ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ: ಸಚಿವ ಬಿ.ಸಿ.ಪಾಟೀಲ

ಕೊಡಗು ಜಿಲ್ಲೆಗೆ ದುಪ್ಪಟ್ಟು ಟಾರ್ಪಲ್‌ ಪೂರೈಕೆ: ಕೃಷಿ ಸಚಿವ ಬಿ.ಸಿ. ಪಾಟೀಲ್‌ ಭರವಸೆ
Last Updated 5 ಮೇ 2020, 15:05 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಭರವಸೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಲಾಗಿದೆ. ಕೊಡಗು ಜಿಲ್ಲೆಗೆ ಬೇಕಾದಷ್ಟು ಪೂರೈಕೆ ಮಾಡಲಾಗುವುದು. ಸುಣ್ಣವನ್ನೂ ಪೂರೈಸಲು ವ್ಯವಸ್ಥೆ ಮಾಡಲಾಗುವುದು. ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆಯಲ್ಲಿ ಟಾರ್ಪಲ್‌ ಅಗತ್ಯವಿದೆ. ಹೀಗಾಗಿ, ಗುಣಮಟ್ಟದ ತಾಡಪಾಲು ಪೂರೈಕೆ ಮಾಡುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

‘ದೇಶದಲ್ಲಿ ಲಾಕ್‌ಡೌನ್‌ ಇನ್ನೂ ಮುಕ್ತಾಯವಾಗಿಲ್ಲ. ಕೋವಿಡ್‌ –19ನಿಂದ ಪರಿಸ್ಥಿತಿ ಕೈಮೀರುತ್ತಿದೆ. ರೈತರು ಬೆಳೆ ಬೆಳೆಯದಿದ್ದರೆ ಬದುಕು ಕಷ್ಟ. ಹೀಗಾಗಿ, ಆದ್ಯತೆಯ ಮೇರೆಗೆ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

‘ರಾಜ್ಯದ ಎಲ್ಲ ಜಿಲ್ಲೆಗಳಿಗೂ ಖುದ್ದು ಭೇಟಿ ನೀಡಿ ‍ಪರಿಸ್ಥಿತಿ ಅವಲೋಕಿಸುತ್ತಿದ್ದೇನೆ. ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿರುವೆ. ರೈತರ ಸ್ಥಿತಿ ಸುಧಾರಣೆ ಆಗಬೇಕು. ವನ್ಯಜೀವಿಗಳ ಉಪಟಳದ ಬಗ್ಗೆ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಬೆಂಬಲ ಬೆಲೆ ಯೋಜನೆ ಅಡಿ ಭತ್ತವನ್ನು ಖರೀದಿಸಲಾಗಿತ್ತು. ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಹಣವೂ ಬಿಡುಗಡೆ ಆಗಿದೆ. ಆತಂಕ ಬೇಡ. ರೈತರಿಗೆ ಕಿಸಾನ್‌ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಾಲ, ಸೌಲಭ್ಯ ಮಾಹಿತಿಯೂ ಅದರಲ್ಲಿ ಅಡಕವಾಗಿರಲಿದೆ’ ಎಂದು ಹೇಳಿದರು.

ರೈತರು ಬೆಳೆದಿರುವ ಹಾಳಾಗುವ ಪದಾರ್ಥಗಳನ್ನು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೂವು ಬೆಳೆದವರಿಗೆ ತೊಂದರೆಯಾಗಿದೆ. ಅವರಿಗೆ ನೆರವು ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರತಿ ವರ್ಷ ರೈತರು ಭತ್ತ ಕಟಾವು ಮಾಡುವ ಮೊದಲೇ ಭತ್ತದ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ಭತ್ತವು ವನ್ಯಜೀವಿಗಳ ಪಾಲಾಗಲಿದೆ. ಸಣ್ಣ ರೈತರಿಗೂ ಕೃಷಿ ಹೊಂಡ ತೆಗೆಸಲು ಅವಕಾಶ ನೀಡಬೇಕು ಎಂದು ಕೋರಿದರು.

ಸಾವಯವ ಗೊಬ್ಬರ ಒಂದು ಲೋಡ್‌ ಬಂದಿದ್ದು ವಾಪಸ್‌ ಹೋಗಿದೆ. ಪ್ರಮಾಣೀಕರಿಸದೇ ಅದನ್ನು ಜಿಲ್ಲೆಗೆ ತರಲಾಗಿತ್ತು. ಮುಂದೆ ಈ ರೀತಿ ಆಗಬಾರದು ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಭೂಕುಸಿತ ಹಾಗೂ ಪ್ರವಾಹದಿಂದ ರೈತರ ಗದ್ದೆಗಳಲ್ಲಿ ಹೂಳು ನಿಂತಿದೆ. ಅದನ್ನು ಸರ್ಕಾರದ ಹಣದಲ್ಲೇ ತೆರವು ಮಾಡಬೇಕು’ ಎಂದು ಕೋರಿದರು.

ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಬಾಳೆಲೆಯಲ್ಲಿ ರೈತರೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯ ಎಪಿಎಂಸಿ ಆವರಣದಲ್ಲಿ ಹಣ್ಣುಗಳ ದಾಸ್ತಾನು ಮಾಡಲು ‘ಕೋಲ್ಡ್‌ ಸ್ಟೋರೇಜ್‌’ ತೆರೆಯಬೇಕು. ಸಣ್ಣ ನಿರಾವರಿ ಇಲಾಖೆಯ ಕೃಷಿ ಹೊಂಡ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಭೂಕುಸಿತದಿಂದ ರೈತರ ಗದ್ದೆಗಳಲ್ಲಿ ಮಣ್ಣು ಬಿದ್ದಿದೆ. ಅದನ್ನು ತೆರವು ಮಾಡಬೇಕು. ಪಾಳು ಬಿದ್ದ ಭೂಮಿಗೆ ಸೌಲಭ್ಯವನ್ನು ಕಲ್ಪಿಸಬೇಕು’ ಎಂದು ಕೋರಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗಣಪತಿ ಅವರು ಕೃಷಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಗೆ ಸುಣ್ಣ ಪೂರೈಕೆ ಆಗಿಲ್ಲ. ಹಾಗೆಯೇ ಅಗತ್ಯವಿರುಷ್ಟು ರಸಗೊಬ್ಬರವೂ ಬಂದಿಲ್ಲ ಎಂದು ಗಮನ ಸೆಳೆದರು.
ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌, ಸಿಇಒ ಕೆ.ಲಕ್ಷ್ಮಿಪ್ರಿಯಾ ಹಾಜರಿದ್ದರು.

***

‘ತಪ್ಪು ತಿದ್ದಿಕೊಳ್ಳಬೇಕು, ಇದು ಕೊನೇ ಎಚ್ಚರಿಕೆ’: ಬಿ.ಸಿ.ಪಾಟೀಲ್‌

ಸಭೆಯಲ್ಲಿ ಕೃಷಿ ಇಲಾಖೆಯ (ಪ್ರಭಾರ) ಉಪ ನಿರ್ದೇಶಕ ರಾಜು ಅವರನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನೀಲ್‌ ಸುಬ್ರಮಣಿ ಅವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

ವೇದಿಕೆಯ ಮೇಲೆಯೇ ಏರುಧ್ವನಿಯಲ್ಲಿ ಮಾತನಾಡಿದ ರಂಜನ್‌ ಹಾಗೂ ಸುನಿಲ್‌, ‘ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೂ ಜನಪ್ರತಿನಿಧಿಗಳಿಗೆ ಆಹ್ವಾನ ನೀಡುತ್ತಿಲ್ಲ’ ಎಂದು ಕಿಡಿಕಾರಿದರು.

‘ಸರ್ಕಾರಿ ಕೆಲಸ ದೇವರ ಕೆಲಸ ಅಲ್ಲವೇ? ಆದರೆ, ನೀವು ರೈತರ ಬಳಿಗೆ ಹೋಗುತ್ತಿಲ್ಲ. ಮಣ್ಣು ಪರೀಕ್ಷೆಯ ಬಗ್ಗೆಯೂ ನಮಗೆ ಮಾಹಿತಿ ನೀಡಿಲ್ಲ. 1,500 ಮಾದರಿ ಸಂಗ್ರಹಿಸಿದ್ದೇವೆ ಎನ್ನುತ್ತೀರಾ? ಯಾವ ಪ್ರದೇಶದಲ್ಲಿ ಸಂಗ್ರಹ ಮಾಡಿದ್ದೀರಾ? ಕೃಷಿ ಅಭಿಯಾನಕ್ಕೂ ಆಹ್ವಾನ ನೀಡಿಲ್ಲ. ಗೊಬ್ಬರ ಕಳಪೆಯಾಗಿದೆ. ಅದನ್ನು ಪರೀಕ್ಷೆ ಮಾಡಿಲ್ಲವೇ’ ಎಂದು ಸುನೀಲ್‌ ಪ್ರಶ್ನಿಸಿದರು. ರಂಜನ್‌ ಅವರೂ ದನಿಗೂಡಿಸಿ ‘ನನ್ನನ್ನೂ ಆಹ್ವಾನಿಸಿಲ್ಲ’ ಎಂದು ದೂರಿದರು.

ಆಗ ಸಚಿವರು ಪ್ರತಿಕ್ರಿಯಿಸಿ, ‘ಶಿಷ್ಟಾಚಾರದ ಪ್ರಕಾರ ಜನಪ್ರನಿಧಿಗಳನ್ನು ಆಹ್ವಾನಿಸಬೇಕು’ ಎಂದು ಸೂಚನೆ ನೀಡಿದರು. ಅಷ್ಟಕ್ಕೂ ಶಾಸಕರ ಸಿಟ್ಟಿ ತಗ್ಗಲಿಲ್ಲ!

ಡಿ.ಸಿ.ಸಿ ಬ್ಯಾಂಕ್‌ ಅಧ್ಯಕ್ಷ ಗಣಪತಿ ಮಾತನಾಡಿ, ‘ಪರವಾನಗಿ ಇರುವ ಅಂಗಡಿಯವರೇ ಕೀಟನಾಶಕ ಮಾರಾಟ ಮಾಡಬೇಕು. ಆದರೆ, ಗೋಣಿಕೊಪ್ಪಲಿನ ಹಾರ್ಡ್‌ವೇರ್‌ ಅಂಗಡಿಯವರು ಕೀಟನಾಶಕ ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾವ ಕ್ರಮವೂ ಆಗಿಲ್ಲ’ ಎಂದು ದೂರಿದರು.

ಆಗ ಸುನೀಲ್‌ ಅವರು, ವಿರಾಜಪೇಟೆ ಕೃಷಿ ಅಧಿಕಾರಿಗೆ ದೂರು ನೀಡಿದ್ದಾರೆ. ಏನು ಕ್ರಮ ಕೈಗೊಂಡಿದ್ದೀರಾ ಎನ್ನುವ ಮಾಹಿತಿ ನೀಡಿ ಎಂದು ಸೂಚಿಸಿದರು. ಕಳಪೆ ಗೊಬ್ಬರ ಪೂರೈಕೆ ಏಜೆನ್ಸಿ ಹೆಸರು ಹೇಳಬೇಕು ಎಂದು ಪಟ್ಟುಹಿಡಿದರು.

ರಾಜು ಅವರು ಏಜೆನ್ಸಿ ಹೆಸರು ಗೊತ್ತಿಲ್ಲ ಎಂದಾದ ಮೇಲೆ ಮತ್ತೆ ತರಾಟೆಗೆ ತೆಗೆದುಕೊಂಡರು.

ಹಾರ್ಡ್‌ವೇರ್‌ ಅಂಗಡಿಯಲ್ಲಿ ಕೀಟನಾಶಕ ಮಾರಾಟ ಮಾಡುತ್ತಿದ್ದರೆ ಏನು ಕ್ರಮ ಕೈಗೊಂಡಿಲ್ಲವೇ? ಅವರಿಗೂ ನಿಮಗೂ ಏನು ಸಂಬಂಧ ಎಂದು ಸಚಿವ ಪಾಟೀಲ್‌ ಪ್ರಶ್ನಿಸಿದರು.

ಕೊನೆಯಲ್ಲಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ‘ಕೊಡಗು ಕೃಷಿ ಇಲಾಖೆ ಉಪ ನಿರ್ದೇಶಕ ರಾಜು ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಅನ್ನಿಸುತ್ತಿದೆ. 29 ಜಿಲ್ಲೆಗಳಲ್ಲಿ ಎಲ್ಲೂ ಈ ರೀತಿಯ ದೂರು ಕೇಳಿಬರಲಿಲ್ಲ. ನನಗೂ ಬೇಸರ ತರಿಸಿದೆ. ಅಧಿಕಾರಿ, ರೈತ ಸ್ನೇಹಿಯಾಗಿ ಕೆಲಸ ಮಾಡಬೇಕು. ಇದು ಕೊನೆಯ ಎಚ್ಚರಿಕೆ; ತಪ್ಪು ತಿದ್ದಿಕೊಳ್ಳಬೇಕು. ಹಾರ್ಡ್‌ವೇರ್‌ ಶಾಪ್‌ನಲ್ಲಿ ಕೀಟನಾಶಕ ಮಾರಾಟ ತಪ್ಪು. ಕೂಡಲೇ ಕ್ರಮ ಆಗಬೇಕು’ ಎಂದು ಸೂಚಿಸಿದರು. ಅದಕ್ಕೂ ಮೊದಲ ಕೃಷಿ ಇಲಾಖೆಯ ಮಾಹಿತಿಯನ್ನು ರಾಜು ಅವರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT