ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಏರಿ, ಸಮಾನತೆ ಸಾರಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಗಳು ಮನೆಯ ಬೆಳಕು

ಇಂತಿಂತಹ ಕೆಲಸಗಳು ಕೇವಲ ಹುಡುಗರಿಗೆ ಮಾತ್ರ ಎಂಬುದನ್ನು ನಾನು ಒಪ್ಪಲಾರೆ. ತುಂಬಾ ಆಸೆಯಿಂದ ಬೈಕ್ ರೈಡಿಂಗ್ ಕಲಿತವಳು ನಾನು. ನನಗೆ ಇಲ್ಲಿ ಗುರು ಯಾರೂ ಇಲ್ಲ. ಹುಡುಗರು ಬೈಕ್ ಓಡುಸುವುದನ್ನು ನೋಡುತ್ತಾ ಅಭ್ಯಾಸ ಮಾಡಿದೆ. ಮಗಳು ಬೈಕ್ ಓಡಿಸುತ್ತಾಳೆ ಅಂದರೆ ಅಪ್ಪ-ಅಮ್ಮನಿಗೆ ಆತಂಕ ಸಹಜ. ಬಳಿಕ ಅವರ ಬೆಂಬಲವೂ ಸಿಕ್ಕಿತು. ಅವರನ್ನು ಖುಷಿಪಡಿಸಿದ ಹೆಮ್ಮೆಯೂ ನನಗಿದೆ. ಒಬ್ಬ ಹುಡುಗಿಯಾಗಿ ದೂರದ ಮನಾಲಿಗೆ ಬೈಕ್ ಏರಿ ಪ್ರವಾಸ ಮಾಡಿಬರುವ ಬಹುದೊಡ್ಡ ಆಸೆಯನ್ನು ಈಡೇರಿಸಿಕೊಂಡ ಆ ಕ್ಷಣಗಳು ನನ್ನ ಬಗ್ಗೆಯೇ ನನಗೆ ಹೆಮ್ಮೆ ಮೂಡಿಸಿದವು.

ತಂತ್ರಗಾರಿಕೆ ಮೊದಲಾದ ಕಲೆಗಳನ್ನು ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ ಪ್ರದರ್ಶಿಸುವಲ್ಲಿ ಹಾಗೂ ಅದನ್ನು ಸಮಾಜ ನೋಡುವ ರೀತಿಯಲ್ಲಿಯೇ ಲಿಂಗ ತಾರತಮ್ಯದ ಸೂಕ್ಷ್ಮತನ ಇದೆ. ಹುಡುಗರಿಗಷ್ಟೇ ಸೀಮಿತ ಎಂಬಂತಿರುವ ಸ್ಟಂಟ್ಸ್‍ಗಳನ್ನು ಒಂದು ಹಂತಕ್ಕೆ ಕಲಿತಿದ್ದೇನೆ. ಹೆಣ್ಣಾಗಿಯೂ ಎಲ್ಲವನ್ನು ಸಾಧ್ಯವಾಗಿಸುವ ದೃಢತ್ವ ಬೆಳೆದಿದೆ.
ಯಾವ ಮಗು ಹುಟ್ಟುತ್ತೆ ಅನ್ನೋದಕ್ಕಿಂತಾ ಅದನ್ನು ಹೇಗೆ ಬೆಳೆಸುತ್ತಾರೆ ಎಂಬುದು ಮುಖ್ಯ. ಆಸ್ತಿಗೋಸ್ಕರ ಅಪ್ಪ-ಅಪ್ಪನನ್ನು ಕೊಂದ ಮಗಳು ಎಲ್ಲಿಯೂ ಇಲ್ಲ. ಮಗಳೇ ಮನೆಗೆ ಬೆಳಕು. ಮದುವೆಯಾಗಿ ಆಕೆ ಗಂಡನ ಮನೆಗೆ ಹೋದರೆ ಈ ಮನೆ ಬೆಳಕನ್ನು ಮತ್ತೊಂದು ಮನೆಗೆ ತೆಗೆದುಕೊಂಡು ಹೋದಂತೆ. ಮಹಿಳೆ ಬಗ್ಗೆ ಕಾಳಜಿ, ಗೌರವ ತೋರಿದರೆ ಅದುವೇ ಮಹಿಳಾ ದಿನಾಚರಣೆಗೆ ಅರ್ಥ ನೀಡುತ್ತದೆ.

-ವೈಷ್ಣವಿ, ಬೈಕರ್
---------

ಜೆಟ್ ಥರಾ ಬೈಕ್ ಓಡಿಸ್ತೀಯಾ...

ಬೈಕ್ ಓಡಿಸುವುದು ಎಂದರೆ ನನಗೆ ಇಷ್ಟ. ನಾನು ಸವಾಲು ಎಂದು ಅದನ್ನು ಕಲಿತಿದ್ದಲ್ಲ. ಇಲ್ಲಿ ಗಂಡು-ಹೆಣ್ಣೆಂಬ ಭೇದ ನನಗೆ ಕಂಡಿಲ್ಲ. ಸಮಾಜದಲ್ಲಿ ಲಿಂಗ ತಾರಮತ್ಯದ ಕಂದಕವಿದ್ದರೂ ಮನೆಯಲ್ಲಿ ಅಂತಹ ಭ್ರಮೆ ಇರಲಿಲ್ಲ. ರಾಕೆಟ್ ಸೈನ್ಸ್‍ನಲ್ಲಿ ಮಹಿಳೆಯರೂ ಎಷ್ಟೋ ವರ್ಷಗಳಿಂದ ಹೆಸರು ಮಾಡಿದ್ದಾರೆ. ಹೀಗಿರುವಾಗಿ ಬೈಕ್ ಓಡಿಸುವುದು ರಾಕೆಟ್ ಸೈನ್ಸ್‍ನಷ್ಟು ಕಷ್ಟವೇನಲ್ಲವಲ್ಲ? ಕೈನೆಟಿಕ್ ಅನ್ನೇ ಬೈಕ್ ರೀತಿ ಓಡಿಸುತ್ತಿದ್ದೆ. ಜೆಟ್ ರೀತಿ ಓಡಿಸ್ತೀಯಾ ಎಂದು ಸ್ನೇಹಿತರು ಎಂದಿದ್ದೂ ಉಂಟು.

ದೂರದ ಲಡಾಕ್, ನೇಪಾಳ, ಬಾಲಿ ಮೊದಲಾದೆಡೆ ಧೈರ್ಯವಾಗಿ ಸವಾರಿ ಮಾಡಿ ಬಂದಿದ್ದೇನೆ. ಯಾವುದೂ ಕಷ್ಟ ಎನಿಸಿಲ್ಲ. ನಮ್ಮ ಮನೆಯಲ್ಲಿ ಇರುವಂತೆ ಲಿಂಗ ಸಮಾನತೆ ಸಮಾಜದ ಎಲ್ಲೆಡೆಯೂ ಮೂಡಿದರೆ ಮಹಿಳಾ ದಿನ ಆಚರಣೆಯ ಅಗತ್ಯವೇ ಇರುವುದಿಲ್ಲ.

-ಕಮಲ, ಬೈಕರ್


--------

ಬೈಕ್ ಆಸೆ ಹುಡುಗೀಯರಿಗೂ ಇರುತ್ತೆ

ಬೈಕ್ ಕೇವಲ ಹುಡುಗರು ಮಾತ್ರ ಓಡಿಸುವುದು ಅಂತಾ ಎಂದೂ ಅನಿಸಿಲ್ಲ. ಹುಡುಗಿಯರಿಗೆ ಅವಕಾಶ ಸಿಕ್ಕಿರುವುದಿಲ್ಲ ಅಷ್ಟೇ. ನಾನೇ ದುಡ್ಡು ಕೊಟ್ಟು ಬೈಕ್ ತಗೊಂಡೆ. ಯಾಕೆ ಇಷ್ಟು ದೊಡ್ಡ ಬೈಕ್ ಅಂತಾ ಕೆಲವರು ಕೇಳಿದ್ರು. ಲೈಸನ್ಸ್ ಪಡೆಯುವಾಲೂ ಇದೇ ಮಾತು ಎದುರಾಯಿತು. ಆದರೆ ಈಗ ಟ್ರೆಂಡ್ ಬದಲಾಗಿದೆ. ಮನೆಯಲ್ಲಿ ಕಾಳಜಿ ಹೆಚ್ಚು. ಅಮ್ಮನಿಗೆ ಯಾವುದೇ ವಾಹನ ಕಂಡರೂ ಭಯ. ಹೀಗಿದ್ದೂ ಅಮ್ಮನನ್ನು ಬೈಕ್‍ನಲ್ಲಿ ಅಮ್ಮನನ್ನು ಕೂರಿಸಿಕೊಂಡು ಸವಾರಿ ಮಾಡಿ ಅವರಿಗೆ ಧೈರ್ಯ ತುಂಬಿದ್ದು ಮರೆಯಲಾರದ ಪ್ರಸಂಗ.

ಮಹಿಳೆಯರಿಗೆ ಇಂತಹ ಯಾವುದೇ ಆಸಕ್ತಿಯಿದ್ದರೂ ಪ್ರೋತ್ಸಾಹಿಸಬೇಕಾದುದು ಅತ್ಯವಶ್ಯಕ. ಮನೆಯವರ ಕಾಳಜಿ ಒಪ್ಪುತ್ತೇನೆ. ಆದರೆ ಗೊತ್ತಿಲ್ಲದಂತೆ ಮಕ್ಕಳು ಕಲಿಯುವುದಕ್ಕಿಂತ ಗೊತ್ತಿದ್ದು ಕಲಿತರೆ ಹೆಚ್ಚು ಸೂಕ್ತ. ‘ಹಾಪ್ ಆನ್ ಗಲ್ರ್ಸ್’ ಎಂಬ ನಮ್ಮ ತಂಡದಲ್ಲೂ ಬೈಕ್ ಓಡಿಸುವ ತರಬೇತಿ ನೀಡುತ್ತಿದ್ದೇವೆ.

ನಾನು ಚಿಕ್ಕವಳಿದ್ದಾಗ ಸೈಕಲ್ ಕಲಿತಿಲ್ಲದಿದ್ದರೂ ಅದನ್ನು ಕೊಡಿಸಿದ್ದರು. ನನ್ನ ಕಾಲ ಮೇಲೆ ನಿಲ್ಲುವಂತೆ ಬೆಂಬಲ, ಧೈರ್ಯ ತುಂಬಿದ್ದರು. ನನ್ನ ತಮ್ಮನಿಗೂ ನನಗೂ ಯಾವುದೇ ಭೇದವಿಲ್ಲದೇ ನನ್ನನ್ನು ಬೆಳೆಸಿದ್ದಾರೆ. ಎಲ್ಲ ಮನೆಗಳಲ್ಲೂ ಆಗಬೇಕಿರುವುದು ಇದೇ.

ದಕ್ಷಿಣ ಭಾರತದ ಎಲ್ಲ ಕಡೆಯೂ ಬೈಕ್ ಪ್ರವಾಸ ಮಾಡಿದ್ದೇನೆ. ಕಳೆದ ವರ್ಷ ನನಗೆ ತುಂಬಾ ವಿಷೇಷ. ಎರಡು ಅಂತರರಾಷ್ಟ್ರೀಯ ಪ್ರವಾಸ ಮಾಡಿ ಮುಗಿಸಿದೆ. ಬಾಲಿ ಹಾಗೂ ಭೂತಾನ್‍ನಲ್ಲಿ ಡರ್ಟ್ ಬೈಕ್‍ನಲ್ಲಿ ಅರಣ್ಯ ಮಾರ್ಗದಲ್ಲಿ ಸುತ್ತಾಡಿದ್ದು ಅಭೂತಪೂರ್ವ ಅನುಭೂತಿ. ಮಹಿಳಾ ದಿನಾಚರಣೆ ಎಂಬುದು ಹೆಣ್ತನದ ಸಂಭ್ರಮ.
-ಪೂಜಾ, ಬೈಕರ್


-------

ಜಾಗೃತಿಯೇ ಮದ್ದು

ಗಾಡಿ ಓಡಿಸುವುದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸೈ ಎನಿಸಿಕೊಂಡವಳು ನಾನು. ಮಹಿಳಾ ಬೈಕರ್‍ಗಳೇ ನನಗೆ ಸ್ಫೂರ್ತಿ. ಹಣ್ಮಕ್ಕಳಿಂದಲೂ ಇದು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ಹೆಮ್ಮೆ ನನಗಿದೆ. ಬೈಕ್ ಏರಿ ಏಕಾಂಗಿಯಾಗಿ ಇಡೀ ದೇಶ ಸುತ್ತಿದ್ದೇನೆ. ಜನರೊಂದಿಗೆ ಹೆಚ್ಚೆಚ್ಚು ಬೆರೆಯುವುದು ನನ್ನ ಹವ್ಯಾಸ.

ಬಿಹಾರ, ಪಶ್ಚಿಮ ಬಂಗಾಳದಂತಹ ಕಡೆ ಒಬ್ಬಂಟಿಯಾಗಿ ಹೋಗಬಾರದು ಎಂದು ಸಲಹೆ ನೀಡಿದವರೇ ಹೆಚ್ಚು. ಆದರೆ ನನ್ನ ಮೇಲೆ ನನಗಿದ್ದ ನಂಬಿಕೆ ನನಗೆ ದೊಡ್ಡ ಶಕ್ತಿ. ಮಹಿಳೆಯರು ತಮ್ಮ ಬಗ್ಗೆ ತಾವು ಜಾಗರೂಕರಾಗಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ನನ್ನ ಅನುಭವ.

ಬೆಂಗಳೂರಿನ ವಿಚಾರಕ್ಕೆ ಬಂದರೆ ಶೇ 50ರಷ್ಟು ಲಿಂಗ ಸಮಾನತೆ ಕಾಣಬಹುದು. ಕೆಲವು ಕಡೆ ಇನ್ನೂ ಸುಧಾರಿಸಬೇಕಿದೆ. ಶಿಕ್ಷಣ ಈ ದಿಕ್ಕಿನಲ್ಲಿ ನೆರವಾಗಬಲ್ಲದು. ಆದರೆ ಸುಶಿಕ್ಷಿತರು ಎನಿಸಿಕೊಂಡವರೇ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುತ್ತಿರುವ ರೀತಿ ಬದಲಾಗಿದೆ. ಹಳ್ಳಿಗರ ಸಂಸ್ಕಾರಗಳು ನಗರದ ಮಂದಿಯಲ್ಲಿ ಕ್ರಮೇಣ ಕಾಣೆಯಾಗುತ್ತಿರುವುದು ವಿಪರ್ಯಾಸ.

ಹುಡುಗರಿಗೆ ಇರುವ ಸ್ವಾತಂತ್ರ್ಯ ಹಾಗೂ ಅವಕಾಶಗಳು ಹುಡುಗಿಯರಿಗೆ ಇಲ್ಲ ಎಂಬ ಮಾತನ್ನು ಒಪ್ಪುತ್ತೇನಾದರೂ ಅದು ಅರ್ಧಸತ್ಯ. ಮಹಿಳಾ ಸಬಲೀಕರಣದ ಮಾತುಗಳೇ ಈಗ ಹೆಚ್ಚಾಗಿವೆ. ಈಗ ಪುರುಷರಿಗೂ ಗೌರವ ನೀಡಬೇಕಾಗಿದೆ. ಪುರುಷರು ಕೆಟ್ಟವರು ಎಂಬ ಮನಸ್ಥಿತಿ ತಪ್ಪು. ಮಹಿಳೆಯರೆಲ್ಲರೂ ಸರಿ ಎಂದು ಹೇಳಲಾರೆ. ಪುರುಷರ ಬೆಂಬಲವಿಲ್ಲದೆ ಮಹಿಳೆ ಬೆಳೆಯಲಾರಳು. ಸ್ತ್ರೀ-ಪುರುಷ ಸಮಾನತೆಯಿಂದ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ.

-ದಶಮಿ ರಾಣಿ, ಬೈಕರ್


----

ಜೀವದಾತೆಯ ಸಂಭ್ರಮದ ದಿನ
18ನೇ ವರ್ಷಕ್ಕೆ ಬೈಕ್ ರೈಡಿಂಗ್ ಶುರು ಮಾಡಿದ್ದೆ. ಮನೆಯವರನ್ನು ಒಪ್ಪಿಸಿಯೇ ರಾಯಲ್ ಎನ್‍ಫೀಲ್ಡ್ ತೆಗೆದುಕೊಂಡೆ. ಹುಡುಗಿ ಬೈಕ್ ಓಡಿಸ್ತಾಳೆ ಅನ್ನೋದೆ ಎಲ್ಲ ಜನರಿಂದ ವ್ಯಕ್ತವಾಗುವ ಮೊದಲ ಆಕ್ಷೇಪ. ಇದಕ್ಕೆ ಆರಂಭದಲ್ಲಿ ಮನೆಯವರೂ ಹೊರತಾಗಿರಲಿಲ್ಲ. ಇಂತಹ ಮನಸ್ಥಿತಿಯೇ ಮಹಿಳೆಯರನ್ನು ಪ್ರಯೋಗಾತ್ಮಕತೆಯಿಂದ ದೂರವಿರುವಂತೆ ಮಾಡುತ್ತದೆ.

‘ಹಾಪ್ ಆನ್ ಗಲ್ರ್ಸ್’ ಕ್ಲಬ್ ಸೇರಿದ ಮೇಲೆ ನನ್ನ ಉತ್ಸಾಹ ನೂರ್ಮಡಿಯಾಯಿತು. ಒಬ್ಬರನ್ನೊಬ್ಬರು ನೋಡಿ ಕಲಿಯುವುದು, ಕಲಿಸುವುದು ಸಾಕಷ್ಟಿದೆ. ದೂರದೂರಿಗೆ ಹೋದ ವೇಳೆ ಗಾಡಿ ಕೈಕೊಟ್ಟಾಗ ಹೇಗೆ ಮಹಿಳೆಯೊಬ್ಬಳು ತನ್ನ ಸಾಮಥ್ರ್ಯದಿಂದ ಸಮಸ್ಯೆಯಿಂದ ಹೊರ ಬರುತ್ತಾಳೆ ಎಂಬ ಸಂಗತಿಗಳೇ ಸ್ಫೂರ್ತಿದಾಯಕ.

ಮಹಿಳಾ ಬೈಕ್ ರೈಡರ್ ಆಗಿದ್ದು ಖುಷಿ ಕೊಟ್ಟಿದೆ. ಟ್ರಾಫಿಕ್‍ನಲಿ ಜನರು ಕುತೂಹಲದಿಂದ ನೋಡುತ್ತಾರೆ. ಶಾಲಾ ಮಕ್ಕಳು ಚಪ್ಪಾಳೆ ತಟ್ಟಿ ಅಭಿನಂದಿಸುತ್ತಾರೆ. ಪೋಷಕರು ಎಲ್ಲವನ್ನೂ ಕಲಿಯಲು ಅವಕಾಶ ನೀಡಿದಾಗ ಅದನ್ನು ದುರುಪಯೋಗ ಮಡಿಕೊಳ್ಳಬಾರದು ಎನ್ನುವುದು ನನ್ನ ಸಲಹೆ. ಇದು ಎಷ್ಟೋ ಹೆಣ್ಣುಮಕ್ಕಳಿಗೆ ಸಿಗುವುದಿಲ್ಲ ಕೂಡಾ.
ಒಂದು ಜೀವಕ್ಕೆ ಜೀವ ಕೊಡುವ ಹೆಣ್ಣಾಗಿ ಜನಿಸಿರುವುದೇ ಹೆಮ್ಮೆಯ ಸಂಗತಿ. ಇದು ಅಪರೂಪದ ಅವಕಾಶ. ಮಹಿಳಾ ದಿನವನ್ನು ಎಲ್ಲರೂ ಸೇರಿ ಸಂಭ್ರಮಿಸಬೇಕು.

-ಸ್ನೇಹಾ, ಬೈಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT