‘ಫೋನ್‌ ಕರೆಗೆ ರಾಜೀನಾಮೆ ವಾಪಸ್ ಪಡೆದೆ’

7

‘ಫೋನ್‌ ಕರೆಗೆ ರಾಜೀನಾಮೆ ವಾಪಸ್ ಪಡೆದೆ’

Published:
Updated:
Deccan Herald

ಮೈಸೂರು: ‘ನಿಮ್ಮ ಜತೆ ತುರ್ತಾಗಿ ಮಾತನಾಡಬೇಕು. ನೀವು ಎಲ್ಲಿದ್ದೀರಿ? ನೀವು ನೀಡಿರುವ (ಸಚಿವ ಸ್ಥಾನಕ್ಕೆ) ರಾಜೀನಾಮೆ ವಾಪಸ್ ಪಡೆದುಕೊಳ್ಳಬೇಕು’ ಎಂದು ಅಟಲ್ ಬಿಹಾರಿ ವಾಜಪೇಯಿ ದೂರವಾಣಿ ಕರೆ ಮಾಡಿ ವಿನಂತಿಸಿದಾಗ ನನಗೆ ಮರು ಮಾತನಾಡಲು ಬಾಯಿ ಬರಲಿಲ್ಲ’

–ಹೀಗೆ ವಾಜಪೇಯಿ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡವರು ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್.

‘ವಾಜಪೇಯಿ ಸಚಿವ ಸಂಪುಟದಲ್ಲಿ ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವನಾಗಿದ್ದೆ. ತೆಹಲ್ಕಾ ವಿಚಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪಕ್ಷದ ನಿರ್ಧಾರದಂತೆ ಜೆಡಿಯುನ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದೆವು. ತಕ್ಷಣ ಕರೆಮಾಡಿ ಮನವೊಲಿಸಿದರು. ಅವರ ಮಾತಿಗೆ ಕಟ್ಟುಬಿದ್ದು ರಾಜೀನಾಮೆ ವಾಪಸ್ ಪಡೆಯಬೇಕಾಯಿತು’ ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದರು.

‘ಆತ್ಮೀಯತೆ ಬೆಳೆಯಲು ಮತ್ತೊಂದು ಸಂದರ್ಭ ಒದಗಿಬಂದಿತ್ತು. ಪ್ರಧಾನಿಯಾಗಿದ್ದ ಸಮಯದಲ್ಲಿ ಅವರ ನಿವಾಸದಲ್ಲಿ ಸಂಜೆ ವೇಳೆ ಸಚಿವ ಸಂಪುಟದ ಸಹೋದ್ಯೋಗಿಗಳು, ಇತರ ಪ್ರಮುಖರ ಜತೆಗೆ ಚರ್ಚಿಸುತ್ತಿದ್ದರು. ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡುತ್ತಿದ್ದರು.

ಹೀಗೆ ಒಂದು ದಿನ ಸಭೆ ಮುಗಿಸಿ ನಾನು ಹೊರಡಲು ಸಿದ್ಧನಾದೆ. ವಿಮಾನಕ್ಕೆ ಹೋಗಲು ಸಮಯ ಸಮೀಪಿಸುತ್ತಿದೆ. ಹೊರಡುತ್ತೇನೆ ಎಂದು ಹೇಳಿದೆ. ಮತ್ತೊಂದು ವಿಮಾನಕ್ಕೆ ಹೋಗು ಎಂದು ಹೇಳಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಆತ್ಮೀಯವಾಗಿ ಮಾತನಾಡಿಸಿದರು. ನನ್ನ ಹಿನ್ನೆಲೆ, ಬೆಳೆದುಬಂದ ದಾರಿ ಮತ್ತಿತರ ವಿಚಾರಗಳನ್ನು ಕೇಳಿ ತಿಳಿದುಕೊಂಡರು. ನಾನು ಸಹ ಅವರ ಜತೆ ಬೆರೆತು ನನ್ನ ಹೋರಾಟದ ಬದುಕು, ಜೀವನ ಪಯಣವನ್ನು ತಿಳಿಸಿದೆ. ಎಲ್ಲವನ್ನೂ ಸಾವಧಾನದಿಂದ ಕೇಳಿ, ಕೊನೆಗೆ ಒಳ್ಳೆಯದಾಗಲಿ ಹೋಗಿ ಬಾ ಎಂದು ಬೆನ್ನುತಟ್ಟಿದರು. ಅದೊಂದು ಮರೆಯಲಾಗದ ಕ್ಷಣ’.

ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ವಾಜಪೇಯಿ ಜತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತ್ತು. ತೆಹಲ್ಕಾ ಹಗರಣದ ವಿರುದ್ಧ ನಡೆದ ಸಭೆಯಲ್ಲಿ ನಾನೂ ಭಾಷಣ ಮಾಡಿದ್ದೆ. ನನ್ನ ಮಾತು ಕೇಳಿ ಬೇಷ್‌ ಎಂದಿದ್ದರು.

ವಾಜಪೇಯಿ ವಿರೋಧ ಪಕ್ಷದಲ್ಲಿದ್ದಾಗ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು. ಆಗ ನಾನೂ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಇದು ಅವರ ಜತೆಗಿನ ಮೊದಲ ಅನುಭವ. ವಿದ್ಯಾರ್ಥಿಯಾಗಿದ್ದಾಗಲೇ ಅವರ ಅಭಿಮಾನಿಯಾಗಿದ್ದೆ. ಅವರ ಜತೆ ತೊಡಗಿಸಿಕೊಂಡ ನಂತರವಂತೂ ಅಭಿಮಾನ ಮತ್ತಷ್ಟು ಹೆಚ್ಚಾಯಿತು. ದಿನ ಕಳೆದಂತೆ ಅವರ ಮೇಲಿನ ಪ್ರೀತಿ ಬೆಟ್ಟದಷ್ಟು ಬೆಳೆಯಿತು. ಈ ದೇಶದ ಪ್ರತಿಯೊಬ್ಬರೂ ಅವರನ್ನು ಪ್ರೀತಿಸುತ್ತಾರೆ’ ಎಂದು ಸ್ಮರಿಸಿಕೊಂಡರು.

‘1980ರಲ್ಲಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿ ಹೋಗಿದ್ದೆ. ಆಗ ವಾಜಪೇಯಿ ಸಹ ಸಂಸದರಾಗಿದ್ದರು. 1980ರಿಂದ ನಾಲ್ಕು ಬಾರಿ ಸಂಸದನಾಗಿದ್ದೆ. ಅಷ್ಟು ಸಮಯ ಅವರನ್ನು ದೆಹಲಿಯಲ್ಲಿ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು.

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರೂ ಉತ್ತರ ಭಾರತದಲ್ಲಿ ವಾಜಪೇಯಿ ಹೆಚ್ಚು ಜನಪ್ರಿಯರಾಗಿದ್ದರು. ಇಬ್ಬರ ಕಾರ್ಯಕ್ರಮ, ಸಭೆಗಳಿಗೆ ಲಕ್ಷಾಂತರ ಜನರು ಬರುತ್ತಿದ್ದರು. ಇಂದಿರಾ ಗಾಂಧಿ ಹೇಗಿದ್ದಾರೆ ಎಂದು ನೋಡಲು ಅವರ ಸಭೆಗೆ ಜನರು ಹೋದರೆ, ನಾನು ಏನು ಹೇಳುತ್ತೇನೆ, ಯಾವ ವಿಚಾರ ಮಾತನಾಡುತ್ತೇನೆಂದು ತಿಳಿದುಕೊಳ್ಳಲು ಬರುತ್ತಾರೆ. ಇದೇ ಅವರಿಗೂ, ನನಗೂ ಇರುವ ವ್ಯತ್ಯಾಸ ಎಂದು ಆಗಾಗ ಹೇಳುತ್ತಿದ್ದರು’ ಎಂದು ಹಿಂದಿನ ನೆನಪು ಬಿಚ್ಚಿಟ್ಟರು.

ಆಗ್ರಾದಲ್ಲಿ ಭಾರತ– ಪಾಕಿಸ್ತಾನ ಮುಖಂಡರ ನಡುವೆ ನಡೆದ ಸಭೆಯಲ್ಲಿ ಒಂದು ತಪ್ಪು ನಿರ್ಧಾರ ಕೈಗೊಂಡಿದ್ದರು. ಸ್ವಲ್ಪ ಮಟ್ಟಿಗೆ ಆ ದೇಶದ ಪರವಾದ ನಿಲುವು ಇರಬೇಕು. ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಗೊತ್ತಾದ ತಕ್ಷಣ ಎಲ್.ಕೆ.ಅಡ್ವಾನಿ ಜತೆ ಚರ್ಚಿಸಿ ತಮ್ಮ ನಿಲುವು ಪ್ರಕಟಿಸುವ ಮೂಲಕ ವಿವಾದದಿಂದ ಪಾರಾದರು. ಆ ನಿರ್ಧಾರ ಈಗ ನೆನಪಿಗೆ ಬರುತ್ತಿಲ್ಲ. ಆದರೆ, ಎಂತಹ ಸಂದಿಗ್ಧ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ವಿವಾದವನ್ನು ಹೇಗೆ ತಣ್ಣಗೆ ಮಾಡಬೇಕು ಎಂಬ ಜಾಣ್ಮೆ ತೋರುತ್ತಿದ್ದರು.

ಪ್ರಧಾನಿಯಾಗಿದ್ದ ಸಮಯದಲ್ಲಿ ಎಂದೂ ಏಕವ್ಯಕ್ತಿ ನಿರ್ಧಾರ ಇರುತ್ತಿರಲಿಲ್ಲ. ಮೊದಲಿಗೆ ಅಡ್ವಾನಿ ಸಲಹೆ ಪಡೆದುಕೊಳ್ಳುತ್ತಿದ್ದರು. ನಂತರ ಸಚಿವ ಸಂಪುಟದಲ್ಲಿ ಚರ್ಚಿಸುತ್ತಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದರು. ಆಡಳಿತ– ವಿರೋಧ ಪಕ್ಷದ ಎಲ್ಲೇ ಇದ್ದರೂ ಅಜಾತಶತ್ರುವಾಗಿದ್ದರು. ವಿರೋಧ ಪಕ್ಷದಲ್ಲಿ ಇದ್ದಾಗ ಅವರು ಸಂಸತ್‌ನಲ್ಲಿ ಮಾತನಾಡುತ್ತಾರೆ ಎಂದರೆ ಹೊರಗಿದ್ದ ಸದಸ್ಯರೂ ಸಭೆಗೆ ಹಾಜರಾಗುತ್ತಿದ್ದರು. ಅವರ ಮಾತು ಅಷ್ಟೊಂದು ಮೋಡಿಮಾಡಿತ್ತು. ನಾನೂ ಅಷ್ಟೇ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ ಎಂದು ನೆನಪಿಸಿಕೊಂಡರು.

ಬರಹ ಇಷ್ಟವಾಯಿತೆ?

 • 17

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !