ಮಂಗಳವಾರ, ನವೆಂಬರ್ 19, 2019
23 °C
ಅನರ್ಹ ಶಾಸಕನಿಗಾಗಿ ಸ್ಥಾನ ಬಿಟ್ಟುಕೊಡಲು ಮುಂದಾದ ಆರೋಪ

ಯಡಿಯೂರಪ್ಪ ಆಯ್ತು ಈಗ ಬಣಕಾರ ಸರದಿ: ಬಿ.ಸಿ.ಪಾಟೀಲ ಜತೆ ಕೈಜೋಡಿಸಿದ ಆಡಿಯೊ ವೈರಲ್

Published:
Updated:

ಹಾವೇರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರದ್ದು ಎನ್ನಲಾದ ವೈರಲ್ ಆಡಿಯೊ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿರುವ ಬೆನ್ನಲ್ಲೇ, ಉಪಚುನಾವಣೆ ಕುರಿತು ಹಿರೇಕೆರೂರು ಕ್ಷೇತ್ರದ ಬಿಜೆಪಿ ಮುಖಂಡ ಯು.ಬಿ.ಬಣಕಾರ ಹಾಗೂ ವಕೀಲರೊಬ್ಬರ ನಡುವೆ ನಡೆದಿರುವ ಸಭಾಷಣೆಯ ಆಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಹಿರೇಕೆರೂರು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಣಕಾರ, ಮುಖ್ಯಮಂತ್ರಿ ಸೂಚನೆ ಮೇರೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಅನರ್ಹ ಶಾಸಕ ಬಿ.ಸಿ.ಪಾಟೀಲ ಅವರ ಜತೆ ಕೈಜೋಡಿಸಿದ್ದರು. ಇದರಿಂದ ಅಸಮಾಧಾನಗೊಂಡ ವಕೀಲ, ಬಣಕಾರ ಅವರಿಗೆ ಕರೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆಡಿಯೊ ಸೋರಿಕೆ ಸುತ್ತ ಸಂಶಯದ ಹುತ್ತ: ಯಡಿಯೂರಪ್ಪ ಬಣವೊ? ಸಂತೋಷ್‌ ಶಿಷ್ಯರೊ?

‘ಏನಾಯ್ತು ಸರ್. ನಿಮ್ಮ ಎಲ್ಲಾ ವಿಷಯ ಗೊತ್ತಾಗಿದೆ. ಬಿ.ಸಿ.ಪಾಟೀಲ ಹಾಗೂ ಯಡಿಯೂರಪ್ಪ ಜತೆ ಸೇರಿಕೊಂಡು, ಎಷ್ಟು ಕೋಟಿಗೆ ನಿಮ್ಮನ್ನು ಮಾರಿಕೊಂಡಿದ್ದೀರಿ ಹೇಳಿ’ ಎಂದು ವಕೀಲ ಆರಂಭದಲ್ಲೇ ಅವರನ್ನು ಪ್ರಶ್ನೆ ಮಾಡಿದ್ದಾರೆ.

‘ಮುಂದೆ ನಿಮ್ಮ ನಿರ್ಧಾರ ಏನೆಂಬುದನ್ನು ಈಗಲೇ ಹೇಳಿ. ನಾವು ನಿಮ್ಮ ಮೇಲೆ ಡಿಪೆಂಡ್ ಆಗಿದ್ದೇವೆ. ಬಿಜೆಪಿಯವರು ಟಿಕೆಟ್ ಕೊಡಲಿಲ್ಲ ಎಂದರೆ ರಾಜೀನಾಮೆ ಬಿಸಾಕಿ ಬಂದು ಅಭ್ಯರ್ಥಿಯಾಗಿ. ನಾವು ಒಂದೊಂದು ಎಕರೆ ಮಾರಿಯಾದರೂ ಕಾಂಟ್ರಿಬ್ಯೂಶನ್ ಕೊಡುತ್ತೇವೆ’ ಎಂದು ಗುಡುಗುತ್ತಾರೆ.‌

ಇದನ್ನೂ ಓದಿ: ‘ಸುಪ್ರೀಂ’ಗೆ ಆಡಿಯೊ: ರಾಗ ಬದಲಿಸಿದ ಸಿಎಂ, ಅನರ್ಹರಿಗೆ ಭೀತಿ

ಅದಕ್ಕೆ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿರುವ ಬಣಕಾರ, ‘ಅಷ್ಟೊಂದು ಜೋರಾಗಿ ಯಾಕೆ ಕೂಗಾಡ್ತೀಯಾ? ರೊಕ್ಕ ಹೊಡೆದಿದ್ದೀನಿ ಎಂದೆಲ್ಲ ಹೇಳಬೇಡ. ಸದ್ಯ ಬಿಜೆಪಿಯಲ್ಲಿದ್ದೇನೆ. ಅದಕ್ಕಾಗಿ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯಬೇಕು. ಒಂದು ವೇಳೆ ಅವರು ಅನರ್ಹರಾದರೆ, ನಿಗಮ ಮಂಡಳಿಗೆ ರಾಜೀನಾಮೆ ಕೊಟ್ಟು ಅಖಾಡಕ್ಕೆ ಇಳೀತಿನಿ. ಇದು ಹಂಡ್ರೆಡ್ ಪರ್ಸೆಂಟ್ ಕನ್ಫರ್ಮ್‌’ ಎಂದು ಹೇಳುವ ಮೂಲಕ ಆ ವಕೀಲನನ್ನು ಸಮಾಧಾನಪಡಿಸಿದ್ದಾರೆ.

***

ಒಬ್ಬರು ಹೇಳಿದರು ಎಂಬ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸಲು ಆಗುವುದಿಲ್ಲ. ಪಕ್ಷದ ಹಾಗೂ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಮುಖ್ಯ

– ಯು.ಬಿ.ಬಣಕಾರ,‌ ಬಿಜೆಪಿ ಮುಖಂಡ

ಇನ್ನಷ್ಟು...

ಬಿಎಸ್‌ವೈ ಮಾತು ಕೇಳುವುದೋ, ಜನರ ಮಾತು ಕೇಳುವುದೋ?:ಯು. ಬಿ. ಬಣಕಾರ ಪ್ರಶ್ನೆ

ಹಾವೇರಿ: ಜಿಲ್ಲೆಯಿಂದ ಗೆದ್ದ ಮೊದಲ ಬಿಜೆಪಿ ಶಾಸಕ

ಪ್ರತಿಕ್ರಿಯಿಸಿ (+)