ಶುಕ್ರವಾರ, ಡಿಸೆಂಬರ್ 6, 2019
21 °C

ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಭುಗಿಲೆದ್ದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಯಾಕಾಪುರದಲ್ಲಿ ಸೋಮವಾರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆಯಿಂದ ಜನರ ಆಕ್ರೋಶ ಭುಗಿಲೆದ್ದಿದೆ. ಕಲಬುರ್ಗಿ, ಚಿಂಚೋಳಿ, ಸೇಡಂ ಮುಂತಾದ ಪಟ್ಟಣಗಳಲ್ಲಿ ಸಾರ್ವಜನಿಕರು, ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ನಡೆಸಿದರು.

ಯಾಕಾಪುರ ಬಳಿ ಇರುವ ಸುಲೇಪೇಟ ಪಟ್ಟಣವನ್ನು ದಿಢೀರ್‌ ಬಂದ್‌ ಮಾಡಲಾಯಿತು. ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದರು. ಶಾಲಾ ಮಕ್ಕಳೂ ಬೀದಿಗಿಳಿದರು. ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು. ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಅತ್ಯಾಚಾರದ ಆರೋಪಿ ಯಲ್ಲಪ್ಪ (35)ನನ್ನು ಬಂಧಿಸಿದ ಪೊಲಿಸರು ವಿಚಾರಣೆಗೊಳಪಡಿಸಿದರು. ಯಾಕಾಪುರದಲ್ಲಿ ತನ್ನ ಸಹೋದರ ಮನೆಗೆ ಬಂದು ಪಾರ್ಟಿ ಮಾಡಿದ ಈತ, ಬಾಲಕಿಗೆ ಚಾಕೊಲೇಟ್‌ ಆಸೆ ತೋರಿಸಿ ಊರ ಹೊರಗೆ ಕರೆದುಕೊಂಡು ಹೋಗಿದ್ದ. ಪುಟಾಣಿ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದ. ತನ್ನ ಒಳ ಉಡುಪುಗಳನ್ನೂ ಅಲ್ಲೇ ಬಿಸಾಕಿ ಬಂದಿದ್ದ. ಬಾಲಕಿ ಶವ ಸಿಕ್ಕ ನಂತರ ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಸುಲೇಪೇಟದಲ್ಲಿ ಟೇಲರ್‌ ಕೆಲಸ ಮಾಡುತ್ತಿದ್ದ ಆರೋಪಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದೆ. ಆದರೆ, ಆತನ ಪತ್ನಿ ಪ್ರಿಯಕರನ ಜತೆಗೆ ಪರಾರಿಯಾಗಿದ್ದಾಳೆ. ಅಂದಿನಿಂದ ಆತ ಮಹಿಳೆಯರು, ಯುವತಿಯರನ್ನು ಪೀಡಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೇಡಂನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು. ಮಧ್ಯಾಹ್ನ 1ಕ್ಕೆ ಯಾಕಾಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರತಿಕ್ರಿಯಿಸಿ (+)