ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣಾ ಆಯೋಗ, ಸದನ ಸಮಿತಿಗಳ ವರದಿ ರಾಜಕೀಯ ಅಸ್ತ್ರವಾಗಿ ಬಳಕೆ...

ಒಳನೋಟ
Last Updated 6 ಡಿಸೆಂಬರ್ 2021, 16:21 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಪರಮೋಚ್ಚ ವೇದಿಕೆಯಾಗಿರುವ ರಾಜ್ಯ ವಿಧಾನಮಂಡಲ, ರಾಜಕಾರಣಿಗಳ ಮೇಲಾಟದ ವೇದಿಕೆಯಾಗಿ ಪರಿವರ್ತನೆಯಾಗಿದೆ. ವಿಚಾರಣಾ ಆಯೋಗ, ಸದನ ಸಮಿತಿಗಳು ಬಲಾಢ್ಯರ ನಡುವಿನ ಕಾದಾಟಕ್ಕೆ ಬಳಕೆಯಾಗುವ ಅಸ್ತ್ರಗಳಂತಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚವಾದರೂ ಸತ್ಯ ಸಂಗತಿ ಶವಪೆಟ್ಟಿಗೆ ಸೇರುವ ಸ್ಥಿತಿ ಇದೆ. ಈ ಹಾವು ಏಣಿ ಆಟದ ಮೇಲೆ ಬೆಳಕು ಚೆಲ್ಲಲಿದೆ ಒಳನೋಟ...

ವಿಚಾರಣಾ ಆಯೋಗದ ವರದಿಯಾಗಲಿ, ಸದನ ಸಮಿತಿಗಳ ವರದಿಯಾಗಲಿ ತಮಗೆ ಅನುಕೂಲವೆಂದು ಕಂಡು ಬಂದರೆ ಮಾತ್ರ ಸದನದಲ್ಲಿ ಮಂಡನೆ ಆಗುತ್ತದೆ. ಇಲ್ಲವಾದರೆ, ನೂರೆಂಟು ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ಸದನದ ಒಳಗೆ ವರದಿಗೆ ಪ್ರವೇಶ ಸಿಗದಂತೆ ವ್ಯವಸ್ಥಿತ ‘ತಂತ್ರ’ಗಳನ್ನು ಹೆಣೆಯಲಾಗುತ್ತದೆ. ಒಟ್ಟಿನಲ್ಲಿ ಸದನ ಸಮಿತಿ ಮತ್ತು ವಿಚಾರಣಾ ವರದಿಗಳು ಆಯಾ ಕಾಲದ ಸರ್ಕಾರಗಳಿಗೆ ‘ಅನುಕೂಲಸಿಂಧು’ ಆಗಿರಬೇಕು.

ಇದಕ್ಕೊಂದು ಉತ್ತಮ ನಿದರ್ಶನವೆಂದರೆ, ಕಲ್ಲಿದ್ದಲು ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿ.ಪಿ.ಮೋಹನ ಕುಮಾರ್‌ ಅಧ್ಯಕ್ಷತೆಯ ವಿಚಾರಣಾ ಆಯೋಗ. ಈ ಆಯೋಗ ನೀಡಿದ ವರದಿ ಬಹಿರಂಗಗೊಳ್ಳಲೇ ಇಲ್ಲ. ಆಯೋಗ ಮೂರು ಸಂಪುಟಗಳಲ್ಲಿ ವರದಿ ನೀಡಿತ್ತು. 2002 ರಿಂದ 2009 ರವರೆಗಿನ ಅವಧಿಯಲ್ಲಿ ಕಲ್ಲಿದ್ದಲು ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಇದರಲ್ಲಿ ಉಲ್ಲೇಖವಿದೆ ಎನ್ನಲಾಗಿದೆ. ಇದರಲ್ಲಿ ಮೂರು ಪಕ್ಷಗಳಿಂದ ಇಂಧನ ಸಚಿವರಾಗಿದ್ದವರ ಹೆಸರುಗಳು ಉಲ್ಲೇಖವಾಗಿತ್ತು. ಆದರೆ, ಪರಸ್ಪರರ ಹಿತರಕ್ಷಣೆಗಾಗಿ ವರದಿ ಬಹಿರಂಗ ಮಾಡಲೇ ಇಲ್ಲ.

ವಿಧಾನಮಂಡಲದಲ್ಲಿ ವರದಿ ಮಂಡಿಸದೇ ಇದ್ದರೆ, ಅದು ಸಾರ್ವಜನಿಕರ ಅವಗಾಹನೆಗೆ ಬರುವ ಪ್ರಶ್ನೆಯೇ ಇಲ್ಲ. ಮಾಹಿತಿ ಹಕ್ಕು ಇದಕ್ಕೆ ಅನ್ವಯ ಆಗುವುದೂ ಇಲ್ಲ. ಒಟ್ಟಿನಲ್ಲಿ ‘ಸುರಕ್ಷತೆ ಕವಚ’ವನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಮಂಕುಬೂದಿ ಎರಚುವುದರಲ್ಲಿ ರಾಜಕಾರಣಿಗಳು ಸಿದ್ಧ ಹಸ್ತರು. ಆದರೆ, ಈ ಹಗರಣಗಳಿಂದ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ತುಂಬಿಕೊಡುವವರು ಯಾರು? ಸಾರ್ವಜನಿಕರ ತೆರಿಗೆ ಹಣದ ಲೂಟಿ ತಡೆಯುವ ಬಗೆ ಹೇಗೆ?

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆರೆಗಳ ಕಬಳಿಕೆ ಮತ್ತು ಒತ್ತುವರಿಗೆ ಸಂಬಂಧಿಸಿದಂತೆ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಿತ್ತು. ವರದಿ ತಯಾರಿಗೆ ಬಹಳ ಸಮಯ ತೆಗೆದುಕೊಂಡಿತು. ಈ ಮಧ್ಯೆ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಬೇಸತ್ತ ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಸಮಿತಿಗೆ ರಾಜೀನಾಮೆ ನೀಡಿದರು.

ವರದಿಯನ್ನು ಸದನಕ್ಕೆ ಸಲ್ಲಿಸುವ ಸಂದರ್ಭ ಬಂದಾಗ ಕೋಳಿವಾಡ ಅವರೇ ಸ್ಪೀಕರ್‌ ಹುದ್ದೆ ಅಲಂಕರಿಸಿದ್ದರು. ಸದನದಲ್ಲಿ ಸಮಿತಿಯ ಅಧ್ಯಕ್ಷರೇ ವರದಿಯನ್ನು ಮಂಡಿಸುವುದು ವಾಡಿಕೆ. ಈ ವರದಿ ಮಂಡಿಸಿದ ಬಳಿಕ ಸರ್ಕಾರ ಕಬಳಿಕೆ ತೆರವುಗೊಳಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಸಮಿತಿ ಶಿಫಾರಸ್ಸು ಕೂಡ ಕಬಳಿಕೆದಾರರು ದಂಡ ಕಟ್ಟಿ ಮಾಫಿ ಮಾಡಿದರೆ ಸಾಕು ಎಂಬ ಧಾಟಿಯಲ್ಲಿತ್ತು.

ಅಕ್ರಮ ಮರಳು ಗಣಿಗಾರಿಕೆ ದಂಧೆಯ ಕುರಿತು ಸದನ ಸಮಿತಿ ತನ್ನ ವರದಿಯಲ್ಲಿ ಗಂಭೀರ ಶಿಫಾರಸುಗಳನ್ನು ನೀಡಿತ್ತು. ಸಿದ್ದರಾಮಯ್ಯ ಸರ್ಕಾರ ಇದರಲ್ಲಿ ಒಂದನ್ನು ಮಾತ್ರ ಜಾರಿ ತರುವ ಪ್ರಯತ್ನವನ್ನು ಮಾಡಿತ್ತು.

ಅದೇನೆಂದರೆ, ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡು ಎಂಎಸ್‌ಐಎಲ್‌ ಮೂಲಕ ಮಾರಾಟ ಮಾಡುವುದು. ಈಗ ಅದೂ ಕೂಡ ಕುಂಟುತ್ತಾ ಸಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ದಂಧೆ ತನ್ನ ಕರಾಳ ಹಸ್ತವನ್ನು ಎಲ್ಲೆಡೆ ಚಾಚಿತ್ತು. ಇದನ್ನು ತಡೆಯಲು ಹೋದ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿದ್ದವು. ಕೆಲವು ರಾಜಕಾರಣಿಗಳು ಮತ್ತು ಅವರ ಕುಟುಂಬದವರು ಇದರಲ್ಲಿ ತೊಡಗಿದ್ದರು. ಈ ಬಗ್ಗೆ ವರದಿ ಹೆಚ್ಚಿಗೆ ಬೆಳಕು ಚೆಲ್ಲದಿದ್ದರೂ, ವರದಿ ಬಹಿರಂಗವಾದ ಬಳಿಕ ಕಠಿಣ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಆಗಲಿಲ್ಲ. ಮರಳು ನೀತಿ ಜಾರಿ ಮಾಡಲಾಯಿತು ಆದರೆ, ಕರಾಳ ದಂಧೆಗೆ ಕಡಿವಾಣ ಬೀಳಲಿಲ್ಲ. ವಿಚಾರಣಾ ಆಯೋಗ ಮತ್ತು ಸದನ ಸಮಿತಿ ರಚನೆಗೆ ವಿಧಾನಮಂಡಲ ಕಾರ್ಯಕಲಾಪ ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರ ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ವಿಚಾರಣಾ ಆಯೋಗ ಅಥವಾ ಸದನ ಸಮಿತಿಯನ್ನು ರಚನೆಗೆ ಒಪ್ಪಿಗೆ ನೀಡುತ್ತದೆ. ಸಾಮಾನ್ಯವಾಗಿ ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿದು, ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಆಯೋಗ ಅಥವಾ ಸದನ ಸಮಿತಿ ರಚನೆ ಮಾಡಲಾಗುತ್ತದೆ.

ಆಯೋಗವನ್ನು ಸಾಮಾನ್ಯವಾಗಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತದೆ. ಅವರಿಗೊಂದು ಪ್ರತ್ಯೇಕ ಕಚೇರಿ, ಸಿಬ್ಬಂದಿ, ಪೀಠೋಪಕರಣ ಇತ್ಯಾದಿ ಒದಗಿಸಲಾಗುತ್ತದೆ. ವಿಚಾರಣೆ ನಡೆಸಿ ಮೂರು ಅಥವಾ ಆರು ತಿಂಗಳ ಸಮಯ ನೀಡಲಾಗುತ್ತದೆ. ಆದರೆ, ವಿಚಾರಣೆ ಮುಗಿರುವ ವೇಳೆಗೆ ಒಂದೆರಡು ವರ್ಷಗಳು ಕಳೆದಿರುತ್ತವೆ. ಸದನ ಸಮಿತಿಗೆ ಇಷ್ಟೊಂದು ಖರ್ಚು ಬರುವುದಿಲ್ಲ. ಕೆಲವು ಸದನ ಸಮಿತಿಗಳು ಪ್ರವಾಸ ಅಥವಾ ಸ್ಥಳಗಳಿಗೆ ಭೇಟಿ ನೀಡುವುದಿದ್ದರೆ ಮಾತ್ರ ಖರ್ಚು– ವೆಚ್ಚ ಆಗುತ್ತದೆ. ಸಭೆಗಳಿಗೆ ಹಾಜರಾಗುವುದಕ್ಕೆ ಭತ್ಯೆ ತೆಗೆದುಕೊಳ್ಳುವುದಿಲ್ಲ. ಆಯೋಗಗಳಿಗೆ ಹೋಲಿಸಿದರೆ, ಇವುಗಳಿಂದ ಆಗುವ ವೆಚ್ಚ ಕಡಿಮೆಯೇ. ಸದನ ಸಮಿತಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಇರುವುದರಿಂದ ಕಾಟಾಚಾರದ ಕೆಲಸ ಮಾಡಲು ಆಗುವುದಿಲ್ಲ ಎಂಬುದು ದಿಟ.

ಒಂದು ವೇಳೆ ಪಕ್ಷಾತೀತವಾಗಿ ಶಾಸಕರ ಹಿತಕ್ಕೆ ಧಕ್ಕೆ ಬಂದರೆ, ಎಲ್ಲ ಪಕ್ಷಗಳ ಶಾಸಕರು ಒಂದಾಗುತ್ತಾರೆ ಎಂಬುದಕ್ಕೆ ‘ಮಾಧ್ಯಮಗಳ ಅಧ್ಯಯನ’ಕ್ಕಾಗಿ ರಚಿಸಿದ ಸದನ ಸಮಿತಿಯೇ ಸ್ಪಷ್ಟ ನಿದರ್ಶನ. ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು ಎಂಬುದು ಬಹುತೇಕ ಎಲ್ಲ ಶಾಸಕರ ಆಗ್ರಹವಾಗಿತ್ತು.

ಆರು ಅಧಿಕಾರಿಗಳ ಮೇಲೂ ಕ್ರಮವಿಲ್ಲ!

ರಾಜ್ಯ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಮಾಡಿ, ಸರ್ಕಾರ ಬದಲಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಅಕ್ರಮ ಗಣಿಗಾರಿಕೆ ಹಗರಣ ಲೋಕಾಯುಕ್ತ ವರದಿಯಿಂದಾಗಿ ದೇಶದ ಗಮನ ಸೆಳೆದಿದ್ದು ಸುಳ್ಳಲ್ಲ.

ಜನಾರ್ದನರೆಡ್ಡಿ ಸೇರಿದಂತೆ ಹಲವು ರಾಜಕಾರಣಿಗಳನ್ನು ಜೈಲಿಗಟ್ಟಿದ ಈ ಹಗರಣದಲ್ಲಿ 617 ಅಧಿಕಾರಿಗಳನ್ನು ಆರೋಪಿಗಳು ಎಂದು ವರದಿಯಲ್ಲಿ ಹೆಸರಿಸಿತ್ತು. ಇವರಲ್ಲಿ ಆರು ಅಧಿಕಾರಿಗಳ ಮೇಲೂ ಸರ್ಕಾರ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.

50 ಸಾವಿರ ಟನ್‌ ಮೇಲ್ಪಟ್ಟ ಅಕ್ರಮ ಅದಿರು ವಹಿವಾಟಿನ ಕುರಿತು ತನಿಖೆ ನಡೆಸಿದ್ದ ಸಿಬಿಐ, ‍ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾಣುವಂಥ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ತನಿಖೆ ಸ್ಥಗಿತಗೊಳಿಸಿತು. ಇದು ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಲ್ಲ ಎಂಬ ಜನರ ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು.

ಏನಾಗಬೇಕು?
* ಆಯೋಗ ಅಥವಾ ಸದನ ಸಮಿತಿ ಸಕಾಕಾರಕ್ಕೆ ತನ್ನ ವರದಿ ಸಲ್ಲಿಸಿದ ತಕ್ಷಣ ಸಾವಕಾಜನಿಕವಾಗಿ ಲಭ್ಯವಾಗುವಂತೆ ಕಾನೂನಿಗೆ ತಿದ್ದುಪಡಿ ತರಬೇಕು

* ಸಕಾಕಾರಕ್ಕೆ ಸಲ್ಲಿಕೆಯಾದ ವರದಿಗಳನ್ನು ‌‌ಒಪ್ಪುವ ಇಲ್ಲವೋ ತಿರಸಕೆರಿಸುವ ಮೊದಲು ವಿಧಾನಮಂಡಲದಲ್ಲಿ ಕೂಲಂಕಶ ಚರ್ಕಾಗೆ ಅವಕಾಶ ನೀಡಬೇಕು

* ಆಯೋಗಗಳ ಮುಖ್ಯಸ್ಥರ ನೇಮಕ ಅಧಿಕಾರವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂತರ್ತಿಗೆ ನೀಡಬೇಕು. ರಾಜಕೀಯ ಹಸ್ತಕ್ಷೇಪ ಇರಬಾರದು.

* ತನಿಖೆ ಅಥವಾ ವಿಚಾರಣೆಯ ಎಲ್ಲ ಬಳವಣಿಗೆಗಳನ್ನು ಆರಂಭದಿಂದ ಕೊನೆಯವರೆಗೆ ಪಾರದಶಕಾಕವಾಗಿರಿಸಬೇಕು. ಎಲ್ಲ ನಡಾವಳಿಗಳನ್ನು ಅಂತರ್ಜಾಲದಲ್ಲಿ ಲಭ್ಯವಿರುವಂತೆ ನೋಡಿಕಳ್ಳಬೇಕು

***

ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ

* ನೈಸ್‌ ಕುರಿತು ವರದಿ ಅತ್ಯುತ್ತಮವಾದುದು. ಸಾಕಷ್ಟು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಭೂಕಬಳಿಕೆ ತಡೆ ನ್ಯಾಯಾಲಯಕ್ಕೆ ಯಾರು ಬೇಕಾದರೂ ದೂರು ಸಲ್ಲಿಸಬಹುದು.

ಟಿ.ಬಿ.ಜಯಚಂದ್ರ,ಮಾಜಿ ಸಚಿವರು, (ನೈಸ್‌ ಕುರಿತ ಸದನ ಸಮಿತಿ ಅಧ್ಯಕ್ಷ)

* ಸರ್ಕಾರ ತನ್ನ ಮೇಲಿನ ಒತ್ತಡವನ್ನು ವರ್ಗಾಯಿಸಲು ವಿಚಾರಣಾ ಆಯೋಗ ರಚಿಸುತ್ತದೆ. ಒಟ್ಟಿನಲ್ಲಿ ಇ

ದೊರೆರಾಜು
ದೊರೆರಾಜು

ದು ಕಣ್ಣೊರೆಸುವ ತಂತ್ರ. ಸರ್ಕಾರಗಳಿಗೆ ಆಯೋಗಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇಲ್ಲಿಯವರೆಗೆ ಸಲ್ಲಿಸಿದ ಯಾವುದೇ ವರದಿ ಶಿಫಾರಸು ಜಾರಿ ಮಾಡಿಲ್ಲ.

ದೊರೆರಾಜು,ವಕೀಲ, ಹೈಕೋರ್ಟ್‌

* ಸದನ ಸಮಿತಿ ವರದಿ ಕೊಟ್ಟ ಬಳಿಕ ಕೆಲವು ಅಂಶಗಳು ಜಾರಿ ಆದವು. ಧಾರವಾಡ ಬಳಿ ಡಿಪೊ ಆರಂಭಿಸಲಾಯಿತು. ಮಲೇ ಷ್ಯಾದಿಂದ ಮರಳು ಆಮದು ಪ್ರಯತ್ನಕ್ಕೆ ಚಾಲನೆ ಸಿಕ್ಕಿತು. ಅಷ್ಟರಲ್ಲೇ ಚುನಾವಣೆ ಬಂತು. ಉಳಿದವು ಮೂಲೆಗುಂಪಾದವು.

ಡಾ.ರಫೀಕ್ ಅಹ್ಮದ್‌
ಡಾ.ರಫೀಕ್ ಅಹ್ಮದ್‌

ಡಾ.ರಫೀಕ್ ಅಹ್ಮದ್‌,ಮಾಜಿ ಶಾಸಕ (ಅಕ್ರಮ ಮರಳು ಗಣಿಗಾರಿಕೆ ತಡೆ ಸಮಿತಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT