53 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಸಾಲ

7
‘ಬಡವರ ಬಂಧು’: 3 ತಿಂಗಳ ಅವಧಿಗೆ ಕಿರುಸಾಲ ಯೋಜನೆ

53 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಸಾಲ

Published:
Updated:

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿದ್ದ ‘ಬಡವರ ಬಂಧು’ ಯೋಜನೆಯಡಿ, ಪ್ರಸಕ್ತ ಸಾಲಿನಲ್ಲಿ 53 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ), 10 ಮಹಾನಗರ ಪಾಲಿಕೆ ಮತ್ತು 18 ಜಿಲ್ಲಾ ನಗರ ಪ್ರದೇಶಗಳಲ್ಲಿ ಬ್ಯಾಂಕಿಂಗ್‌ ಸೇವೆ ಮತ್ತು ಸಾಲದ ವ್ಯವಸ್ಥೆ ಕಲ್ಪಿಸುವ ಈ ಯೋಜನೆಯ ರೂಪುರೇಷೆ ಸಿದ್ಧವಾಗಿದೆ. ಅಧಿಕೃತ ಆದೇಶ ಹೊರಬೀಳಲಷ್ಟೇ ಬಾಕಿಯಿದೆ.

ಯೋಜನೆಯಡಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕುಗಳು, ಮಹಿಳಾ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಅರ್ಹ ಫಲಾನುಭವಿಗಳಿಗೆ ₹ 2 ಸಾವಿರದಿಂದ ₹ 10 ಸಾವಿರವನ್ನು ಮೂರು ತಿಂಗಳ ಅವಧಿಗೆ ಶೇ 4ರ ಬಡ್ಡಿ ದರದಲ್ಲಿ ವಿತರಿಸಲು ಉದ್ದೇಶಿಸಲಾಗಿದೆ.

ಆದರೆ, ಸಾಲಕ್ಕೆ ಬಡ್ಡಿ ವಿಧಿಸುವ ಆರ್ಥಿಕ ಇಲಾಖೆಯ ಪ್ರಸ್ತಾವದ ಬಗ್ಗೆ ಗೊಂದಲ ಉಂಟಾಗಿದೆ. ಶೂನ್ಯ ಬಡ್ಡಿ
ದರದಲ್ಲಿ ಸಾಲ ಕೊಡವಂತೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸೂಚಿಸಿದ್ದಾರೆ. ಈ ಕಾರಣಕ್ಕೆ ಆದೇಶ ಹೊರಡಿಸುವುದು ವಿಳಂಬವಾಗಿದೆ ಎಂದು ಸಹಕಾರ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರೂಪೇ ಕಾರ್ಡ್‌ ನೀಡಿ ಸಾಲ ನೀಡಲಾಗುವುದು. ಸಮರ್ಪಕವಾಗಿ ಸಾಲ ಮರುಪಾವತಿಸಿದರೆ ಸಾಲ ನವೀಕರಿಸಲು ಮತ್ತು ಶೇ 10ರಷ್ಟು ಮಿತಿ ಹೆಚ್ಚಿಸಲು (₹ 15ಸಾವಿರದವರೆಗೆ) ಅವಕಾಶ ನೀಡಲಾಗಿದೆ.

ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರ ಅಧ್ಯಕ್ಷತೆಯ, ಸಹಕಾರ ಸಂಘಗಳ ಉಪ ನಿಬಂಧಕರನ್ನೂ ಒಳಗೊಂಡ ಜಿಲ್ಲಾಮಟ್ಟ ಸಮಿತಿ, ಸಾಲ ನೀಡಬೇಕಾದ ಬ್ಯಾಂಕು ಮತ್ತು ಫಲಾನುಭವಿಗಳನ್ನು ಗುರುತಿಸಲಿದೆ. ನಿಗದಿಪಡಿಸಿದ ಬ್ಯಾಂಕುಗಳು ಫಲಾನುಭವಿಗಳ ಶೂನ್ಯ ಬಾಲೆನ್ಸ್‌ ಉಳಿತಾಯ ಖಾತೆ ತೆರೆದು, ಸಾಲ ಅರ್ಜಿಗಳನ್ನು ಸ್ವೀಕರಿಸಿ, ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಾಲ ವಿತರಿಸಬೇಕು. ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ.

ಜಿಲ್ಲಾಮಟ್ಟದ ಸಮಿತಿ ಸಭೆ ಸೇರಿ ನಗರ ಪ್ರದೇಶಕ್ಕೆ ಒಂದು ಬ್ಯಾಂಕ್‌ ಅನ್ನು ಗುರುತಿಸಬೇಕು. ಈ ಬ್ಯಾಂಕಿನ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳು ಹೆಚ್ಚು ಇರುವ ಮಾರುಕಟ್ಟೆ ಪ್ರದೇಶದಲ್ಲಿ ಮೊಬೈಲ್‌ ಘಟಕ ಸ್ಥಾಪಿಸಬೇಕು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಳೀಯ ಸಂಸ್ಥೆಯಲ್ಲಿ ಲಭ್ಯವಿರುವ ಮಾಹಿತಿ ಪಡೆದು ಬೀದಿಬದಿ ವ್ಯಾಪಾರಿಗಳ ಪಟ್ಟಿ ಸಿದ್ಧಪಡಿಸಬೇಕು. ಗುರುತಿನಚೀಟಿ ಇಲ್ಲದವರಿಗೆ ಸಾಲ ವಿತರಿಸಲು ಅವಕಾಶ ಇಲ್ಲ.

ವ್ಯವಹಾರ ಪ್ರತಿನಿಧಿಗಳನ್ನು ನೇಮಿಸುವ ಮೂಲಕ ಪಿಗ್ಮಿ ಮತ್ತು ಸಾಲದ ಮೊತ್ತ ಸಂಗ್ರಹಿಸಲು ಬ್ಯಾಂಕು ವ್ಯವಸ್ಥೆ ಮಾಡಿಕೊಳ್ಳಬಹುದು. ಪ್ರತಿ ತ್ರೈಮಾಸಿಕ ಹೊರಬಾಕಿ ಆಧರಿಸಿ, ಬಡ್ಡಿ ಸಹಾಯಧನವನ್ನು ಕ್ಲೇಮ್‌ ಮಾಡಿದರೆ, ಆ ಮೊತ್ತವನ್ನು ಬ್ಯಾಂಕುಗಳಿಗೆ ಸರ್ಕಾರ ಭರಿಸಲಿದೆ ಎಂದೂ ಮೂಲಗಳು ತಿಳಿಸಿವೆ.

**

ಶೂನ್ಯ ಬಡ್ಡಿದರದಲ್ಲಿ ಕಿರುಸಾಲ ಕೊಡಬೇಕು ಎನ್ನುವುದು ಉದ್ದೇಶ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಸೋಮವಾರ (ನ. 5) ಚರ್ಚಿಸಿ, ಆದೇಶ ಹೊರಡಿಸಲಾಗುವುದು.

-ಬಂಡೆಪ್ಪ ಕಾಶೆಂಪೂರ, ಸಹಕಾರ ಸಚಿವ

**

ಎಲ್ಲಿ; ಎಷ್ಟು ಮಂದಿಗೆ

ಬೆಂಗಳೂರು (ಬಿಬಿಎಂಪಿ); 5,000

10 ಮಹಾನಗರಪಾಲಿಕೆ; ತಲಾ 3,000

(ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ)

18 ಜಿಲ್ಲಾ ನಗರ ಪ್ರದೇಶ; ತಲಾ 1,000

(ಬಾಗಲಕೋಟೆ, ಬೀದರ್‌, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಹಾಸನ, ಹಾವೇರಿ, ಕಾರವಾರ. ಕೋಲಾರ, ಕೊಪ್ಪಳ, ಮಡಿಕೇರಿ, ಮಂಡ್ಯ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಪಾಲಿಕೆ ವ್ಯಾಪ್ತಿ)

**

ಯಾರಿಗೆ ಅನ್ವಯ

* ತಳ್ಳುಬಂಡಿ, ಮೋಟಾರು ವಾಹನಗಳಲ್ಲಿ ಪಾನೀಯ, ತಿಂಡಿ, ಊಟ ವಿತರಿಸುವವರು

* ಮನೆಮನೆಗಳಿಗೆ ತರಕಾರಿ, ಹೂ, ಹಣ್ಣು, ಕಾಯಿ ಮಾರುವವರು. ಬುಟ್ಟಿ ವ್ಯಾಪಾರಿಗಳು

* ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಮಾರಾಟ ಮಾಡುವವರು

* ಆಟದ ಸಾಮಾನು ಗೃಹೋಪಯೋಗಿ ವಸ್ತು ಮಾರುವವರು

ಯಾರಿಗೆ ಅನ್ವಯಿಸುವುದಿಲ್ಲ

* ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ, ಪರಿಸರ ಹಾನಿ ವಸ್ತುಗಳ ಮಾರಾಟಗಾರರಿಗೆ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !