುವ ವೇಳೆ, ಅಧಿಕಾರ ಉಳಿಸಿಕೊಡುತ್ತೇನೆ ಎಂದು ದೂರವಾಣಿ ಮೂಲಕ ಹೇಳಿದ್ದರು’ ಎಂದು ಹಳೆಯ ನೆನಪನ್ನು ಪತ್ರಿಕಾ ಪ್ರಕಟಣೆಯಲ್ಲಿ ನೆನಪಿಸಿಕೊಂಡಿದ್ದಾರೆ. 

‘ಪಾಕಿಸ್ತಾನದೊಂದಿಗೆ ಸಂಬಂಧ ಸುಧಾರಿಸಲು ಲಾಹೋರ್‌ಗೆ ಬಸ್ ಯಾತ್ರೆ ಮಾಡಿದ್ದರು. ಪಾಕ್‌ ಅಧ್ಯಕ್ಷ ಮುಷ್ರಫ್‌ ಅವರನ್ನು ಭಾರತಕ್ಕೆ ಕರೆಸಿ ಎಲ್ಲ ಸಂಧಾನ ಪ್ರಯತ್ನ ಮಾಡಿದ್ದರು. ಆದರೆ ಸಫಲವಾಗಲಿಲ್ಲ. ಶಾಂತೀಯತೆ ಕಾಪಾಡುವ ಪ್ರಯತ್ನದ ಜತೆಗೆ ನಮ್ಮ ಸೈನಿಕರ ಸಾಮರ್ಥ್ಯವನ್ನೂ ತೋರಿಸಿಕೊಟ್ಟರು’ ಎಂದು ಶ್ಲಾಘಿಸಿದ್ದಾರೆ. 

‘ಗೋದ್ರಾ ಪ್ರಕರಣ ಆದಾಗ, ರಾಜ್ಯ, ರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂದು, ಗುಜರಾತ್‌ನ ಸಿಎಂ ಆಗಿದ್ದ ಮೋದಿ ಅವರಿಗೆ ರಾಜಧರ್ಮ ಪಾಲನೆ ಪಾಠ ಮಾಡಿದ್ದರು. ಅವರದೇ ಪಕ್ಷದಿಂದ ಮೋದಿ ಸಿಎಂ ಆಗಿದ್ದರೂ, ರಾಜಧರ್ಮದ ಮಾತು ಹೇಳಿದ್ದು ಅವರ ವ್ಯಕ್ತಿತ್ವ ಎಂತಹದ್ದು ಎಂದು ತೋರಿಸುತ್ತದೆ’ ಎಂದಿದ್ದಾರೆ. 

‘ರಾಜಕೀಯದಲ್ಲಿ ಯಾವುದೇ ಧರ್ಮ,ಜಾತಿಗೆ ನೋವು ಉಂಟುಮಾಡಬಾರದು ಎನ್ನುವುದಕ್ಕೆ ಗೋದ್ರಾ ಪ್ರಕರಣದಲ್ಲಿ ಅವರು ನಡೆದುಕೊಂಡ ರೀತಿಯೇ ಸಾಕ್ಷಿ’ ಎಂದು ಸ್ಮರಿಸಿದ್ದಾರೆ. 

‘ಅವರು ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿ. ರಾಮಮಂದಿರ ಕಟ್ಟಲು ಜನ ಕಳುಹಿಸಿಕೊಟ್ಟ ಶಿಲೆಗಳನ್ನು ವಾಜಪೇಯಿ ಅವರೇ ತೆಗೆದುಕೊಳ್ಳಬೇಕು ಎಂದು ವಿಎಚ್‌ಪಿ ಮುಖಂಡರು ಪಟ್ಟು ಹಿಡಿದಿದ್ದರು. ಆದರೆ, ಪ್ರಧಾನಿಯಾಗಿದ್ದಾಗ ಅವರು ಹೋಗದೇ ಅಧಿಕಾರಿಯನ್ನು ಕಳುಹಿಸಿದ್ದರು’ ಎಂದು ಪ್ರಸಂಗವೊಂದನ್ನು ಉಲ್ಲೇಖಿಸಿದ್ದಾರೆ. 

‘ನಾಳೆ ದೆಹಲಿಗೆ ಹೋಗುತ್ತೇನೆ. ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸುತ್ತೇನೆ’ ಎಂದು ದೇವೇಗೌಡರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 25

  Happy
 • 2

  Amused
 • 1

  Sad
 • 3

  Frustrated
 • 1

  Angry

Comments:

0 comments

Write the first review for this !