ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತದ ಪರಿಣಾಮ: ಬೋನಸ್ ಇಲ್ಲದ ಆಯುಧ ಪೂಜೆ

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಮರಿದ ವಿಜಯದಶಮಿ ಹಬ್ಬದ ಸಡಗರ
Last Updated 5 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಹಿಂಜರಿತದಿಂದಾಗಿ ತೀವ್ರ ನಿಗಾ ಘಟಕ (ಐಸಿಯು) ತಲುಪಿರುವ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ಇನ್ನೂ ಈ ಸಂಕಷ್ಟದಿಂದ ಬಿಡುಗಡೆ ಹೊಂದಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಈ ಬಾರಿ ಆಯುಧ ಪೂಜೆ ಸಡಗರವೇ ಕಮರಿ ಹೋಗಿದೆ. ನೆಪಮಾತ್ರಕ್ಕೆ ಪೂಜೆ ನಡೆಯುತ್ತಿದ್ದು, ಕೆಲ ಕಾರ್ಮಿಕರಿಗೆ ಅರ್ಧ ಬೋನಸ್ ಸಿಕ್ಕರೆ, ಮತ್ತೆ ಕೆಲವರಿಗೆ ಸಂಬಳವಿಲ್ಲದ ಬೋನಸ್ ಸಿಕ್ಕಿದೆ, ಇನ್ನೂ ಹಲವರಿಗೆ ಬರಿಗೈ.

ಕಾರ್ಖಾನೆಗಳ ಮಾಲೀಕರು ಮತ್ತು ಕಾರ್ಮಿಕರು ವರ್ಷಕ್ಕೊಮ್ಮೆ ಒಟ್ಟಾಗಿ ಸಡಗರದಿಂದ ಆಯುಧ ಪೂಜೆ ಆಚರಿಸುತ್ತಾರೆ. ಪೂಜೆ ಹೆಸರಿನಲ್ಲಿ ಮಾಲೀಕರು ನೀಡುವ ಬೋನಸ್‌ಗಾಗಿ ವರ್ಷವಿಡೀ ಕಾರ್ಮಿಕರು ಕಾದಿರುತ್ತಾರೆ. ಕೈಗಾರಿಕೆಗಳ ಮೇಲೆ ಬರ ಸಿಡಿಲಾಗಿ ಎರಗಿರುವ ಆರ್ಥಿಕ ಹಿಂಜರಿತವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಹಲವು ವಿಧದಲ್ಲಿ ಪ್ರಯತ್ನ ನಡೆಸುತ್ತಿದ್ದರೂ, ಚೇತರಿಕೆ ಇನ್ನೂ ಮರೀಚಿಕೆಯಾಗಿದೆ. ವಾಹನ ಯಂತ್ರಗಳ ಬಿಡಿಭಾಗ ತಯಾರಿಸುವ ಕಾರ್ಖಾನೆಗಳೇ ಪೀಣ್ಯದಲ್ಲಿ ಹೆಚ್ಚಿವೆ. ವಾಹನ ತಯಾರಿಕಾ ಕಂಪನಿಗಳಿಂದ ಬಿಡಿ ಭಾಗಗಳಿಗೆ ಬೇಡಿಕೆ ನಿಂತು ಹಲವು ತಿಂಗಳುಗಳೇ ಕಳೆದಿವೆ.

ಹೀಗಾಗಿ, ಆಯುಧ ಪೂಜೆಯ ಸಡಗರ ಮಂಕಾಗಿದೆ. ಪ್ರತಿವರ್ಷ ಕಾರ್ಮಿಕರಿಗೆ ಒಂದು ತಿಂಗಳ ಸಂಬಳದಷ್ಟು ಬೋನಸ್ ನೀಡುತ್ತಿದ್ದ ಮಾಲೀಕರು ಈ ಬಾರಿ ಅದನ್ನು ಹೊಂದಿಸಲು ಹೆಣಗಾಡುತ್ತಿದ್ದಾರೆ. ಅತೀ ಸಣ್ಣ ಕೈಗಾರಿಕೆಗಳಲ್ಲಿ ಕೆಲವರು ಸ್ವೀಟ್ ಬಾಕ್ಸ್ ಜತೆಗೆ ₹500ರಿಂದ ₹1,000 ನೀಡುತ್ತಿದ್ದರೆ, ಸ್ವೀಟ್‌ ಬಾಕ್ಸ್ ಅಷ್ಟನ್ನೇ ನೀಡಿ ಕೈಮುಗಿದಿದ್ದಾರೆ. ‌ಸಣ್ಣ ಕೈಗಾರಿಕೆಗಳಲ್ಲಿ ಅರ್ಧದಷ್ಟು ಬೋನಸ್ ನೀಡಲಾಗಿದೆ. ಸ್ವಲ್ಪ ದೊಡ್ಡ ಕೈಗಾರಿಕೆಗಳಲ್ಲಿ ಪೂರ್ಣ ಪ್ರಮಾಣದ ಬೋನಸ್ ನೀಡಿವೆ. ಆದರೆ, ಈ ತಿಂಗಳ ಸಂಬಳ ನೀಡಿಲ್ಲ.

ಪೀಣ್ಯದಲ್ಲಿ 4 ಘಟಕ ಹೊಂದಿರುವ ಕಂಪನಿಯೊಂದು ಶುಕ್ರವಾರ ಕಾರ್ಮಿಕರ ಸಭೆ ನಡೆಸಿದೆ. ‘ಬಿಡಿ ಭಾಗಗಳಿಗೆ ಬೇಡಿಕೆ ಇಲ್ಲದೆ ಕೆಲಸ ಸ್ಥಗಿತಗೊಂಡಿರುವುದು ನಿಮಗೇ ಗೊತ್ತಿದೆ. ಆದರೂ, ನಿಮಗೆ ಬೋನಸ್ ನೀಡುತ್ತೇವೆ. ಆದರೆ, ಈ ತಿಂಗಳ ಸಂಬಳವನ್ನು ಬಾಕಿ ಉಳಿಸಿಕೊಳ್ಳುತ್ತೇವೆ. ಅದನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ’ ಎಂದು ಮಾಲೀಕರು ಭರವಸೆ ನೀಡಿದ್ದಾರೆ.

‘ನಮ್ಮ ಸ್ಥಿತಿ ಉತ್ತಮವಾಗಿದ್ದಾಗ ನಿಮ್ಮ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ಮುಂದೆ ಎಲ್ಲವೂ ಸರಿಯಾಗಬಹುದು. ಸದ್ಯಕ್ಕೆ ಹಣಕಾಸಿನ ವಿಚಾರದಲ್ಲಿನ ಎಚ್ಚರವಹಿಸಿ. ಸಾಲ ಮಾಡಿಕೊಳ್ಳಬೇಡಿ. ಪೈಸೆ ಪೈಸೆ ಖರ್ಚು ಮಾಡುವ ಮುನ್ನವೂ ಯೋಚಿಸಿ ಎಂದು ಸಲಹೆ ನೀಡಿದರು’ ಎಂದು ಅಲ್ಲಿನ ಕಾರ್ಮಿಕರು ಶನಿವಾರ ‘ಪ್ರಜಾವಾಣಿ’ ಬಳಿ ಹೇಳಿಕೊಂಡರು.

‘ಕೆಲಸ ನಿಂತು ಮೂರ್ನಾಲ್ಕು ತಿಂಗಳುಗಳೇ ಆಗಿವೆ. ಕಂಪನಿ ಚೆನ್ನಾಗಿ ನಡೆಯುತ್ತಿದ್ದಾಗ ಆಯುಧ ಪೂಜೆ ಮಾತ್ರವಲ್ಲ, ಕಂಪನಿ ಹುಟ್ಟಿದ ದಿನ, ಮಾಲೀಕರ ಹುಟ್ಟಿದ ದಿನ, ಅವರ ಮಕ್ಕಳು ಹುಟ್ಟಿದ ದಿನಗಳಲ್ಲೂ ನಮಗೆ ಬೋನಸ್ ನೀಡಿದ್ದಾರೆ. ಕಷ್ಟ ಹೇಳಿಕೊಂಡಾಗಲೆಲ್ಲಾ ಹಣ ಕೊಟ್ಟಿದ್ದಾರೆ. ಈಗ ಕಷ್ಟದಲ್ಲಿರುವ ಮಾಲೀಕರಿಗೆ ನಾವು ಒತ್ತಡ ಹೇರುವುದಿಲ್ಲ. ಇನ್ನೂ ನಮ್ಮನ್ನೆಲ್ಲಾ ಕೆಲಸದಲ್ಲಿ ಉಳಿಸಿಕೊಂಡಿರುವುದೇ ದೊಡ್ಡ ವಿಷಯ’ ಎನ್ನುವಾಗ ಅವರ ಕಣ್ಣಂಚು ಒದ್ದೆಯಾಗಿತ್ತು.

‘ಪೂಜೆಗಾಗಿ ಒಡವೆ ಅಡವಿಟ್ಟೆ’

‘ಮೂರು ತಿಂಗಳಿಂದ ಕಾರ್ಮಿಕರಿಗೆ ಸಂಬಳ ಕೊಡಲು ಪರದಾಡುತ್ತಿದ್ದೇವೆ. ಈಗ ಪೂಜೆ ಮಾಡಲು ಹಣವಿಲ್ಲದೆ ಮನೆಯಲ್ಲಿದ್ದ ಒಡವೆ ಅಡವಿಟ್ಟಿದ್ದೇನೆ’ ಎಂದು ಉದ್ಯಮಿ ಜಯಪ್ರಕಾಶ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ನಾನಾದರೂ ಈಗ ಒಡವೆ ಅಡವಿಟ್ಟಿದ್ದೇನೆ. ನನ್ನ ಕೆಲ ಸ್ನೇಹಿತರು ಕಾರ್ಮಿಕರಿಗೆ ಸಂಬಳ ಕೊಡಲು ಎರಡು ತಿಂಗಳ ಹಿಂದೆಯೇ ಆಭರಣಗಳನ್ನು ಅಡವಿಟ್ಟಿದ್ದರು. ಅವರು ಆಯುಧ ಪೂಜೆ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು. ‘ಸಾಮಾನ್ಯವಾಗಿ ಹಬ್ಬದ ಹಿಂದಿನ ದಿನ ಪೂಜೆ ಮಾಡುತ್ತಿದ್ದೆವು. ಬಹುತೇಕರು ಶುಕ್ರವಾರವೇ ಪೂಜೆ ಮುಗಿಸಿ ಕಾರ್ಮಿಕರಿಗೆ ಒಂದು ವಾರ, ಕೆಲವರಿಗೆ 10 ದಿನಗಳ ರಜೆ ಕೊಟ್ಟು ಕಳುಹಿಸಿದ್ದಾರೆ’ ಎಂದರು.

* ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ಇನ್ನೂ ಕೃತಕ ಉಸಿರಾಟದಲ್ಲೇ ಇವೆ. ಬೋನಸ್ ಇರಲಿ, ಪೂಜೆಗೆ ಹಣ ಹೊಂದಿಸುವುದೇ ಕಷ್ಟವಾಗಿದೆ

- ಮಲ್ಯಾದ್ರಿ ರೆಡ್ಡಿ, ‍‍ಪೀಣ್ಯ ಕೈಗಾರಿಕಾ ಸಂಘದ ನಿಕಟ ಪೂರ್ವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT