ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ; ತಾಲೀಮು ಜೋರು

Last Updated 20 ಫೆಬ್ರುವರಿ 2018, 9:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಗೆ ತಾಲೀಮು ಜೋರಾಗಿದ್ದು, ಪಕ್ಷಗಳಲ್ಲಿ ಕಸರತ್ತು ಶುರುವಾಗಿದೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಭೌಗೋಳಿಕ ವೈಶಿಷ್ಟ್ಯದ ಈ ಜಿಲ್ಲೆಯಲ್ಲಿ ಜನಮನ ಗೆಲ್ಲಲು ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು ಸಿದ್ಧತೆ ಆರಂಭಿಸಿದ್ದಾರೆ.

ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿ ವಿಶ್ವದ ಗಮನ ಸೆಳೆದಿದ್ದ ಹೆಗ್ಗಳಿಕೆ ಹೊಂದಿರುವ ಜಿಲ್ಲೆ ಇದು. ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಮೂಡಿಗೆರೆ ಮೀಸಲು ಕ್ಷೇತ್ರವಾಗಿದೆ. ಕಡೂರು ಮತ್ತು ಮೂಡಿಗೆರೆಯಲ್ಲಿ ಜೆಡಿಎಸ್‌, ಚಿಕ್ಕಮಗಳೂರು ಮತ್ತು ಶೃಂಗೇರಿಯಲ್ಲಿ ಬಿಜೆಪಿ, ತರೀಕೆರೆಯಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ಇದ್ದಾರೆ. ತರೀಕೆರೆ ಕ್ಷೇತ್ರ ವ್ಯಾಪ್ತಿಯ ಹೊಸ ತಾಲ್ಲೂಕು ಅಜ್ಜಂಪುರ ಒಳಗೊಂಡಂತೆ ಎಂಟು ತಾಲ್ಲೂಕುಗಳು ಇವೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಇತರ ಪಕ್ಷಗಳವರು ಸಮಾವೇಶ,  ಮನೆಮನೆ ಭೇಟಿ ಮೊದಲಾದ ಕಾರ್ಯಕ್ರಮಗಳ ಮೂಲಕ ಮತ ಖಾತರಿ ಪ್ರಯತ್ನದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ನವರು ರಾಜ್ಯ ಸರ್ಕಾರದ ಸಾಧನೆಗಳು, ಬಿಜೆಪಿಯವರು ಕೇಂದ್ರ ಸರ್ಕಾರದ ಯೋಜನೆಗಳು, ಜೆಡಿಎಸ್‌ನವರು ಎಚ್‌.ಡಿ.ಕುಮಾರಸ್ವಾಮಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಿಳಿಸಿ ಜನರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷಗಳ ವರಿಷ್ಠರು ಜಿಲ್ಲೆಯಲ್ಲಿ ಒಂದೆರಡು ಸುತ್ತು ತಿರುಗಾಟ ಮುಗಿಸಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಅವರ ಕುಟುಂಬದವರು ಶೃಂಗೇರಿಯ ಸನ್ನಿಧಿಯಲ್ಲಿ ಅತಿರುದ್ರ ಮಹಾಯಾಗ ಕೈಂಕರ್ಯ ನೆರವೇರಿಸಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ಗ್ರಾಮವಾಸ್ತವ್ಯ, ಜನಸಂಪರ್ಕ ಸಭೆಗಳ ಮೂಲಕ ಜನರ ‘ನಾಡಿಮಿಡಿತ’ ಪರೀಕ್ಷೆಯಲ್ಲಿ ತೊಡಗಿದ್ದಾರೆ. ಕಡೂರು ಕ್ಷೇತ್ರದ ಶಾಸಕ ವೈ.ಎಸ್‌.ವಿ. ದತ್ತ ಅವರು ಕ್ಷೇತ್ರದಾದ್ಯಂತ ಪಾದಯಾತ್ರೆ ಕೈಗೊಂಡು ಜನಾಪೇಕ್ಷೆ ತಿಳಿಯುವ ಯತ್ನ ಮಾಡಿದ್ದಾರೆ. ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಅವರು ಕ್ಷೇತ್ರದ ‘ಅಭಿವೃದ್ಧಿಯ ನೋಟ’ ತಿಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್‌.ಜೀವರಾಜ್‌, ಮೂಡಿಗೆರೆ ಕ್ಷೇತ್ರದ ಬಿ.ಬಿ.ನಿಂಗಯ್ಯ ಅವರು ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳನ್ನು ಜನತೆಗೆ ಮನವರಿಕೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಜೆಡಿಎಸ್‌ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈ ಪೈಕಿ ಕಡೂರಿನಲ್ಲಿ ಹಾಲಿ ಶಾಸಕ ಬ್ರಾಹ್ಮಣ ಸಮುದಾಯದ ವೈ.ಎಸ್‌.ವಿ. ದತ್ತ, ಚಿಕ್ಕಮಗಳೂರಿನಲ್ಲಿ ಲಿಂಗಾಯತ ಸಮುದಾಯದ ಬಿ.ಎಚ್‌.ಹರೀಶ್‌, ಮೂಡಿಗೆರೆಯಲ್ಲಿ (ಮೀಸಲು ಕ್ಷೇತ್ರ) ಹಾಲಿ ಶಾಸಕ ಪರಿಶಿಷ್ಟ ಜಾತಿಯ ಬಿ.ಬಿ.ನಿಂಗಯ್ಯ, ಶೃಂಗೇರಿಯಲ್ಲಿ ಒಕ್ಕಲಿಗ ಸಮುದಾಯದ ಎಚ್‌.ಜಿ.ವೆಂಕಟೇಶ್‌ (ಎಚ್‌.ಜಿ.ಗೋವಿಂದೇಗೌಡ ಪುತ್ರ) ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ. ತರೀಕೆರೆ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನು ಪ್ರಕಟಿಸಿಲ್ಲ.

ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿಲ್ಲ. ಜನಾನುರಾಗಿ ಅಭ್ಯರ್ಥಿಗಳನ್ನು ಗುರುತಿಸಲು ‘ಜನಾಭಿಪ್ರಾಯ ಸಂಗ್ರಹ’, ‘ಆಂತರಿಕ ಸಮೀಕ್ಷೆ’ ಕಾರ್ಯದಲ್ಲಿ ಈ ಪಕ್ಷಗಳು ತೊಡಗಿವೆ. ಐದೂ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.
ಟಿಕೆಟ್‌ ಖಾತರಿಗಾಗಿ ಆಕಾಂಕ್ಷಿಗಳು ಕಸರತ್ತು ನಡೆಸಿದ್ದಾರೆ.

ಜೆಡಿಎಸ್‌ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೆ ನಿರ್ಧರಿಸಲಾಗಿತ್ತು. ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ನಂತರ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಲಾಗಿದೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾರತ ಕಮ್ಯುನಿಸ್ಟ್‌ ಪಕ್ಷವು (ಸಿಪಿಐ) ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಎಎಪಿ ಚಿಕ್ಕಮಗಳೂರು, ಶೃಂಗೇರಿ, ತರೀಕೆರೆ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾ ಸಂಚಾಲಕ ಡಾ.ಸುಂದರಗೌಡ ತಿಳಿಸಿದ್ದಾರೆ.

ಕರ್ನಾಟಕ ರಿಪಬ್ಲಿಕ್‌ ಸೇನೆ (ಕೆಆರ್‌ಎಸ್‌), ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳು ಇವೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರು ಶೃಂಗೇರಿ ಕ್ಷೇತ್ರದಿಂದ ಕಣಕ್ಕಿಳಿಯುವ ಆಶಯವನ್ನು ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಸಮೀಕ್ಷೆ ಮಾಡಿಸಿ ನಿರ್ಧಾರ ಕೈಗೊಳ್ಳುವುದಾಗಿಯೂ ಹೇಳಿದ್ದರು.

ಜಿಲ್ಲೆಯಲ್ಲಿ ಪ್ರಮುಖವಾಗಿ ‘ಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದ’, ‘ಕಾಫಿ, ಕರಿಮೆಣಸು, ಅಡಿಕೆ, ತೆಂಗು ಬೆಳೆಗಾರರ ಸಂಕಷ್ಟಗಳು’, ‘ಬಾಂಗ್ಲಾ ನುಸುಳುಕೋರರು’, ‘ನೀರಾವರಿ’, ‘ಅರಣ್ಯ ಒತ್ತುವರಿ’, ನಕ್ಸಲ್‌ ಸಮಸ್ಯೆಗಳು ಇವೆ. ಬಿಜೆಪಿಯು ‘ದತ್ತಪೀಠ’, ಕಾಂಗ್ರೆಸ್‌ ‘ಅಭಿವೃದ್ಧಿ ಮಂತ್ರ’, ಜೆಡಿಎಸ್‌ ‘ರೈತರ ಸಾಲಮನ್ನಾ’ ವಿಚಾರಗಳನ್ನು ಪಠಿಸುತ್ತಿವೆ. ದಿನೇದಿನೇ ಚುನಾವಣೆ ಕಾವು ಏರುತ್ತಿದೆ.

* * 

ವಿಧಾನಸಭಾ ಕ್ಷೇತ್ರಗಳು, ಮತದಾರರ ಅಂಕಿಅಂಶ (2017 ನವೆಂಬರ್‌ 30ಕ್ಕೆ)
ಕ್ಷೇತ್ರ ಮತದಾರರು
ಶೃಂಗೇರಿ 1,60199
ಮೂಡಿಗೆರೆ 1,65207
ಚಿಕ್ಕಮಗಳೂರು 2,07,209
ತರೀಕೆರೆ 1,77,633
ಕಡೂರು 1,92,508
ಒಟ್ಟು 9,02,756

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT