ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿವಾದ: ಮಂದಿರಕ್ಕಾಗಿ ನಿರಶನದ ಎಚ್ಚರಿಕೆ

ಪ್ರಧಾನಿ ಭೇಟಿಯಾಗಿ ಸುಗ್ರೀವಾಜ್ಞೆಗೆ ಪಟ್ಟು ಹಿಡಿಯಲು ನಿರ್ಧಾರ
Last Updated 2 ಡಿಸೆಂಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂಬಂಧ ಸುಗ್ರೀವಾಜ್ಞೆ ಹೊರಡಿಸದಿದ್ದರೆ, ಉಪವಾಸ ಸತ್ಯಾಗ್ರಹ ಅನಿವಾರ್ಯವಾಗಲಿದೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಎಚ್ಚರಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಶೀಘ್ರವೇ ಸಂತರ ನಿಯೋಗ ಭೇಟಿ ಮಾಡಿ ಸುಗ್ರೀವಾಜ್ಞೆ ಇನ್ನೂ ಏಕೆ ಹೊರಡಿಸಿಲ್ಲ ಎಂದು ಪ್ರಶ್ನಿಸಲಿದೆ ಎಂದರು.

ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ‘ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂದಿರ ನಿರ್ಮಾಣದ ಸಂಬಂಧ ಗೊತ್ತುವಳಿ ಮಂಡಿಸಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

‘ಸಂತರ ನಿಯೋಗ ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಿದರೆ ಅವರು ಕ್ರಮ ತೆಗೆದುಕೊಳ್ಳಬಹುದು ಎಂಬ ವಿಶ್ವಾಸವಿದೆ. ನಮ್ಮ ಮಾತು ಕೇಳದಿದ್ದರೆ, ಎಲ್ಲ ಸಂತರೂ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧರಾಗಬೇಕು’ ಎಂದು ಸಲಹೆ ನೀಡಿದರು.

‘ನನಗೀಗ 88 ವರ್ಷ ವಯಸ್ಸು. ನನ್ನ ಜೀವಿತಾವಧಿಯಲ್ಲಿ ರಾಮ ಮಂದಿರ ನೋಡಲು ಆಗುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡಿದೆ’ ಎಂದು ಭಾವುಕರಾದ ಪೇಜಾವರ ಶ್ರೀಗಳು, ‘ರಾಮ ಈ ರಾಷ್ಟ್ರದ ದೇವತೆ. ರಾಷ್ಟ್ರದ ಗೌರವ ಮತ್ತು ಸ್ವಾಭಿಮಾನ. ರಾಮನ ಮಂದಿರ ನಿರ್ಮಾಣಕ್ಕಾಗಿ ಸಂಘಟಿತರಾಗಬೇಕು ಮತ್ತು ಕಂಕಣಬದ್ಧರಾಗಬೇಕು. ಇದಕ್ಕಾಗಿ ಎಲ್ಲ ಬಗೆಯ ತ್ಯಾಗಕ್ಕೂ ಸಿದ್ಧರಾಗೋಣ. ಮಂದಿರ ನಿರ್ಮಾಣ ಆಗುವವರೆಗೆ ವಿರಮಿಸುವುದು ಬೇಡ’ ಎಂದು ಸೂಚಿಸಿದರು.

‘ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಮತ್ತು ಕ್ರೈಸ್ತರೂ ಬೆಂಬಲ ನೀಡಬೇಕು. ದೇಶದಲ್ಲಿ ಹಿಂದೂ– ಮುಸ್ಲಿಮರ ಸಾಮರಸ್ಯಕ್ಕಾಗಿ ಮುಸ್ಲಿಮರಿಗೆ ಇದೊಂದು ಸುವರ್ಣಾವಕಾಶ. ಆದ್ದರಿಂದ, ಮಂದಿರ ನಿರ್ಮಾಣವನ್ನು ಬೆಂಬಲಿಸಬೇಕು’ ಎಂದರು.

ಸಂಕಲ್ಪ: ಆದಿಚುಂಚನಗಿರಿ ಮಠದ ಸೌಮ್ಯನಾಥನಂದ ಸ್ವಾಮೀಜಿ ಮಾತನಾಡಿ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಎಲ್ಲ ಹಿಂದೂಗಳು ಸಂಕಲ್ಪ ಮಾಡಿದ್ದಾರೆ. ಈ ಮೂಲಕ ರಾಮರಾಜ್ಯ ಸ್ಥಾಪನೆ ಆಗಬೇಕು ಎಂದು ಹೇಳಿದರು.

ಮಂದಿರದಿಂದ ಸದೃಢ ಭಾರತ: ‘ರಾಮಮಂದಿರ ನಿರ್ಮಾಣದ ಮೂಲಕ ಸಮಸ್ತ ಹಿಂದೂ ಸಮಾಜದ ಸಂಘಟನೆ ಮತ್ತು ಸಶಕ್ತ ದೇಶದ ನಿರ್ಮಾಣ ಆಗಬೇಕು. ದಲಿತ, ಹಿಂದುಳಿದ ಮತ್ತು ಎಲ್ಲ ವರ್ಗದವರ ಅಭ್ಯುದಯವೇ ರಾಮಮಂದಿರ ನಿರ್ಮಾಣದ ಹೆಗ್ಗುರಿಯಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಸಿ.ಆರ್. ಮುಕುಂದ ಹೇಳಿದರು.

‘ದೇವರ ಅಸ್ತಿತ್ವವನ್ನು ನಂಬದಿದ್ದ ಸಮಾಜವಾದಿ ಲೋಹಿಯಾ ಅವರು ತಮ್ಮ ಒಂದು ಕೃತಿಯಲ್ಲಿ ರಾಮ, ಕೃಷ್ಣ ಮತ್ತು ಶಿವ ಈ ದೇಶದ ಮನಸ್ಸನ್ನು ರೂಪಿಸಿದ ಮಹಾನ್‌ ಪುರುಷರು ಎಂದು ಬಣ್ಣಿಸಿದ್ದಾರೆ. ಹಿಂದೂಗಳಲ್ಲಿ ರಾಮನ ಬಗ್ಗೆ ಪವಿತ್ರ ಭಾವನೆ ಇದೆ. ನ್ಯಾಯಾಲಯ ಮತ್ತು ಸರ್ಕಾರ ಹಿಂದೂಗಳ ಭಾವನೆಗೆ ಬೆಲೆ ಕೊಡಬೇಕು’ ಎಂದು ಆಗ್ರಹಿಸಿದರು.

ವಿಶ್ವ ಹಿಂದು ಪರಿಷತ್‌ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ‘ವ್ಯಭಿಚಾರ, ಪಟಾಕಿ, ಶಬರಿಮಲೆಯಂಥ ವಿಷಯಗಳು ನ್ಯಾಯಾಲಯಕ್ಕೆಆದ್ಯತೆ ಆಗುತ್ತವೆ. ಆದರೆ, ರಾಮ ಜನ್ಮಭೂಮಿ ಪ್ರಕರಣ ಏಕೆ ಆದ್ಯತೆ ಆಗಿಲ್ಲ’ ಎಂದರು.

ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ, ‘ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಲು ತಕ್ಷಣವೇ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಜನಾಗ್ರಹ ಸಭೆಯಲ್ಲಿ ಜನರ ಗಮನ ಸೆಳೆದ ರಾಮ ಮತ್ತು ಹನುಮ ವೇಷಧಾರಿ
ಜನಾಗ್ರಹ ಸಭೆಯಲ್ಲಿ ಜನರ ಗಮನ ಸೆಳೆದ ರಾಮ ಮತ್ತು ಹನುಮ ವೇಷಧಾರಿ

‘ಕುರ್ಚಿಯಿಂದ ಇಳಿಸುವ ಶಕ್ತಿ ಇದೆ’

ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ಹೃದಯಪೂರ್ವಕವಾಗಿ ಗೌರವಿಸುತ್ತವೆ. ರಾಮಜನ್ಮ ಭೂಮಿ ಆದ್ಯತೆ ವಿಚಾರ ಅಲ್ಲ ಎಂದು ಅಪಮಾನ ಮಾಡಿದರೆ ಅವರನ್ನು ಕುರ್ಚಿಯಿಂದ ಇಳಿಸುವ ಶಕ್ತಿಯೂ ಸಂತರಿಗೆ ಇದೆ ಎಂದು ಜಬಲ್‌ಪುರದ ಮಹಾಮಂಡಲೇಶ್ವರ ಅಖಿಲೇಶ್ವರಾನಂದಗಿರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಆಧಾರ ಕೇಳುವ ಬುದ್ಧಿಜೀವಿಗಳು

ಬಾಗಲಕೋಟೆ: ‘ಹಿಂದೂ ಸಮಾಜದ ಅಸ್ಮಿತೆಯ ಪ್ರಶ್ನೆಯಾದ ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ ಎಂಬುದಕ್ಕೆ ಆಧಾರ ಏನು ಎಂದು ಬುದ್ಧಿ ಜೀವಿಗಳು ಕೇಳುತ್ತಾರೆ. ವಿವಾದಿತ ಜಾಗದ ಬಗ್ಗೆ ಗೊಂದಲ ಬೇಡ; ಅಲ್ಲಿ ಶೌಚಾಲಯ ಕಟ್ಟಿ ಎಂದು ಸಲಹೆ ನೀಡುತ್ತಾರೆ!’ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಾಲೇಜು ಮೈದಾನದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

* ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು. ಪ್ರೇಮವಾದಿಗಳೇ ರಾಮವಾದಿಗಳು

ವಿಶ್ವೇಶತೀರ್ಥ ಸ್ವಾಮೀಜಿ,ಪೇಜಾವರ ಮಠ

ಸಾಧು ಸಂತರ ಭಿನ್ನ ಹಾದಿ

ಲಖನೌ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಹಿಂದುತ್ವ ಪರ ಸಂಘಟನೆಗಳಲ್ಲಿನ ಭಿನ್ನಮತಮತ್ತೊಮ್ಮೆ ಬಹಿರಂಗವಾಗಿದೆ.

ಅಯೋಧ್ಯೆ ವಿವಾದಕ್ಕೆ ಶಾಂತಿ ಮತ್ತು ಸೌಹಾರ್ದಯುತ ಪರಿಹಾರ ಕಂಡು ಹಿಡಿಯಲು ಮುಸ್ಲಿಂ ನಾಯಕರ ಜತೆ ಸಂಧಾನ ಮಾತುಕತೆ ನಡೆಸುವುದಾಗಿ ಅಖಿಲ ಭಾರತ ಅಖಾಡ ಪರಿಷತ್‌ನ (ಎಐಎಪಿ) ಸಾಧು, ಸಂತರು ಘೋಷಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಸಂಬಂಧ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಿಲುವು ಮತ್ತು ಅಯೋಧ್ಯೆಯ ಧರ್ಮಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಇದು ಸಂಪೂರ್ಣ ವಿರುದ್ಧವಾಗಿದೆ. ಸಾಧು, ಸಂತರ ನಿಯೋಗ ಮಂಗಳವಾರ ಅಯೋಧ್ಯೆಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾಗಲಿದೆ ಎಂಬ ವಿಷಯವನ್ನು ಅಖಾಡ ಪರಿಷತ್‌ ಅಧ್ಯಕ್ಷ ನರೇಂದ್ರ ಗಿರಿ ಕೂಡ ಖಚಿತಪಡಿಸಿದ್ದಾರೆ.

ಸೌಹಾರ್ದಯುತ ಸಂಧಾನ ಮಾತುಕತೆ ಮೂಲಕ ಮಂದಿರ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಅಖಾಡ ಚಾಲನೆ ನೀಡಲಿದೆ ಎಂದು ಪ್ರಯಾಗರಾಜ್‌ನಲ್ಲಿ ಭಾನುವಾರ ನಡೆದ ಸಾಧು, ಸಂತರ ಸಮಾವೇಶದಲ್ಲಿ ಅವರು ತಿಳಿಸಿದ್ದಾರೆ.

‘ನ್ಯಾಯಾಲಯ ಅಥವಾ ಸಂಧಾನ ಮಾತುಕತೆ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಅಖಾಡದ ಸ್ಪಷ್ಟ ನಿಲುವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT