ಗುರುವಾರ , ಸೆಪ್ಟೆಂಬರ್ 19, 2019
24 °C
ಬಾದಾಮಿ ತಾಲ್ಲೂಕಿನ ಬೀರನೂರಿನಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಸಂತ್ರಸ್ತವಾಗಿದ್ದ ಕುಟುಂಬಕ್ಕೆ ಆಸರೆ

ಕರ್ನಾಟಕ ಪ್ರವಾಹ | ಬಾಣಂತಿ, ಮಗು ಆರೈಕೆಗೆ ಮನೆ ಬಿಟ್ಟು ಕೊಟ್ಟ ಗ್ರಾ.ಪಂ. ಸದಸ್ಯ

Published:
Updated:
Prajavani

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಬೀರನೂರಿನಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಸಂತ್ರಸ್ತವಾಗಿದ್ದ ಕುಟುಂಬಕ್ಕೆ ತಮ್ಮ ವಾಸದ ಮನೆ ಬಿಟ್ಟುಕೊಟ್ಟು ಬಾಣಂತಿ ಹಾಗೂ ಎಂಟು ದಿನದ ಹಸುಗೂಸಿನ ಆರೈಕೆಗೆ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತಗೌಡ ಬಾಲಣ್ಣವರ ನೆರವಾಗಿದ್ದಾರೆ.

ಅಲ್ಲಿನ ಆಸರೆ ಕಾಲೊನಿಯಲ್ಲಿದ್ದ ತಮ್ಮ ಮನೆ ಖಾಲಿ ಮಾಡಿ ಹನುಮಂತಗೌಡ, ಕಳೆದೊಂದು ವಾರದಿಂದ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಊರಿನಿಂದ ಎರಡು ಕಿ.ಮೀ ದೂರದ ಸಂಬಂಧಿಯೊಬ್ಬರ ಹೊಲದಲ್ಲಿ ಶೆಡ್‌ನಲ್ಲಿ ವಾಸವಿದ್ದಾರೆ.

ಇದನ್ನೂ ಓದಿ: ಆಸರೆ ಮನೆ: ‘10 ವರ್ಷಗಳ ನಂತರ ಗೃಹಪ್ರವೇಶ’

ಬೀರನೂರು, ಆಗಸ್ಟ್ 7ರಂದು ಮಲಪ್ರಭೆ ಮುನಿಸಿಗೆ ತುತ್ತಾಗಿತ್ತು. ಅದೇ ದಿನ ಗ್ರಾಮದ ಶಿವಾನಂದ ಹಂಚಿನಾಳ ಪತ್ನಿ ಸುಮಾ ಅವರಿಗೆ ಹೆರಿಗೆ ನೋವು ಬಂದಿತ್ತು. ಮರುದಿನ ಬಾದಾಮಿ ತಾಲ್ಲೂಕು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನ ಬಿಟ್ಟು ಬಾಣಂತಿ ಮಗುವಿನೊಂದಿಗೆ ಕುಟುಂಬದವರು ಊರಿಗೆ ಮರಳಿದ್ದರು. ಆದರೆ ಪ್ರವಾಹದ ನೀರಿನಲ್ಲಿ ಮನೆ ಮುಳುಗಿರುವುದು ಅವರಿಗೆ ಅಘಾತ ಮೂಡಿಸಿತ್ತು. ಈ ವೇಳೆ ನೆರವಿಗೆ ನಿಂತ ಹನುಮಂತಗೌಡ ತಮ್ಮ ಮನೆಯನ್ನೇ ಹಂಚಿನಾಳ ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದರು.

‘ನೀರು ಬಂದಾಗಲೇ ಸೊಸೆಗೆ ಹೆರಿಗೆ ಆತ್ರಿ, ನಾವು ಬಡವರು. ಇಲ್ಲಿ ಆಶ್ರಯ ಸಿಗದಿದ್ದರೆ ಬಹಳ ಕಷ್ಟ ಆಗುತ್ತಿತ್ತು. ಮನೆಯಲ್ಲಿದ್ದ ಜೋಳ–ಗೋಧಿಯನ್ನು ಬಾಲಣ್ಣವರ ಕುಟುಂಬದವರು ನಮ್ಮ ಬಳಕೆಗೆ ಕೊಟ್ಟು ಹೋಗಿದ್ದಾರೆ’ ಎಂದು ಸುಮಾ ಅವರ ಭಾವ (ಪತಿಯ ಅಣ್ಣ) ಮುದುಕಪ್ಪ ಹೇಳಿದರು.

ಶಾಲೆಯೇ ಆಸರೆ: ಪಕ್ಕದ ಕಿತ್ತಲಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ಸಂತ್ರಸ್ತವಾಗಿವೆ. ಅಲ್ಲಿನ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ಸಂಗಣ್ಣ ಬಾಬಣ್ಣವರ ಕೂಡ ಕುಟುಂಬದೊಂದಿಗೆ ಸರ್ಕಾರಿ ಶಾಲೆಯಲ್ಲಿಯೇ ಆಶ್ರಯ ಪಡೆದಿದ್ದರು.

‘ಅದನ್ನು (ನೆರೆ) ಊಹಿಸಲು ಸಾಧ್ಯವಿಲ್ರಿ, ನಮ್ಮನ್ನೆಲ್ಲಾ ಬೆನ್ನು ಹತ್ತಿದಂತೆ ವೇಗವಾಗಿ ನೀರು ಬಂತು. ಉಟ್ಟಬಟ್ಟೆಯಲ್ಲೇ ಮನೆ ಬಿಟ್ಟು ಬಂದೆವು. ಶಾಲೆ ಕಟ್ಟಲು ನಾನೇ ಒಂದು ಎಕರೆ ಜಮೀನು ದಾನ ನೀಡಿದ್ದೆ. ಈಗ ನಿರಾಶ್ರಿತನಾಗಿ ಇಲ್ಲಿಯೇ ಆಸರೆ ಪಡೆಯುವಂತಾಗಿದೆ ನೋಡ್ರಿ’ ಎಂದು ಸಂಗಣ್ಣ ನಕ್ಕರು.

‘2009ರಲ್ಲಿ ಆಸರೆ ಮನೆಗಳನ್ನು ಕಟ್ಟಿದ್ದ ಜಾಗದಲ್ಲಿಯೇ ನಮಗೀಗ ವಾಸಕ್ಕೆ ಶೆಡ್ ಹಾಕುತ್ತಿದ್ದಾರೆ. ಸೋಮವಾರ ಶಾಲೆ ಆರಂಭವಾಗಲಿದೆ. ಹೀಗಾಗಿ ಭಾನುವಾರ ಮಧ್ಯಾಹ್ನ ನಾವೆಲ್ಲ ಅಲ್ಲಿಗೆ ಸ್ಥಳಾಂತರವಾಗಬೇಕಿದೆ’ ಎಂದು ಸಂಗಣ್ಣ ಸಹೋದರ ಅಯ್ಯಪ್ಪ ಧಾವಂತ ತೋರಿದರು.

ಇದನ್ನೂ ಓದಿ: ಸಂತ್ರಸ್ತರಿಗೆ ಸಿಗದ ‘ಆಸರೆ’; ಬೀದಿಗೆ ಬಿದ್ದು ಹತ್ತು ವರ್ಷ

‘ಆಹಾರ ಬೇಡ, ಮೇವು ಕಳಿಸಿ’
‘ದೂರದ ಬೆಂಗಳೂರು, ಬಳ್ಳಾರಿಯಿಂದಲೂ ದಾನಿಗಳು ನಮ್ಮೂರಿಗೆ ಬಂದು ಆಹಾರ, ಬಟ್ಟೆ ಕೊಟ್ಟಿದ್ದಾರೆ. ನಮಗೆ ಅನ್ನಕ್ಕಿಂತ ಈಗ ರಾಸುಗಳಿಗೆ ಮೇವಿನ ಅಗತ್ಯವಿದೆ. ದಯವಿಟ್ಟು ಮೇವು ಕಳಿಸಿಕೊಡಿ’ ಎಂದು ಕಿತ್ತಲಿಯ ಪ್ರಕಾಶ ಗಾಣಿಗೇರ ಕೋರುತ್ತಾರೆ.

‘ಮನುಷ್ಯರು ಬದುಕೋಕೆ ತ್ರಾಸಿಲ್ರಿ, ಮೊದಲಿಗಿಂತ ಈಗ ಚಂದ ಬದಕೀವಿ. ಪರಿಹಾರ ಕೇಂದ್ರದಲ್ಲಿ ಕೊಡುವ ಊಟವನ್ನೇ ಮರೆಸುವಷ್ಟು ತರಹೇವಾರಿ ಆಹಾರವನ್ನು ದಾನಿಗಳು ಕೊಟ್ಟಿದ್ದಾರೆ. ಆದರೆ ಮೇವು ಸಿಗುತ್ತಿಲ್ಲ. ದನಗಳನ್ನು ಉಪವಾಸ ಕೆಡವಲಾಗದೇ ನಮ್ಮೂರಿನವರು ಪಕ್ಕದ ಜಾಲಿಹಾಳ, ಕೆರೂರು ಸಂತೆಗೆ ಒಯ್ಯುತ್ತಿದ್ದಾರೆ. ಅವು ಕಟುಕರ ಪಾಲಾಗುವುದು ತಪ್ಪಿಸೋಕೆ ಮೇವು ಕಳಿಸಿ’ ಎನ್ನುತ್ತಾರೆ.

Post Comments (+)