ಮಂಗಳವಾರ, ನವೆಂಬರ್ 19, 2019
23 °C
ಹಣ ಕಳೆದುಕೊಂಡ ವೃದ್ಧನಿಂದ ದೂರು

ಕೆ.ಆರ್‌. ಪುರ: ಎಟಿಎಂ ಕಾರ್ಡ್ ಬದಲಾಯಿಸಿ ₹1.20 ಲಕ್ಷ ಡ್ರಾ

Published:
Updated:

ಬೆಂಗಳೂರು: ಎಟಿಎಂ ಘಟಕಕ್ಕೆ ಹೋಗಿದ್ದ ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು ಕಾರ್ಡ್‌ ಬದಲಾಯಿಸಿದ್ದ ಅಪರಿಚಿತನೊಬ್ಬ, ಅವರ ಬ್ಯಾಂಕ್ ಖಾತೆಯಿಂದ ₹ 1.20 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ.

ಆ ಸಂಬಂಧ ಮೋಹನ್ (63) ಎಂಬುವರು ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 35 ವರ್ಷದ ಅಪರಿಚಿತನ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.

‘ಹಣ ಡ್ರಾ ಮಾಡಲು ಇದೇ 8ರಂದು ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಆನಂದಪುರದ ಎಸ್‌ಬಿಐ ಬ್ಯಾಂಕ್‌ ಎಟಿಎಂ ಘಟಕಕ್ಕೆ ಹೋಗಿದ್ದೆ. ಯಂತ್ರದಿಂದ ಹಣ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸಹಾಯಕ್ಕೆ ಬಂದಿದ್ದ ಅಪರಿಚಿತ, ನನ್ನ ಎಟಿಎಂ ಪಡೆದು ₹ 5,000 ತೆಗೆಸಿಕೊಟ್ಟಿದ್ದ. ನಂತರ, ಕಾರ್ಡ್‌ ಅನ್ನು ನನ್ನ ಕೈಗಿಟ್ಟು ಹೊರಟು ಹೋಗಿದ್ದ. ನಾನು ಮನೆಗೆ ಬಂದಿದ್ದೆ’ ಎಂದು ಮೋಹನ್ ದೂರಿನಲ್ಲಿ ತಿಳಿಸಿದ್ದಾರೆ.

‘ಇದೇ 11ರಂದು ಪುನಃ ಹಣ ಪಡೆಯಲು ಎಟಿಎಂ ಘಟಕಕ್ಕೆ ಹೋಗಿದ್ದೆ. ಎಷ್ಟೇ ಪ್ರಯತ್ನಿಸಿದರೂ ಹಣ ಬರಲಿಲ್ಲ. ಆ ಬಗ್ಗೆ ಬ್ಯಾಂಕ್‌ನವರನ್ನು ವಿಚಾರಿಸಿದಾಗ, ‘ನಿಮ್ಮ ಖಾತೆಯಲ್ಲಿ ಹಣವಿಲ್ಲ. ಈ ಹಿಂದೆಯೇ ಹಂತ ಹಂತವಾಗಿ ₹1.20 ಲಕ್ಷ ಡ್ರಾ ಮಾಡಿಕೊಳ್ಳಲಾಗಿದೆ’ ಎಂದಿದ್ದರು. ಅವಾಗಲೇ ಅಪರಿಚಿತನ ಕೃತ್ಯ ಗಮನಕ್ಕೆ ಬಂತು’ ಎಂದಿದ್ದಾರೆ.

‘ಸಹಾಯ ಮಾಡುವ ನೆಪದಲ್ಲಿ ಅಪರಿಚಿತ, ನನ್ನ ಎಟಿಎಂ ಕಾರ್ಡ್‌ ಅನ್ನು ತನ್ನ ಬಳಿಯೇ ಇಟ್ಟುಕೊಂಡು ಬೇರೊಂದು ನಕಲಿ ಕಾರ್ಡ್‌ ಕೊಟ್ಟಿದ್ದಾನೆ. ಮೂಲ ಕಾರ್ಡ್‌ನಿಂದ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ. ಆತನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ಮೋಹನ್ ಕೋರಿದ್ದಾರೆ.

ಪ್ರತಿಕ್ರಿಯಿಸಿ (+)