ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಕೃಷಿ ಉತ್ತೇಜನಕ್ಕೆ ಹೊಸ ಯೋಜನೆ

Last Updated 9 ನವೆಂಬರ್ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ‘ಗುಂಪು ಕೃಷಿ’ (ಕ್ಲಸ್ಟರ್‌ ಫಾರ್ಮಿಂಗ್) ಆರಂಭಿಸಲು ಪ್ರೋತ್ಸಾಹ ನೀಡುವ ಹೊಸ ಯೋಜನೆಯೊಂದನ್ನುಸಹಕಾರ ಇಲಾಖೆ ಜಾರಿ ತರಲಿದೆ.

ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ವಿಜ್ಞಾನಿಗಳು ಮತ್ತು ತಜ್ಞರಿಗೆ ಸೂಚಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಶುಕ್ರವಾರಲ್ಲಿ ತಿಳಿಸಿದರು.

ಸುಮಾರು 50 ರೈತರ ತಂಡ ‘ಗುಂಪು ಕೃಷಿ’ ಮಾಡಲು ಮುಂದೆ ಬಂದರೆ, ಆ ಗುಂಪಿಗೆ ಸಹಕಾರ ಸಂಘದ ಮಾನ್ಯತೆ ನೀಡಲಾಗುವುದು. 250 ರಿಂದ 300 ಎಕರೆ ಪ್ರದೇಶದಲ್ಲಿ ಕೃಷಿ ಕಾರ್ಯ ಕೈಗೊಳ್ಳಬಹುದು. ಇದಕ್ಕೆ ಬಿತ್ತನೆ ಬೀಜದಿಂದ ಹಿಡಿದು ಟ್ರಾಕ್ಟರ್‌, ಟಿಲ್ಲರ್‌ವರೆಗೆ ಖರ್ಚಿನ ಬಾಬ್ತನ್ನು ಸಾಲ ನೀಡಲಾಗುವುದು. ಕೃಷಿ ಉತ್ಪನ್ನವನ್ನು ಪ್ಯಾಕಿಂಗ್‌ ಮಾಡಿ ಮಾರಾಟ ಮಾಡುವ ಹಂತದವರೆಗೆ ಎಲ್ಲ ಬಗೆಯ ಮೌಲ್ಯವರ್ಧಿತ ನೆರವನ್ನು ಗುಂಪುಗಳಿಗೆ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರಕ್ಕೆ ಈ ಯೋಜನೆ ಬಗ್ಗೆ ತಿಳಿಸಲಾಗಿದೆ. ಈಗಾಗಲೇ ಉತ್ತರಖಂಡದಲ್ಲಿ ಇದೇ ರೀತಿಯ ಯೋಜನೆ ಜಾರಿ ತಂದಿರುವುದನ್ನು ಕೇಂದ್ರ ತಿಳಿಸಿದೆ. ಅಲ್ಲಿನ ಮಾದರಿಯನ್ನು ಅಧ್ಯಯನ ಮಾಡಲಾಗುವುದು. ಆರಂಭದಲ್ಲಿ ಒಂದೆರಡು ಜಿಲ್ಲೆಗಳಲ್ಲಿ ಪೈಲಟ್‌ ಯೋಜನೆಯಾಗಿ ಜಾರಿ ಮಾಡಿ, ಬಳಿಕ ರಾಜ್ಯವ್ಯಾಪಿ ಅನುಷ್ಠಾನಗೊಳಿಸಲಾಗುವುದು ಎಂದು ಕಾಶೆಂಪೂರ ತಿಳಿಸಿದರು.

ಕಾಯಕ ಯೋಜನೆ ಡಿಸೆಂಬರ್‌ನಲ್ಲಿ ಜಾರಿ: ಸ್ವಸಹಾಯ ಗುಂಪುಗಳ ಮೂಲಕ ಸಣ್ಣ ಉದ್ಯಮಗಳನ್ನು ಆರಂಭಿಸು
ವವರಿಗೆ ₹10 ಲಕ್ಷದವರೆಗೆ ಸಾಲ ನೀಡುವ ‘ಕಾಯಕ’ ಯೋಜನೆಗೆ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಆಹಾರ ಉತ್ಪನ್ನಗಳ ತಯಾರಿಕೆ, ಮಡಕೆ ಮತ್ತು ಅದರ ಉಪ ಉತ್ಪನ್ನಗಳು, ಗಾರ್ಮೆಂಟ್ಸ್‌, ಅಡಿಕೆ ಹಾಳೆಯ ವಿವಿಧ ಉತ್ಪನ್ನಗಳ ತಯಾರಿಕೆ ಸೇರಿ ಹಲವು ಬಗೆಯ ಸಣ್ಣ ಉದ್ಯಮಗಳನ್ನು ಆರಂಭಿಸಲು ಸಾಲ ನೀಡಲಾಗುವುದು. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಬಹುದಾಗಿದೆ.

‘ಬಡವರ ಬಂಧು’ 22 ರಂದು ಜಾರಿ
ಬೀದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ದಿನ ₹ 10 ಸಾವಿರದವರೆಗೆ ಸಾಲ ನೀಡುವ ‘ಬಡವರ ಬಂಧು’ ಯೋಜನೆಗೆ ಇದೇ 22 ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದರಿಂದ ‘ಪೂಜಾರಿ ಸಾಲ’ ಮೇಳದ ರೀತಿ ದುರುಪಯೋಗ ಆಗಬಹುದು. ಆದ್ದರಿಂದ ಶೇ 4 ರಷ್ಟು ಬಡ್ಡಿ ವಿಧಿಸಬೇಕು ಎಂದು ಬ್ಯಾಂಕ್‌ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಒಪ್ಪಲಿಲ್ಲ. ಅಂತಿಮವಾಗಿ ಶೂನ್ಯ ಬಡ್ಡಿ ದರದಲ್ಲೇ ಸಾಲ ನೀಡುವ ಕಡತಕ್ಕೆ ಗುರುವಾರ ಸಹಿ ಮಾಡಿದರು. ಇದರಿಂದ ರಾಜ್ಯದ 53,000 ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT