ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಯನ್ಸ್ ವಿವಿಯ ಅಯ್ಯಪ್ಪ ಕೊಲೆ: ಹತ್ಯೆಗೆ ಕೋಟಿ ಸುಪಾರಿ

ಕುಲಪತಿ ಬಂಧನ l ₹ 1,500 ಕೋಟಿ ಆಸ್ತಿ ವಿವಾದ ಕಾರಣ
Last Updated 17 ಅಕ್ಟೋಬರ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಆಡಳಿತ ಚುಕ್ಕಾಣಿ ಹಿಡಿಯುವ ಸಂಬಂಧ ಅಣ್ಣ–ತಮ್ಮನ ನಡುವೆ ಹಲವು ವರ್ಷಗಳಿಂದ ಸಾಗಿದ್ದ ವಿವಾದವೇ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಅವರ ಹತ್ಯೆಗೆ ಕಾರಣ !

ಆರ್.ಟಿ.ನಗರದ ಎಚ್ಎಂಟಿ ಮೈದಾನದಲ್ಲಿ ಇದೇ 15ರಂದು ರಾತ್ರಿ ನಡೆದಿದ್ದ ಅಯ್ಯಪ್ಪ ಅವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಉತ್ತರ ವಿಭಾಗದ ಪೊಲೀಸರು, ವಿಶ್ವವಿದ್ಯಾಲಯದ ಹಾಲಿ ಕುಲಪತಿ ಸುಧೀರ್ ಅಂಗೂರ್ (57) ಹಾಗೂ ನೌಕರ ಸೂರಜ್ ಸಿಂಗ್‌ನನ್ನು (29) ಬಂಧಿಸಿದ್ದಾರೆ.

‘ವಿಶ್ವವಿದ್ಯಾಲಯದ ವಿವಾದದಲ್ಲಿ ಮಧ್ಯ ಪ್ರವೇಶಿಸಿದ್ದಕ್ಕಾಗಿ ಅಯ್ಯಪ್ಪ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

‘₹1,500 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ವಿಶ್ವವಿದ್ಯಾಲಯದ ಆಡಳಿತ ಚುಕ್ಕಾಣಿ ಹಿಡಿಯುವ ಸಂಬಂಧ ಆರೋಪಿ ಸುಧೀರ್ ಹಾಗೂ ಆತನ ಅಣ್ಣ ಮಧುಕರ್ ಅಂಗೂರ್ ನಡುವೆ ವ್ಯಾಜ್ಯವಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೊಲೆಯಾದ ಅಯ್ಯಪ್ಪ ಅವರು ಮಧುಕರ್ ಪರವಿದ್ದರು. ಎಲ್ಲಾ ಬಗೆಯ ಸಹಾಯ ಮಾಡುತ್ತಿದ್ದರು. ಅದೇ ಕಾರಣಕ್ಕೆ ಸುಧೀರ್‌, ತನ್ನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಸೂರಜ್‌ನ ಮೂಲಕ ಅಯ್ಯಪ್ಪ ಅವರನ್ನು ಹತ್ಯೆ ಮಾಡಿಸಿದ್ದ. ಬಳಿಕ, ಮಧುಕರ್ ಅವರನ್ನೂ ಕೊಲ್ಲಲು ಆರೋಪಿಗಳು ಮನೆಗೆ ಹೋಗಿದ್ದರು. ಆದರೆ, ಅವರು ಮನೆಯಲ್ಲಿರಲಿಲ್ಲ. ಹೀಗಾಗಿ, ಬಚಾವಾದರು’ ಎಂದು ನಗರ ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಯ್ಯಪ್ಪ ಹಾಗೂ ಮಧುಕರ್ ಇಬ್ಬರನ್ನೂ ಹತ್ಯೆ ಮಾಡಿಸಲು ಸುಧೀರ್ ಸಂಚು ರೂಪಿಸಿದ್ದ. ಅದಕ್ಕಾಗಿ ₹1 ಕೋಟಿ ಸುಪಾರಿ ನೀಡುವುದಾಗಿ ಹೇಳಿದ್ದ ಆತ, ₹ 20 ಲಕ್ಷ ಮುಂಗಡವಾಗಿ ಪಾವತಿಸಿದ್ದ. ಹಣ ಪಡೆದಿದ್ದ ಸೂರಜ್, ತನ್ನ ನಾಲ್ವರು ಸಹಚರರ ಜೊತೆ ಸೇರಿ ಅಯ್ಯಪ್ಪ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದ. ದೇಹದ 17 ಕಡೆ ಗಾಯದ ಗುರುತುಗಳಿದ್ದವು’ ಎಂದು ತಿಳಿಸಿದರು.

ವಿವಾದದಿಂದಲೇ ಸಿಕ್ಕ ಸುಳಿವು: ‘ಕೊಲೆ ತನಿಖೆಗೆ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿಶ್ವವಿದ್ಯಾಲಯ ವಿವಾದದ ಸಂಬಂಧ ನ್ಯಾಯಾಲಯದಲ್ಲಿ 25ಕ್ಕೂ ಹೆಚ್ಚು ಮೊಕದ್ದಮೆ ಇರುವುದು ಗೊತ್ತಾಯಿತು. ವಿವಾದದ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದ ತಂಡ, ಸುಧೀರ್ ಅಂಗೂರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ. ಸೂರಜ್‌ನ ಹೆಸರನ್ನೂ ಬಾಯ್ಬಿಟ್ಟ’ ಎಂದು ಹೇಳಿದರು.‌

ಕೊಲೆಗೆ ಸಹೋದರನೇ ಮುಂದಾದ’

‘ನಿತ್ಯವೂ ರಾತ್ರಿ ಬೇಗನೇ ಮನೆಗೆ ಬರುತ್ತಿದ್ದೆ. ಆದರೆ, ಮಂಗಳವಾರ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದೆ. ನಸುಕಿನ 2ರ ಸುಮಾರಿಗೆ ಮನೆಗೆ ಬಂದೆ. ಮರುದಿನ ಪೊಲೀಸರು ಹೇಳಿದಾಗಲೇ ಆರೋಪಿಗಳು ನನ್ನನ್ನೂ ಕೊಲ್ಲಲು ಬಂದಿದ್ದರು ಎಂಬುದು ತಿಳಿಯಿತು. ತಡವಾಗಿ ಬಂದಿದ್ದರಿಂದಲೇ ನಾನು ಬಚಾವಾದೆ’ ಎಂದು ಮಧುಕರ್ ಅಂಗೂರ್ ಹೇಳಿದರು.

ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಎದುರಾಳಿಗಳು ಕೊಲೆ ಮಾಡಿಸುವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ನೋಡಿ ಆಘಾತವಾಗಿದೆ’ ಎಂದರು.

‘ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸಲು ವಿಶ್ವವಿದ್ಯಾಲಯ ಸ್ಥಾಪಿಸಿ ಕುಲಪತಿ ಆಗಿದ್ದೆ. ಒಡಹುಟ್ಟಿದವನೆಂಬ ಕಾರಣಕ್ಕೆ ತಮ್ಮ ಸುಧೀರ್‌ನನ್ನು ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನೇಮಕ
ಮಾಡಿಕೊಂಡಿದ್ದೆ.’

‘ಆತ ಕೆಲ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ. ಅವರ ಕಾರ್ಯವೈಖರಿ ಸರಿ ಇಲ್ಲದಿದ್ದರಿಂದ ಕೆಲಸದಿಂದ ಕಿತ್ತು ಹಾಕಿದ್ದೆ. ಅವರೆಲ್ಲ ಗುಂಪು ಕಟ್ಟಿಕೊಂಡು ನನ್ನ ವಿರುದ್ಧವೇ ತಿರುಗಿ ಬಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಶ್ವವಿದ್ಯಾಲಯದ ಆಡಳಿತವನ್ನು ಕಿತ್ತುಕೊಂಡರು. ಇದು ಅಣ್ಣ–ತಮ್ಮ ನಡುವಿನ ವಿವಾದವಲ್ಲ. ಉದ್ಯೋಗಿ ಹಾಗೂ ನನ್ನ ನಡುವಿನ ವಿವಾದ’ ಎಂದು ಮಧುಕರ್ ಹೇಳಿದರು.

‘ವಿಶ್ವವಿದ್ಯಾಲಯದ ವಿವಾದದ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಪು ಬರಲಿದೆ. ಆಡಳಿತದ ಚುಕ್ಕಾಣಿ ಪುನಃ ನನಗೆ ಸಿಗಲಿದೆ. ಇದು ಗೊತ್ತಾಗಿಯೇ ಸುಧೀರ್, ಅಯ್ಯಪ್ಪ ಅವರನ್ನು ಹತ್ಯೆ ಮಾಡಿಸಿದ್ದಾನೆ.
ನನ್ನನ್ನೂ ಕೊಲ್ಲಲು ಮುಂದಾಗಿದ್ದ’ ಎಂದು ಬೇಸರ ವ್ಯಕ್ತಪಡಿಸಿದರು.

ಕೃತ್ಯದಲ್ಲಿ ವಕೀಲ ಭಾಗಿ

‘ಕೃತ್ಯ ಎಸಗಲು ಸುಧೀರ್ ಹಾಗೂ ಸೂರಜ್‌ಗೆ ನಗರದ ವಕೀಲರೊಬ್ಬರು ಸಲಹೆ ನೀಡಿದ್ದರು ಎಂಬ ಮಾಹಿತಿ ಇದೆ. ಕೃತ್ಯದಲ್ಲಿ ವಕೀಲರ ನಿಖರ ಪಾತ್ರವೇನು ಎಂಬುದನ್ನು ತಿಳಿಯಲಾಗುತ್ತಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

‘ಶ್ರೀರಾಮ ಯುವಕರ ತಂಡ’ ಕಟ್ಟಿದ್ದ

‘ಜೆ.ಸಿ.ನಗರ ಮಾರಪ್ಪ ಬ್ಲಾಕ್‌ನ ನಿವಾಸಿಯಾದ ಆರೋಪಿ ಸೂರಜ್ ಸಿಂಗ್, ಬಿ.ಎ ಪದವೀಧರ. ಎರಡು ವರ್ಷಗಳ ಹಿಂದಷ್ಟೇ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರಂಭದಲ್ಲಿ ಸೂರಜ್‌ಗೆ ತಿಂಗಳಿಗೆ ₹ 20 ಸಾವಿರ ಸಂಬಳವಿತ್ತು. ಮಧುಕರ್ ಹಾಗೂ ಅಯ್ಯಪ್ಪ ಅವರನ್ನು ಕೊಲೆ ಮಾಡಲು ಒಪ್ಪಿಕೊಂಡ ಬಳಿಕ ಆತನ ಸಂಬಳವನ್ನು ₹ 50 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಅದಾದ ನಂತರ, ಮಧುಕರ್ ಹಾಗೂ ಅಯ್ಯಪ್ಪ ಅವರನ್ನು ಹಿಂಬಾಲಿಸುವುದೇ ಆತನ ಕೆಲಸವಾಗಿಬಿಟ್ಟಿತ್ತು.’

‘ಶ್ರೀರಾಮ ಯುವಕರ ತಂಡ’ ಕಟ್ಟಿದ್ದ ಆತ, ಇತ್ತೀಚೆಗೆ ವಿಜಯದಶಮಿ ದಿನದಂದು ಮೆರವಣಿಗೆ ವಿಚಾರವಾಗಿ ಗಲಾಟೆ ಸಹ ಮಾಡಿಕೊಂಡಿದ್ದ. ಆತನ ಸಂಘಟನೆ ಎಲ್ಲಿಯೋ ನೋಂದಣಿ ಸಹ ಆಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ನಟ ಸುದೀಪ್ ಭಾವ!

‘ಕೊಲೆ ಸಂಬಂಧ ಬಂಧಿಸಲಾಗಿರುವ ಸುಧೀರ್ ಅಂಗೂರ್, ನಟ ಸುದೀಪ್ ಅವರ ಅಕ್ಕ ಸುಜಾತಾ ಅವರನ್ನು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ’ ಎಂದು ಮೂಲಗಳು ಹೇಳಿವೆ.

‘ಮದುವೆ ಬಳಿಕ ಸುಧೀರ್ ವರ್ತನೆ ಮಿತಿಮೀರಿತ್ತು. ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದ. ಅದರಿಂದ ನೊಂದ ಪತ್ನಿ ಸುಜಾತಾ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಚಾರಣೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ರಕ್ಷಣೆ ಕೋರಿದ್ದ ಅಯ್ಯಪ್ಪ, ಮಧುಕರ್

‘ವಿಶ್ವವಿದ್ಯಾಲಯ ವಿವಾದ ಶುರುವಾದ ಬಳಿಕ ಮಧುಕರ್ ಹಾಗೂ ಅಯ್ಯಪ್ಪ ಅವರನ್ನು ಕೆಲವರು ಹಿಂಬಾಲಿಸಲಾರಂಭಿಸಿದ್ದರು. ಅದರಿಂದ ಭಯಗೊಂಡಿದ್ದ ಅವರಿಬ್ಬರು ರಕ್ಷಣೆ ಕೋಡಿ ಪೊಲೀಸರಿಗೆ ಮನವಿ ಸಹ ಸಲ್ಲಿಸಿದ್ದರು’ ಎಂದು ಆಪ್ತರೊಬ್ಬರು ಹೇಳಿದರು.

‘ಮನವಿಗೆ ಸ್ಪಂದಿಸದ ಪೊಲೀಸರು, ಯಾವುದೇ ರಕ್ಷಣೆಯನ್ನೂ ಕೊಟ್ಟಿರಲಿಲ್ಲ. ಅಯ್ಯಪ್ಪ ಅವರು ಒಬ್ಬಂಟಿಯಾಗಿ ಓಡಾಡುತ್ತಿದ್ದುದ್ದು ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟಿತು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT