ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮೇಲೆ ಆಡಿಯೊ ‘ಬಾಂಬ್’!

ಬಜೆಟ್‌ ಮಂಡನೆಗೆ ಮುನ್ನ ರಾಜಕೀಯ ಜಿದ್ದಾಜಿದ್ದಿ l ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ: ಸಿ.ಎಂ.
Last Updated 8 ಫೆಬ್ರುವರಿ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಇಪ್ಪತ್ತೈದು ದಿನಗಳಿಂದ ರಾಜಕೀಯ ತಾರಾಮಾರಿಗೆ ಕಾರಣವಾಗಿರುವ ಸರ್ಕಾರ ಪತನದ ಗುರಿಯಿಟ್ಟು ಬಿಜೆಪಿ ನಡೆಸಿದ ‘ಆಪರೇಷನ್‌’ಗೆ ಪ್ರತಿಯಾಗಿ ಆಡಿಯೊ ‘ಬಾಂಬ್‌’ ಎಸೆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಮಲ ಪಕ್ಷದ ನಾಯಕರು ಪತರಗುಟ್ಟಿ ಹೋಗುವಂತೆ ಮಾಡಿದರು.

ಬಜೆಟ್ ಮಂಡನೆ ಮಾಡಲಿಕ್ಕೆ ಬಿಡುವುದಿಲ್ಲ; ಅತೃಪ್ತ ಕಾಂಗ್ರೆಸ್‌–ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರಕ್ಕೆ ‘ಆಘಾತ’ ಕೊಡುತ್ತೇವೆ ಎಂಬ ಉಮೇದಿನಲ್ಲಿದ್ದ ಬಿಜೆಪಿ ನಾಯಕರು, ತಮ್ಮ ಹಳೆಯ ಕಾಲದ ‘ಗೆಳೆಯ’ ಬಜೆಟ್‌ ಮಂಡನೆಗೆ ಮುನ್ನ ಬಿಟ್ಟ ಬಾಣದಿಂದ ಕಂಗಾಲಾಗಿ ಹೋದರು. ಬಜೆಟ್‌ಗೆ ಅಡ್ಡಿ ಪಡಿಸಲು ಪ್ರತಿಭಟನೆ ಮಾಡುವುದಾಗಿ ಘೋಷಿಸಿದ್ದ ಕಮಲ ಪಾಳಯದ ನಾಯಕರು, ಬಜೆಟ್‌ ಮೇಲಿನ ಚರ್ಚೆಗೆ ಅವಕಾಶ ಸಾಲದು;ಮೂರು ದಿನ ಅವಧಿ ವಿಸ್ತರಿಸಿ ಎಂಬ ಬೇಡಿಕೆ ಮಂಡಿಸಲು ತಯಾರಾಗಬೇಕಾದ ಸ್ಥಿತಿಯೂ ನಿರ್ಮಾಣವಾಗಿದ್ದು ಶುಕ್ರವಾರದ ತಿರುವು.

ಇದರ ಬೆನ್ನಲ್ಲೇ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ‘ಗೂಡಿ’ನಲ್ಲಿ ಸೇರಿಕೊಂಡಿದ್ದಾರೆ ಎನ್ನಲಾಗಿರುವ ತಮ್ಮ ಪಕ್ಷದ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ. ನಾಗೇಂದ್ರ, ಉಮೇಶ ಜಾಧವ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ಅನರ್ಹಗೊಳಿಸಲು ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇವೆ ಎಂದು ಘೋಷಿಸಿ, ಬಂಡೆದ್ದಿರುವ ಶಾಸಕರನ್ನು ತೆಪ್ಪಗಾಗಿಸುವ ದಾರಿಯಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟರು.

ಶುಕ್ರವಾರ ನಡೆದಿದ್ದೇನು:ಬಜೆಟ್‌ ಮಂಡನೆಯಾಗುವವರೆಗೆ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ಶಪಥ ಮಾಡಿದಂತಿದ್ದ ಕುಮಾರಸ್ವಾಮಿ, ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಮಾಧ್ಯಮಗೋಷ್ಠಿ ನಿರ್ಧಾರ ಪ್ರಕಟಿಸಿದರು. ಬಿಜೆಪಿ ನಾಯಕರ ತಂತ್ರಗಾರಿಕೆಯ ಆಡಿಯೊ ಬಿಡುಗಡೆ, ಕೆಲವು ರಾಜಕೀಯ ಸಂಗತಿಗಳನ್ನು ಪ್ರಸ್ತಾಪ ಮಾಡುವುದಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮುಖ್ಯಮಂತ್ರಿ,ಕಾಂಗ್ರೆಸ್– ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಬಿಜೆಪಿ ನಡೆಸಿದೆ ಎಂಬ ಆರೋಪಕ್ಕೆ ಸಾಕ್ಷ್ಯವಾಗಿ ಆಡಿಯೊ ಬಹಿರಂಗಗೊಳಿಸಿದರು.

ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಯಡಿಯೂರಪ್ಪ ಸೇರಿಕೊಂಡು ಸರ್ಕಾರ ಪತನಕ್ಕೆ ಸಂಚು ನಡೆಸಿದ್ದಾರೆ ಎಂದೂ ಹರಿಹಾಯ್ದರು.

‘ಗುರುಮಠಕಲ್‌ ಶಾಸಕ ನಾಗನಗೌಡ ಪಾಟೀಲ ಅವರ ಪುತ್ರ ಶರಣ ಗೌಡ ಅವರನ್ನು ದೇವದುರ್ಗದಲ್ಲಿ ಯಡಿಯೂರಪ್ಪ ಗುರುವಾರ ತಡ ರಾತ್ರಿ ಕರೆಸಿಕೊಂಡು ಸಚಿವ ಸ್ಥಾನ ಮತ್ತು ಹಣದ ಆಮಿಷ ಒಡ್ಡಿದ್ದಾರೆ. ಆಗ ಇವರ ಜತೆ ಶಾಸಕರಾದ ಪ್ರೀತಂಗೌಡ, ಶಿವನಗೌಡ ನಾಯ್ಕ್‌, ಪತ್ರಕರ್ತ ಎಂ.ಬಿ. ಮರಂಕಲ್ ಇದ್ದರು. ಸ್ಪೀಕರ್ ಅವರಿಗೂ ₹ 50 ಕೋಟಿ ಕೊಟ್ಟು ಬುಕ್‌ ಮಾಡಿರುವುದಾಗಿ ಹೇಳಲಾಗಿದೆ. ಇವರು ಶಾಸಕರು ಮಾತ್ರವಲ್ಲ ಸ್ಪೀಕರ್‌ ಅವರನ್ನೂ ಖರೀದಿ ಮಾಡಲು ಹೊರಟಿದ್ದಾರೆ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಇದು ಟ್ರೇಲರ್‌ ಅಷ್ಟೆ, ಮುಂದೆ ಇನ್ನಷ್ಟು ಸಾಕ್ಷ್ಯಗಳನ್ನು ಬಹಿರಂಗಗೊಳಿಸುತ್ತೇನೆ. ಆಪರೇಷನ್‌ ಕಮಲ ಬಿಜೆಪಿಗೆ ರಕ್ತಗತವಾಗಿ ಬಂದಿದೆ, ಈ ಬಗ್ಗೆ ನನ್ನಲ್ಲಿ ಆಡಿಯೊ ಸಾಕ್ಷ್ಯಗಳಿವೆ. ಅದನ್ನು ದೇಶದ ಜನರ ಮುಂದಿಡುತ್ತೇನೆ’ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ನಾಶ ಮಾಡುತ್ತಿರುವ ಮೋದಿ: ‘ಪ್ರಜಾಪ್ರಭುತ್ವದ ರಕ್ಷಕ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ನಾಶ ಮಾಡುತ್ತಿದ್ದಾರೆ. ಕಪ್ಪು ಹಣ ಮಟ್ಟ ಹಾಕುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಅವರ ಸ್ನೇಹಿತರು ಕಪ್ಪು ಹಣ ಬಳಸಿ ಶಾಸಕರನ್ನು ಖರೀದಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇವರು ಯಾವುದೇ ನೈತಿಕತೆ ಇಲ್ಲದ ಮನುಷ್ಯರು’ ಎಂದು ಕುಮಾರಸ್ವಾಮಿ ಹೇಳಿದರು.

ಆಪರೇಷನ್ ಕಮಲದ ಹಿಂದೆ ಮೋದಿ, ಅಮಿತ್ ಷಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಕೈವಾಡವಿದೆ. ಶಾಸಕರ ಪುತ್ರನಿಗೆ ಆಮಿಷ ಒಡ್ಡುವ ಸಂದರ್ಭದಲ್ಲೇ ಸ್ಪೀಕರ್‌ ಅವರಿಗೆ ಆಮಿಷ ಒಡ್ಡಿರುವ ಪ್ರಸ್ತಾಪ ಇರುವುದರಿಂದ, ಸ್ಪೀಕರ್‌ ಅವರಿಗೆ ಪತ್ರ ಬರೆದು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಮನವಿ ಮಾಡುವುದಾಗಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಿ.ಎಸ್‌. ಪುಟ್ಟರಾಜು, ಸಾ.ರಾ. ಮಹೇಶ್ ಇದ್ದರು.

ಸಭಾಧ್ಯಕ್ಷರಿಗೆ ಪತ್ರ: ‘ಆಪರೇಷನ್ ಕಮಲ ನಡೆಸುವಾಗ ಬಿಜೆಪಿ ಶಾಸಕರು ಸಭಾಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿರುವುದು ನೋವು ತಂದಿದೆ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಕುಮಾರಸ್ವಾಮಿ ಅವರು ರಮೇಶ್ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

₹40 ಕೋಟಿ ಆಮಿಷ: ಶರಣ ಗೌಡ
‘ನಿಮ್ಮ ತಂದೆ ಬಿಜೆಪಿಗೆ ಬೆಂಬಲಿಸಿದರೆ ಮುಂದಿನ ಚುನಾವಣೆಗೆ ಅಗತ್ಯವಿರುವ ಎಲ್ಲ ಖರ್ಚು ನಾವು ನೋಡಿಕೊಳ್ಳುತ್ತೇವೆ. ಈಗಲೇ ಮುಂಬೈಗೆ ತೆರಳಿ ಅಲ್ಲಿ ಹಣಕಾಸಿನ ವ್ಯವಹಾರವನ್ನು ಪಕ್ಕಾ ಮಾಡಿಕೊಳ್ಳಬಹುದು. ₹40 ಕೋಟಿ ಸಿದ್ಧವಿರುವುದಾಗಿ ಯಡಿಯೂರಪ್ಪ ಹೇಳಿದರು’ಎಂದು ಶರಣಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಗುರುವಾರ ರಾತ್ರಿ ಮೂರು ಬಾರಿ ಕರೆ ಮಾಡಿದ ಬಿಜೆಪಿ ಮುಖಂಡರೊಬ್ಬರು ದೇವದುರ್ಗದ ಐ.ಬಿಗೆ ಕೂಡಲೇ ಬರಬೇಕು. ಬಿ.ಎಸ್‌.ಯಡಿಯೂರಪ್ಪ ಅವರು ತುರ್ತು ಮಾತುಕತೆ ನಡೆಸಬೇಕಿದೆ ಎಂದು ಹೇಳಿದರು. ಮಧ್ಯರಾತ್ರಿ ಹೊತ್ತಿಗೆ ನಾನು ಐ.ಬಿ ತಲುಪಿದೆ. ಬಿಜೆಪಿಯ ಕೆಲವು ಶಾಸಕರು ಹಾಗೂ ಯಡಿಯೂರಪ್ಪ ನನ್ನೊಂದಿಗೆ ಮಾತನಾಡಿದರು’ ಎಂದರು.

‘ಬಿಜೆಪಿ ನಾಯಕರು ದೂರವಾಣಿ ಕರೆ ಮಾಡಿದ್ದನ್ನು ನಾನು ಕೂಡಲೇ ಕುಮಾರಸ್ವಾಮಿ ಗಮನಕ್ಕೆ ತಂದೆ. ಆಗ ಅವರು ‘ಹೋಗು ಅವರು ಏನು ಮಾತನಾಡುತ್ತಾರೆ, ರೆಕಾರ್ಡ್‌ ಮಾಡಿ ಕೋ ಎಂದು ನನಗೆ ತಿಳಿಸಿದರು. ಆ ಪ್ರಕಾರವೇ ನಾನು ಸಂಭಾಷಣೆ ರೆಕಾರ್ಡ್‌ ಮಾಡಿಕೊಂಡೆ’ ಎಂದು ಅವರು ವಿವರಿಸಿದರು.

ಶರಣಗೌಡ ಅವರ ಮಾತಿಗೆ ಸಹಮತ ಸೂಚಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಸಂಭಾಷಣೆಯನ್ನು ರೆಕಾರ್ಡ್‌ ಮಾಡಿಕೊಂಡು ಬರಲು ನಾನೇ ತಿಳಿಸಿದ್ದೆ’ ಎಂದರು.

‘ನಾವು ಬಿಡುಗಡೆ ಮಾಡಿರುವ ಆಡಿಯೊ ಅಸಲಿ. ಮಿಮಿಕ್ರಿ ಕಲಾವಿದರಿಂದ ಮಾಡಿಸಿದ್ದಲ್ಲ. ಹಿಂದೆ ಧರ್ಮಸ್ಥಳ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಈಗ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಭಗವಂತನೇ ಅವರ ಬಾಯಿಯಿಂದ ಅಂತಹ ಮಾತು ನುಡಿಸಿದ್ದಾನೆ. ದೇವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾನೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಸದನದಲ್ಲಿ ಪ್ರಸ್ತಾಪಿಸುವೆ:ಸ್ಪೀಕರ್
ಬೆಂಗಳೂರು: ಧ್ವನಿಮುದ್ರಿಕೆಯಲ್ಲಿರುವ ಸಂಭಾಷಣೆ ವೇಳೆ ತಮ್ಮ ಹೆಸರು ಪ್ರಸ್ತಾವವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಕೆ.ಆರ್‌. ರಮೇಶ್ ಕುಮಾರ್, ‘ಸದನದಲ್ಲಿ ಸೋಮವಾರ ಈ ವಿಷಯವನ್ನು ನಾನೇ ಪ್ರಸ್ತಾಪ‌ ಮಾಡುತ್ತೇನೆ. ಯಾರಿಂದ ತನಿಖೆ ಮಾಡಿಸಬೇಕು ಎಂಬುದನ್ನೂ ತೀರ್ಮಾನಿಸುತ್ತೇನೆ’ ಎಂದರು.

‘ಬೀದಿಯಲ್ಲಿ ಹೋಗುವವರು ನನ್ನ ಹೆಸರು ಬಳಸಲು ಬಿಡುವುದಿಲ್ಲ. ಧ್ವನಿಮುದ್ರಿಕೆಯಲ್ಲಿರುವ ಸಂಭಾಷಣೆಯನ್ನು ನಾನೂ ಆಲಿಸಿದ್ದೇನೆ. ಆದರೆ, ಆ ಸಂಭಾಷಣೆ ಯಾರದು ಎಂಬುದು ನನಗೆ ಗೊತ್ತಿಲ್ಲ. ಅಷ್ಟಕ್ಕೂ ಯಡಿಯೂರಪ್ಪ ಅವರ ಧ್ವನಿಯಂತೂ ಅಲ್ಲವೇ ಅಲ್ಲ. ಯಡಿಯೂರಪ್ಪ ಈ ವಿಚಾರವಾಗಿ ನನ್ನ ಜೊತೆ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಂಭಾಷಣೆ ನಡೆಸಿರುವ ವ್ಯಕ್ತಿ ನನ್ನ ಹೆಸರನ್ನು ಮಾತ್ರವಲ್ಲ ನ್ಯಾಯಾಧೀಶರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಪ್ರಧಾನ ಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನೂ ಪ್ರಸ್ತಾಪ ಮಾಡಿದ್ದಾನೆ’ ಎಂದರು.

**
ರಾಜಕೀಯದಿಂದಲೇ ನಿವೃತ್ತಿ: ಬಿಎಸ್‌ವೈ

‘ಸಭಾಧ್ಯಕ್ಷರ ಬಗ್ಗೆ ಮಾತನಾಡಿದ್ದೇನೆ ಎಂಬುದನ್ನು ಕುಮಾರಸ್ವಾಮಿ ಅವರು ಸಾಬೀತುಪಡಿಸಲಿ. ನಾನು ರಾಜಕೀಯದಿಂದಲೇ ನಿವೃತ್ತನಾಗುತ್ತೇನೆ’ ಎಂದು ಬಿ.ಎಸ್‌.ಯಡಿಯೂರಪ್ಪ ಸವಾಲು ಎಸೆದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಸಿನಿಮಾ ಹಿನ್ನೆಲೆಯವರು. ಅವರು ಏನನ್ನೂ ಬೇಕಾದರೂ ಸೃಷ್ಟಿಸಬಲ್ಲರು. ಅದನ್ನೇ ಈಗ ಮಾಡಿದ್ದಾರೆ. ಇದು ನಕಲಿ ಆಡಿಯೊ. ನಾನು ಯಾರನ್ನೂ ಭೇಟಿ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘2011ರಲ್ಲಿ ಕುಮಾರಸ್ವಾಮಿ ಅವರು ನಮ್ಮ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದರು. ಅವರು ಆ ಘಟನೆಯನ್ನು ಮರೆತಿದ್ದಾರಾ. ಅವರು ಸತ್ಯ ಹರಿಶ್ಚಂದ್ರನ ಮಗನಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಡಳಿತ ಪಕ್ಷದ 10ಕ್ಕೂ ಅಧಿಕ ಸದಸ್ಯರು ಎರಡು ದಿನಗಳಿಂದ ಸದನಕ್ಕೆ ಬಂದಿಲ್ಲ. ಇವತ್ತು ಸಹ ಅಷ್ಟೇ ಸಂಖ್ಯೆಯ ಸದಸ್ಯರು ಬರುವುದಿಲ್ಲ. ಕುಮಾರಸ್ವಾಮಿ ಅವರಿಗೆ ಗೌರವ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ’ ಎಂದು ಸವಾಲು ಎಸೆದರು.

ಬಿಎಸ್‌ವೈಗೆ ಬಲೆಗೆ ಕೆಡವಿದ ಎಚ್‌ಡಿಕೆ: ಯಡಿಯೂರಪ್ಪ ಅವರನ್ನು ಬಲೆಗೆ ಕೆಡವಲು ಕುಮಾರಸ್ವಾಮಿ ಅವರು ಶರಣಗೌಡ ಮೂಲಕ ತಂತ್ರ ಹೆಣೆದಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ತಮ್ಮ ತಂದೆ ಭೇಟಿಯಾಗಲು ಬಯಸಿದ್ದಾರೆ ಎಂದು ಹೇಳಿ ಶಿವನಗೌಡ ಅವರ ಮೂಲಕ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಅತೃಪ್ತರ ವಿರುದ್ಧ ಅನರ್ಹತೆಯ ಅಸ್ತ್ರ ?
ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡೆದ್ದು ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ನಾಲ್ವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕೋರಿ ಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಅವರಿಗೆ ಮನವಿ ಸಲ್ಲಿಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

‘ಆಪರೇಷನ್ ಕಮಲ’ ಎದುರು ತಮ್ಮ ಪಕ್ಷದ ಒಗ್ಗಟ್ಟು ಪ್ರದರ್ಶಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಸಭೆ ನಡೆಸಿದರು. ಅನೇಕ ಶಾಸಕರು ಗೈರಾಗಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿ ಪಾಳಯದಲ್ಲಿತ್ತು.

ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅನೇಕ ಬಾರಿ ನೊಟೀಸ್ ನೀಡಿ ಎಚ್ಚರಿಸಿದರೂ ನಾಲ್ವರು ಶಾಸಕರು ಬಂದಿಲ್ಲ. ವೈಯಕ್ತಿಕ ಕಾರಣದಿಂದ ಅಧಿವೇಶನ ಮುಗಿಯವವರೆಗೂ ಬರಲಾಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಕಲಾಪಕ್ಕೆ ಹಾಜರಾಗಲೇ ಬೇಕು ಎಂದು ವ್ಹಿಪ್ ಜಾರಿ ಮಾಡಿದ್ದರೂ ಅವರು ಶಿಸ್ತು ಪಾಲಿಸಿಲ್ಲ. ಹೀಗಾಗಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸಲು ಸಭಾಧ್ಯಕ್ಷರಿಗೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.

ವೈಯಕ್ತಿಕ ಕಾರಣದಿಂದ ಬರಲಾಗಿಲ್ಲ. ಸಂಜೆ ಹೊತ್ತಿಗೆ ಬಂದು ಭೇಟಿಯಾಗುವುದಾಗಿ ಬಿ.ಸಿ. ಪಾಟೀಲ ತಿಳಿಸಿದ್ದಾರೆ. ರೋಷನ್ ಬೇಗ್ ಕೂಡ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಬಾರದೇ ಇರುವ ಬಗ್ಗೆ ಪ್ರಶ್ನಿಸಿದಾಗ, ಆತ ಅತೃಪ್ತರ ಗುಂಪಿನಲ್ಲಿ ಇಲ್ಲ. ಆತನ ಕಾರಣ ಬೇರೆಯದಾಗಿದೆ. ಕೆಲವರಿಗೆ ರಿಯಾಯಿತಿ ನೀಡಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

**

ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

* ಇವನ್ನೂ ಓದಿ...

*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

*ಬಜೆಟ್‌: ಯಾರು ಏನಂತಾರೆ?

*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ

*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

*ಬೆಂಗಳೂರೇ ಮೊದಲು; ಉಳಿದವು ನಂತರ...

*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

*ಮತ ಫಸಲಿಗಾಗಿ ಕುಮಾರ ಬಿತ್ತನೆ

*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

*ಸಹಸ್ರ ಶಾಲೆಗಳ ಸ್ಥಾಪನೆ

*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

*ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

*ಬಜೆಟ್‌: ಯಾರು ಏನಂತಾರೆ?

*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT