ಬಡಗಲಪುರ ನಾಗೇಂದ್ರ ಉಚ್ಛಾಟನೆ

7

ಬಡಗಲಪುರ ನಾಗೇಂದ್ರ ಉಚ್ಛಾಟನೆ

Published:
Updated:

ಮೈಸೂರು: ‌ಕರ್ನಾಟಕ ರಾಜ್ಯ ರೈತ ಸಂಘದ ನಿಯಮಗಳನ್ನು ಮೀರಿದ ಆರೋಪದ ಮೇಲೆ ಸಂಘದ ಅಧ್ಯಕ್ಷ ಸ್ಥಾನದಿಂದ ಬಡಗಲಪುರ ನಾಗೇಂದ್ರ ಹಾಗೂ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್ ಅವರನ್ನು ಸರ್ವಾನುಮತದಿಂದ ಉಚ್ಛಾಟಿಸಲಾಗಿದೆ ಸಂಘದ ರಾಜ್ಯ ವರಿಷ್ಠ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.

ನಂಜನಗೂಡಿನ ರೈತ ಮುಖಂಡ ವಿದ್ಯಾಸಾಗರ ರಾಮೇಗೌಡ ಅವರನ್ನು ಸಂಘದಿಂದ ಉಚ್ಛಾಟಿಸಿರುವುದಾಗಿ ಈ ಮೂವರೂ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಆದರೆ, ವಿದ್ಯಾಸಾಗರ ಅವರಿಗೆ ಷೋಕಾಸ್‌ ನೋಟಿಸನ್ನೂ ನೀಡದೇ ಕಾನೂನನ್ನು ಮೀರಿ ಈ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸಂಘದ ಸದಸ್ಯರಿಗೆ ತೀವ್ರ ಅಸಮಾಧಾನವಾಗಿದ್ದು, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಅಂತೆಯೇ, ಈ ಮೂವರ ಸಂಘದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ರಾಜ್ಯದಲ್ಲಿರುವುದು ಒಂದೇ ರೈತ ಸಂಘ. ಯಾವುದೇ ಬಣಗಳೂ ಇಲ್ಲ. ಸಂಘದಲ್ಲಿ ಒಡಕು ಮೂಡಿಸುವ ಇಂತಹ ಪ್ರಯತ್ನಗಳಿಗೆ ಸಂಘವು ಇದೇ ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಅಂತೆಯೇ, ಸಂಘಕ್ಕೆ ಅಧ್ಯಕ್ಷರಾಗಿ ಜೆ.ಎ.ಲಕ್ಷ್ಮಿನಾರಾಯಣ ಅವರನ್ನು ನೇಮಿಸಲಾಗಿದೆ. ಉಚ್ಛಾಟನೆಗೊಂಡಿದ್ದ ವಿದ್ಯಾಸಾಗರ ರಾಮೇಗೌಡ ಅವರನ್ನು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.

ರೈತೋತ್ಸವ: ರೈತರ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ‍ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 83ನೇ ಜಯಂತಿ ಅಂಗವಾಗಿ ಫೆ. 13ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರೈತೋತ್ಸವ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ 40 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !