ಗುರುವಾರ , ನವೆಂಬರ್ 21, 2019
27 °C

ಅಯೋಧ್ಯೆ ತೀರ್ಪು: ರಾಜ್ಯ ನಾಯಕರ ಅಭಿಪ್ರಾಯ

Published:
Updated:

ಪ್ರಚೋದನೆಗೆ ಬಳಸಿಕೊಳ್ಳುವುದು ಬೇಡ‌
ಈ ತೀರ್ಪಿನಿಂದ ದೇಶಕ್ಕೆ ಜಯ ಸಿಕ್ಕಿದೆ. ಇದು ಯಾವುದೇ ಪಕ್ಷ, ಸಂಘಟನೆಗೆ ಸಿಕ್ಕ ಗೆಲುವಲ್ಲ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಿದೆ. ಜಾತ್ಯಾತೀತ ನಿಲುವಿಗೆ ಪೂರಕವಾಗಿದೆ.  ಬಿಜೆಪಿಯವರು ಇದನ್ನು ಪ್ರಚೋದನೆಗೆ ಬಳಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಪ್ರಚೋದನೆಗೆ ಬಳಸಿಕೊಂಡರೆ ಜನರೇ ತಕ್ಕ ಉತ್ತರ ನೀಡುತ್ತಾರೆ.
-ದಿನೇಶ್‌ ಗುಂಡೂರಾವ್‌, ಅಧ್ಯಕ್ಷ, ಕೆಪಿಸಿಸಿ

*

ಸಮಾನ ಗೌರವ, ನ್ಯಾಯ ದೊರಕಿದೆ
ರಾಮಮಂದಿರವು ನಿಜವಾದ ರಾಷ್ಟ್ರಮಂದಿರ ಆಗಬೇಕು. ಎಲ್ಲ ಮತ– ಪಂಗಡದವರು ಸೇರಿ ಈ ಮಂದಿರವನ್ನು ನಿರ್ಮಿಸಬೇಕು. ಸುಪ್ರೀಂಕೋರ್ಟ್‌ ಎಲ್ಲರಿಗೂ ಸಮಾನ ಗೌರವ ಮತ್ತು ನ್ಯಾಯ ದೊರಕಿಸಿಕೊಟ್ಟಿದೆ. ಈ ತೀರ್ಪು ಇಡೀ ಭಾರತೀಯರ ಗೆಲುವು.
-ನಳಿನ್‌ ಕುಮಾರ್ ಕಟೀಲ್‌, ಅಧ್ಯಕ್ಷ, ರಾಜ್ಯ ಬಿಜೆಪಿ ಘಟಕ

*

ರಾಮ ಮಂದಿರ ಜತೆ ಅನ್ನದಾತನ ಬದುಕು ಕಟ್ಟೋಣ
ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ‘ಅನ್ನ ದೇವರ ಮುಂದೆ ಇನ್ನು ದೇವರು ಇಲ್ಲ..’ ರಾಮ ಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

*

ವಿವಾದಕ್ಕೆ ಸಂಬಂಧಿಸಿದಂತೆ ಯಾರಿಗೂ ಸೋಲು– ಗೆಲುವು ಆಗಿಲ್ಲ. ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನಾ ಮಂದಿರ ಕಟ್ಟಿಕೊಳ್ಳಲು ಅಗತ್ಯ ಸಹಕಾರ ಕೊಡಲಾಗುವುದು. ದೇಶದ ಪರಂಪರೆ ರಕ್ಷಣೆ ಹಾಗೂ ಸಮುದಾಯಗಳ ನಡುವಿನ ಹೊಂದಾಣಿಕೆಗೆ ತೀರ್ಪು ಸಹಕಾರಿಯಾಗಿದೆ.
-ಡಿ.ವಿ. ಸದಾನಂದ‌ಗೌಡ, ಕೇಂದ್ರ ಸಚಿವ

*

ಶ್ರೀ ರಾಮನ ಜನ್ಮ ಸ್ಥಾನದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಜನ ಚಾತಕ ಪಕ್ಷಿಯಂತೆ ಈ ದಿನಕ್ಕಾಗಿ ಕಾಯುತ್ತಿದ್ದರು. ಈ ತೀರ್ಪು ಎರಡೂ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿಕೊಟ್ಟಿದೆ. ಇನ್ನು ಮುಂದೆ ಶಾಂತಿ, ಸೌಹಾರ್ದದಿಂದ ಸಾಗೋಣ.
-ಶೋಭಾ ಕರಂದ್ಲಾಜೆ, ಸಂಸದೆ

*

ಅಯೋಧ್ಯೆಯು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಭೂಮಿ ಎಂಬುದು ಹಿಂದೂಗಳ ನಂಬಿಕೆ. ಸುಪ್ರೀಂಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪು ಇದನ್ನು ಗಟ್ಟಿಗೊಳಿಸಿದೆ. ಶತಮಾನಗಳ ಕಾಲದಿಂದ ಇದ್ದ ವಿವಾದ ಬಗೆಹರಿದಿರುವುದು ಸಂತೋಷದ ವಿಷಯ. ಇದನ್ನು ಯಾರೊಬ್ಬರೂ ತಮ್ಮ ಪರವಾಗಿ ಬಂದ ತೀರ್ಪು ಅಥವಾ ಮತ್ತೊಬ್ಬರ ವಿರುದ್ಧದ ಸೋಲು ಎಂದು ಭಾವಿಸಬೇಕಾಗಿಲ್ಲ.
–ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ಪ್ರತಿಕ್ರಿಯಿಸಿ (+)