ಅಣು ವಿದ್ಯುತ್ ಎಂದಿದ್ದರೂ ಅಪಾಯವೇ: ನಾಗೇಶ ಹೆಗಡೆ ಅಭಿಪ್ರಾಯ

7
ಒಕ್ಕೊರಲಿನಿಂದ ಘಟಕ ವಿಸ್ತರಣೆ ವಿರೋಧಿಸಲು ಕರೆ

ಅಣು ವಿದ್ಯುತ್ ಎಂದಿದ್ದರೂ ಅಪಾಯವೇ: ನಾಗೇಶ ಹೆಗಡೆ ಅಭಿಪ್ರಾಯ

Published:
Updated:
Deccan Herald

ಶಿರಸಿ: ಜಗತ್ತಿನ ಯಾವುದೇ ಭಾಗದಲ್ಲಿ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಅಣು ಸ್ಥಾವರ ಕಟ್ಟಿಲ್ಲ. ಆದರೆ, ಪಶ್ಚಿಮಘಟ್ಟ ವ್ಯಾಪ್ತಿಯ ಕೈಗಾದಲ್ಲಿ ಮಾತ್ರ ಲಂಗು ಲಗಾಮಿಲ್ಲದೇ ಒಂದರ ನಂತರ ಮತ್ತೊಂದು ಘಟಕ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಇದು ಅನಾಹುತ ಮೈಮೇಲೆ ಎಳೆದುಕೊಂಡಂತೆ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಕಳವಳ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿಯೇ ಅತ್ಯಂತ ಸೂಕ್ಷ್ಮ ಪ್ರದೇಶ ಉತ್ತರ ಕನ್ನಡ. ಈ ಜಿಲ್ಲೆಯಲ್ಲಿ ಈಗಾಗಲೇ ಸೀಬರ್ಡ್‌ ನೌಕಾನೆಲೆ, ಐದಾರು ಜಲವಿದ್ಯುತ್ ಅಣೆಕಟ್ಟುಗಳು ನಿರ್ಮಾಣವಾಗಿವೆ. ಕೈಗಾದಲ್ಲಿ ಅಣು ಸ್ಥಾವರದ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದೊಮ್ಮೆ ಕಾಳಿ ನದಿ ನೀರು ಉಕ್ಕಿದರೆ ಕೈಗಾದೊಳಗೆ ಹೋಗಿ ದೊಡ್ಡ ಜಲಮಾಲಿನ್ಯ ಸೃಷ್ಟಿಯಾಗುತ್ತದೆ. ಕೈಗಾ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಅಣು ಸ್ಥಾವರ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ. ಟಾಟಾ ಮೆಮೋರಿಯಲ್ ಆಸ್ಪತ್ರೆಯವರು ಸಮೀಕ್ಷೆ ನಡೆಸಿರುವ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಕೈಗಾ ಸುತ್ತಲಿನ ಜನರ ಆರೋಗ್ಯದ ಸ್ಥಿತಿಗತಿಯ ಸಮೀಕ್ಷೆ ನಡೆಸಿ, ಬಹಿರಂಗಪಡಿಸಬೇಕು ಎಂದರು.

ಕೈಗಾದಲ್ಲಿ ವಿದ್ಯುತ್ ಉತ್ಪಾದನೆಯ ವಿಶ್ವ ದಾಖಲೆಯಾದ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಅಹವಾಲು ಸಭೆ ನಡೆಸುತ್ತಿರುವುದು ಕುತೂಹಲ ತಂದಿದೆ. ಕೈಗಾ ಘಟಕದಲ್ಲಿ ನೀರಿನ ಹರಿವು, ಗುಣಲಕ್ಷಣ, ಅರಣ್ಯ ಸರ್ವೆ ಜತೆಗೆ ಜನರ ಆರೋಗ್ಯ ಪರಿಸ್ಥಿತಿಯ ಅಧ್ಯಯನ ಆಗಲೇಬೇಕು. ಅಣುವಿಕಿರಣ ಯಾವಾಗಲೂ ಅಪಾಯವೇ ಆಗಿದ್ದು, ಸರ್ಕಾರ ಪರ್ಯಾಯ ವಿದ್ಯುತ್ ಮೂಲದ ಬಗ್ಗೆ ಚಿಂತನೆ ನಡೆಸಿದರೆ ಪರಿಸರ ರಕ್ಷಣೆ ಆಗುತ್ತದೆ ಎಂದರು.

ವೃಕ್ಷಲಕ್ಷ ಆಂದೋಲನದ ಅನಂತ ಅಶೀಸರ ಮಾತನಾಡಿ, ‘ಎರಡು ವರ್ಷದಿಂದ ಕೈಗಾ 5 ಮತ್ತು 6ನೇ ಘಟಕ ಸ್ಥಾಪನೆಗೆ ವಿರೋಧಿಸುತ್ತ ಬಂದಿದ್ದೇವೆ. ಜಿಲ್ಲೆಯ ವಿವಿಧಡೆ ಸಭೆ ನಡೆಸಿ, ಜನಜಾಗೃತಿ ಮಾಡಲಾಗಿದೆ. ಸರ್ಕಾರ ಕರೆದಿರುವ ಅಹವಾಲು ಆಲಿಕೆ ಸಭೆಯಲ್ಲಿ ಹೆಚ್ಚು ಜನರು ಭಾಗವಹಿಸಿ ವಿರೋಧ ವ್ಯಕ್ತಪಡಿಸಬೇಕು’ ಎಂದರು. ಪ್ರಮುಖರಾದ ಪ್ರಭಾಕರ ಭಟ್ಟ, ಕೇಶವ ಕೊರ್ಸೆ, ರವೀಂದ್ರ ನಾಯ್ಕ, ಚಂದ್ರು ದೇವಾಡಿಗ ಉಪಸ್ಥಿತರಿದ್ದರು. ನಂತರ ಸ್ಥಳೀಯರೊಂದಿಗೆ ಸಂವಾದ ನಡೆಯಿತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !