ಆಕ್ಸಿಸ್‌ ನೋಟಿಸ್‌: ಸಂಧಾನಕ್ಕೆ ಸೂಚನೆ

7
ರೈತರ ವಿರುದ್ಧ ವಾರಂಟ್‌ ವಾಪಸ್– ಬ್ಯಾಂಕ್‌ ಅಧಿಕಾರಿ ಭರವಸೆ

ಆಕ್ಸಿಸ್‌ ನೋಟಿಸ್‌: ಸಂಧಾನಕ್ಕೆ ಸೂಚನೆ

Published:
Updated:
Deccan Herald

ಬೆಂಗಳೂರು/ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ರೈತರ ಮೇಲೆ ಆಕ್ಸಿಸ್‌ ಬ್ಯಾಂಕ್‌ ಮೊಕದ್ದಮೆ ಹೂಡಿರುವ ಪ್ರಕರಣದ ಸಂಬಂಧ ಇದೇ 7ರಂದು ಸಂಧಾನ ಸಭೆ ನಡೆಸಿ, ರೈತರ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜತೆಗೆ ಸೋಮವಾರ ದೂರವಾಣಿಯಲ್ಲಿ ಮಾತನಾಡಿದ ಅವರು,  ಬ್ಯಾಂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ತೊಂದರೆಯಾಗದಂತೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದರು.

ಖಾಸಗಿ ಬ್ಯಾಂಕ್‌ಗಳು ರೈತರನ್ನು ಶೋಷಣೆ ಮಾಡಿದರೆ ಸಹಿಸುವುದಿಲ್ಲ. ಕಾನೂನು ಪ್ರಕಾರ ಬ್ಯಾಂಕ್‌ಗಳು ರೈತರ ವಿರುದ್ಧ ಮೊಕದ್ದಮೆ ದಾಖಲಿಸುವಂತಿಲ್ಲ. ಕೃಷಿ ಸಾಲದ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ರೈತರ ಶೋಷಣೆ ಮಾಡಿದಲ್ಲಿ ಗಂಭೀರವಾಗಿ ಪರಿಗಣಿಸಬೇಕು ಎಂದೂ ಜಿಲ್ಲಾಧಿಕಾರಿಗೆ ಸೂಚಿಸಿದರು.

ಬ್ಯಾಂಕ್‌ ಶಾಖೆಗಳಿಗೆ ಮುತ್ತಿಗೆ: ಬ್ಯಾಂಕ್‌ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ ಹುಬ್ಬಳ್ಳಿ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಶಾಖೆಗಳಿಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬೈಲಹೊಂಗಲದಲ್ಲಿ ಮೆರವಣಿಗೆ ನಡೆಸಿದ ನೂರಾರು ರೈತರು, ‌‌ಪಟ್ಟಣದ ಬಸ್‌ ನಿಲ್ದಾಣದ ಎದುರಿನ ಬ್ಯಾಂಕ್ ಶಾಖೆಗೆ ನುಗ್ಗಿದರು. ವ್ಯವಸ್ಥಾಪಕರನ್ನು ಹೊರಹಾಕಿದರು.

‘ರೈತರನ್ನು ಬೀದಿಗೆ ಬರುವಂತೆ ಮಾಡಿರುವುದು ಖಂಡನೀಯ. ಅಧಿಕಾರಿಗಳು ರೈತರ ಕ್ಷಮೆ ಕೇಳಬೇಕು’ ಎಂದರು.

‘ನೋಟಿಸ್‌, ವಾರಂಟ್‌ ಹಿಂಪಡೆಯುವಂತೆ ಮುಖ್ಯ ಕಚೇರಿಯಿಂದ ನಿರ್ದೇಶನ ಬಂದಿದ್ದು, ಆತಂಕಕ್ಕೆ ಒಳಗಾಗಬಾರದು’ ಎಂದು ಬ್ಯಾಂಕಿನ ವಿಭಾಗೀಯ ಸಾಲ ವಸೂಲಾತಿ ಅಧಿಕಾರಿ ರಾಜಕುಮಾರ್‌ ತಿಳಿಸಿದರು. ಬಳಿಕ, ರೈತರು ಪ್ರತಿಭಟನೆ ಕೈಬಿಟ್ಟರು.

ಇನ್ನುಳಿದ ಕೆಲ ಸಮಸ್ಯೆಗಳನ್ನು, ನ.13ರಂದು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು.

ವಿವಾದ ಇತ್ಯರ್ಥ–ವಿಶ್ವಾಸ

‘ರೈತರು ಸಾಲ ಮರುಪಾವತಿ ಮಾಡದ ಕಾರಣ ನೆಲದ ಕಾನೂನಿಗೆ ಅನುಗುಣವಾಗಿ, ಆರು ತಿಂಗಳ ಹಿಂದೆ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಏಕಕಂತಿನಲ್ಲಿ ಸಾಲ ತೀರಿಸುವ ವೇಳಾಪಟ್ಟಿ ಅನ್ವಯ ಪರಸ್ಪರ ಸಮ್ಮತಿ ರೀತಿಯಲ್ಲಿ ಸಾಲ ಮರುಪಾವತಿ ಪ್ರಕ್ರಿಯೆ ಕಾರ್ಯಸಾಧ್ಯತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಆಕ್ಸಿಸ್ ಬ್ಯಾಂಕ್‍ನ ಪ್ರಾದೇಶಿಕ ಶಾಖೆಯ ಮುಖ್ಯಸ್ಥ ಸದಾಶಿವ ಮಲ್ಯ ಹೇಳಿದ್ದಾರೆ.

‘ಸರ್ಕಾರದ ಸಾಲ ಮನ್ನಾ ವಿಷಯ ಗಮನಕ್ಕೆ ಬಂದಿದ್ದು, ಸರ್ಕಾರ ಮತ್ತು ಎಸ್‍ಎಲ್‍ಬಿಸಿ ಸೂಚನೆಗೆ ಅನುಗುಣವಾಗಿ ಸಮನ್ವಯಗೊಳಿಸಿದ್ದೇವೆ. ರೈತರ ಹಿತಾಸಕ್ತಿ ಕಾಪಾಡಲು ಆದ್ಯತೆ ನೀಡುತ್ತಿದ್ದೇವೆ. ಸರ್ಕಾರದ ಜತೆಗೆ ಚರ್ಚಿಸಿ ವಿವಾದ ಇತ್ಯರ್ಥಪಡಿಸಿಕೊಳ್ಳುತ್ತೇವೆ’ ಎಂದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !