ಬುಧವಾರ, ಆಗಸ್ಟ್ 21, 2019
28 °C

ಪ್ರವಾಹ; ಗೂಡ್ಸ್ ರೈಲಿನ ಮೊರೆಹೋದ ಕೆಪಿಸಿಸಿ ತಂಡ

Published:
Updated:
Prajavani

ಬಾಗಲಕೋಟೆ: ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿರುವ ಪರಿಹಾರ ಕಾರ್ಯದ ಅಧ್ಯಯನಕ್ಕೆ ಶುಕ್ರವಾರ ಶಾಸಕ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಹೊರಟಿದ್ದ ಕೆಪಿಸಿಸಿ ತಂಡ ಸ್ವತಃ ತಾನೇ ಸಂಕಷ್ಟಕ್ಕೆ ಸಿಲುಕಿತು. ಮಧ್ಯಾಹ್ನದವರೆಗೂ ಗದಗ ಜಿಲ್ಲೆಯಲ್ಲಿಯೇ ಉಳಿದು ಕೊನೆಗೆ ಗೂಡ್ಸ್ ರೈಲಿನಲ್ಲಿ ನಗರಕ್ಕೆ ಬಂದಿಳಿಯಿತು.

ಹುಬ್ಬಳ್ಳಿಯಿಂದ ನಸುಕಿನಲ್ಲಿಯೇ ಹೊರಟಿದ್ದ ತಂಡಕ್ಕೆ ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿ 219ರ ಸೇತುವೆ ಮಲಪ್ರಭೆಯಲ್ಲಿ ಮುಳುಗಿದ್ದ ಕಾರಣ ಬಾಗಲಕೋಟೆ ಜಿಲ್ಲೆ ಪ್ರವೇಶಿಸಲು ಆಗಲಿಲ್ಲ. ಬೋಟ್‌ನಲ್ಲಿ ಬರಲು ಪ್ರಯತ್ನಿಸಿದರೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಹೀಗಾಗಿ ರೋಣ ಮಾರ್ಗವಾಗಿ ಬಾದಾಮಿಗೆ ಬರಲು ಮುಂದಾದರು. ಆದರೆ ಚೊಳಚಗುಡ್ಡದ ಬಳಿಯ ಸೇತುವೆ ಮುಳುಗಡೆಯಾಗಿ ಅಲ್ಲಿಯೂ ಸಂಪರ್ಕ ಕಡಿತಗೊಂಡಿತ್ತು.

ರೈಲಿನಲ್ಲಿ ಬಂದಿಳಿದರು: ವಾಪಸ್ ಗದಗ ಜಿಲ್ಲೆ ಹೊಳೆಆಲೂರಿಗೆ ಮರಳಿದ ತಂಡ, ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೈಲ ಸಾಗಣೆ ಮಾಡುತ್ತಿದ್ದ ಗೂಡ್ಸ್ ರೈಲು ಹತ್ತಿ ಗಾರ್ಡ್ ಬೋಗಿಯಲ್ಲಿ ಕುಳಿತು ಮಧ್ಯಾಹ್ನ ಬಾಗಲಕೋಟೆಗೆ ಬಂದಿಳಿಯಿತು. ನಿಗದಿಯಂತೆ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಮಹಾತ್ಮಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಆರಂಭಿಸಬೇಕಿತ್ತು. ಈ ತಂಡದಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಇದ್ದಾರೆ.

‘ಪ್ರಯಾಣಿಕರ ರೈಲು ಬರುವುದು ತಡ ಇದ್ದ ಕಾರಣ ಗೂಡ್ಸ್ ರೈಲಿಗೆ ಬಂದೆವು. ಇಲ್ಲಿಂದ ಮುಧೋಳ, ಜಮಖಂಡಿ ಮೂಲಕ ಅಥಣಿಗೆ ತೆರಳಲಿದ್ದೇವೆ‘ ಎಂದು ಎಚ್.ಕೆ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)