ಮಂಗಳವಾರ, ನವೆಂಬರ್ 12, 2019
28 °C

ಬಾಬಾಬುಡನ್‌ ಗಿರಿಯಲ್ಲಿ 12 ವರ್ಷಕ್ಕೊಮ್ಮೆ ಅರಳುವ ವಿಶೇಷ ಹೂವು ನೀಲಿಕುರಂಜಿ ಸೊಬಗು

Published:
Updated:
Prajavani

ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್‌ ಗಿರಿಶ್ರೇಣಿಯಲ್ಲಿ ನೀಲಿಕುರಂಜಿ ಹೂವು ಅರಳಿದೆ. 12 ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ವೈಶಿಷ್ಟ್ಯದ ಈ ಕುಸುಮ ಚಿತ್ತಾಕರ್ಷಕವಾಗಿದೆ.

ನಿಸರ್ಗ ವಿಸ್ಮಯದ ಈ ಪುಷ್ಪ ಪಶ್ಚಿಮಘಟ್ಟ, ನೀಲಗಿರಿಬೆಟ್ಟ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ‘ಸ್ಟ್ರೊಬಿಲಾಂತಸ್‌ ಕುಂತಿಯಾನ’. 

ಬಾಬಾಬುಡನ್‌ ಗಿರಿಶ್ರೇಣಿಯು 1,800 ಮೀಟರ್‌ ಎತ್ತರದಲ್ಲಿದೆ. ಇಲ್ಲಿನ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಸನಿಹದ ಪ್ರದೇಶದಲ್ಲಿ (ಪ್ರವೇಶದ್ವಾರದಿಂದ ಚಿಕ್ಕಮಗಳೂರು ಕಡೆಗಿನ ದಾರಿ ಪಕ್ಕ ಎಡಭಾಗದಲ್ಲಿ) ಕೆಲವೆಡೆ ಹೂವುಗಳು ಈಗ ಕಂಗೊಳಿಸುತ್ತಿವೆ. ಸೆಪ್ಟೆಂಬರ್‌, ಅಕ್ಟೋಬರ್‌, ನವೆಂಬರ್‌ನಲ್ಲಿ ಈ ಹೂವು ಅರಳುತ್ತವೆ. 2006ರ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಗಿರಿಶ್ರೇಣಿಯಲ್ಲಿ ಅರಳಿದ್ದವು. ಈ ಅದ್ಭುತವನ್ನು ಜನರು ನೋಡಿ ಆನಂದಿಸಿದ್ದರು.


ಅರಳಿರುವ ನೀಲಿಕುರಂಜಿ ಹೂವು

‘ಅಕಾಂತಿಯೇಸಿ ಸಸ್ಯವರ್ಗದಲ್ಲಿ‌ ಸ್ಟ್ರೊಬಿಲಾಂತಸ್‌ ಕುಂತಿಯಾನವೂ ಒಂದು. ಕೇರಳದ ಸೈಲೆಂಟ್‌ ವ್ಯಾಲಿಯ ಕುಂತಿ ನದಿ ಪ್ರದೇಶದಲ್ಲಿ ಈ ಹೂವನ್ನು ಗುರುತಿಸಿದ್ದು, ಹೀಗಾಗಿಯೇ ಇದಕ್ಕೆ ಕುಂತಿಯಾನ ಎಂದೇ ಕರೆಯಲಾಗುತ್ತದೆ. ಕೇರಳ, ತಮಿಳುನಾಡು, ಕರ್ನಾಟಕದ ಶೋಲಾ ಹುಲ್ಲುಗಾವಲಿನಲ್ಲಿ ಕಂಡುಬರುತ್ತದೆ. ತಮಿಳುನಾಡಿನ ನೀಲಿಗಿರಿ ಬೆಟ್ಟಕ್ಕೆ ಆ ಹೆಸರು ಬಂದಿದ್ದು ಈ ಹೂವಿನಿಂದಲೇ’ ಎಂದು ಕುವೆಂಪು ವಿ.ವಿ. ಅನ್ವಯಿಕ ಸಸ್ಯವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎಲ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)