ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಮನಿ ಬಿರುಕು ಬಿಡಾಕತ್ಯಾವ್ರಿ: ಪ್ರವಾಹ ಪೀಡಿತ ಭಾಗದ ಮಕ್ಕಳ ಅಳಲು

Last Updated 18 ಡಿಸೆಂಬರ್ 2019, 1:33 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಘಟಪ್ರಭಾ ಮಹಾಪೂರದಾಗ ವಾರಗಟ್ಟಲೇ ನಮ್ಮ ಮನ್ಯಾಗ ನೀರು ನಿಂತಿತ್ತು. ಈಗ ಮನಿ ಸೀಳು (ಬಿರುಕು) ಬಿಡಾಕ ಹತ್ಯಾವ್ರಿ, ಸ್ವಲ್ಪ ದಿನದಾಗ ಬೀಳ್ತಾವ. ಈಗಾಗ್ಲೇ ಒಂದಷ್ಟು ಬಿದ್ದಾವ. ಪಂಚಾಯ್ತಿಯೋರಿಗೆ ಹೇಳಿದ್ರ,ಈಗ ಬಿದ್ರ ಏನ್‌ ಮಾಡಾಕ ಆಗ್ತದ ಅಂತಾರ. ಅಪ್ಪಾ–ಅವ್ವಾಗ ಅದ ಚಿಂತಿ ಆಗೈತಿ. ನಾವ್ ಇದನ್ನ ಯಾರ ಹತ್ರ ಹೇಳೂದ್ರಿ?’

ಮುಧೋಳ ತಾಲ್ಲೂಕಿನ ಗುಲಗಾಲ ಜಂಬಗಿಯ 10ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಬಾಡಗಿ ಮಂಗಳವಾರ ಇಲ್ಲಿ ಅಳಲು ತೋಡಿಕೊಂಡರು.

ಬೆಂಗಳೂರಿನ ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಪ್ರವಾಹ ಪೀಡಿತ ಪ್ರದೇಶಗಳ ಮಕ್ಕಳ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಲು ಅವರೊಂದಿಗೆ ಮಾಧ್ಯಮ ಸಂವಾದ ಆಯೋಜಿಸಿತ್ತು. ಈ ವೇಳೆ ಚೈತ್ರಾ ತಮ್ಮ ಕುಟುಂಬದ ಸಂಕಷ್ಟ ಬಿಚ್ಚಿಟ್ಟರು.

‘ಪ್ರವಾಹದಲ್ಲಿ ಹಾನಿಗೀಡಾದ ಮನೆಗಳನ್ನು ಎ, ಬಿ ಮತ್ತು ಸಿ ಎಂದು ಕೆಟಗರಿ ಮಾಡಿ ಪರಿಹಾರ ನಿಗದಿಪಡಿಸಲಾಗು
ತ್ತಿದೆ. ಆದರೆ ನಮ್ಮೂರಾಗ ಪೂರಾ ಬಿದ್ದ ಮನೀನ ಯಾವ ಕೆಟಗರಿಗೂ ಸೇರಿಸಿಲ್ರಿ’ ಎಂದು ಪದ್ಮಾ ರಂಗನ್ನವರ ಹೇಳಿದರು.

‘ಪ್ರವಾಹದ ನೀರು ನಮ್ ಮನೀಗ ನುಗ್ಗಿತ್ರಿ. ನನ್ ಸೈಕಲ್ ಅದರಾಗ ಮುಳುಗಿತ್ತು. ಈಗ ತುಕ್ಕು ಹಿಡಿದೈತಿ. 3 ಕಿ.ಮೀ ದೂರ ಸಾಲಿಗೆ ನಡ್ಕೊಂಡು ಹೋಗಾಕತ್ತೀನ್ರಿ’ ಎಂದು ರೂಗಿ ಗ್ರಾಮದ ನಾಗರಾಜ ಗೌರನ್ನವರ ಹೇಳಿಕೊಂಡರು.

‘ಊರಿಗೆ ಎರಡನೇ ಸಲ ನೀರು ನುಗ್ಗಿದಾಗ ಕೈಗೆ ಬಂದ ಮಗ ಲೋ ಬಿ.ಪಿ ಆಗಿ ಎದೆ ಒಡೆದುಕೊಂಡು ಸತ್ತು
ಹೋದ. 40 ದಿನಗಳಾದರೂ ನನಗೆ ಪರಿಹಾರ ಬಂದಿಲ್ರಿ’ ಎಂದು ಪಟ್ಟದಕಲ್ಲಿನ ರಜಿಯಾ ಬೇಗಂ ಕಣ್ಣೀರುಗರೆದರು.

‘ಹೊಲದಾಗ ನೀರು ನಿಂತು ಕೆಸರು ಆಗಿ ಇನ್ನೂ ಹಿಂಗಾರಿ ಬಿತ್ತಾಕ ಆಗಿಲ್ರಿ. ಊರಾಗ ಕೆಲಸಾನೂ ಇಲ್ರಿ. ಸೊಳ್ಳಿ ಕಾಟ ಭಾಳ ಆಗೈತಿ. ಮಂದಿ, ಸಾಲು ಹಿಡಿದು ಡೆಂಗಿ ಜ್ವರ ಬಂದು ಮಲಗ್ಯಾರ್ರಿ, ಕೇಳೋರು ದಿಕ್ಕಿಲ್ರಿ’ ಎಂದು ಹುನಗುಂದ ತಾಲ್ಲೂಕಿನ ಹಿರೇಮಾಗಿಯ ಬಾಲಕಿ ಅಶ್ವಿನಿ ವಡ್ಡರ ಹೇಳಿದರು. ಅಶ್ವಿನಿ ಕೂಡ ಟೈಫಾಯ್ಡ್‌ನಿಂದ ಈಚೆಗೆ ಚೇತರಿಸಿಕೊಂಡಿದ್ದಾರೆ.

***

15 ದಿನಗಳಿಂದ ಓಡಾಡಿ ಮಕ್ಕಳ ಸಮಸ್ಯೆಗಳ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಶೀಘ್ರ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುವುದು
-ಎಂ.ಎಂ.ಕೃಪಾ, ಸಂಯೋಜಕಿ, ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT