ತುಮಕೂರು: ಅರಣ್ಯ ಭೂಮಿಯತ್ತ ಭೂಗಳ್ಳರ ದೃಷ್ಟಿ

7
9 ಜೆಸಿಬಿ ವಶ, ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲು

ತುಮಕೂರು: ಅರಣ್ಯ ಭೂಮಿಯತ್ತ ಭೂಗಳ್ಳರ ದೃಷ್ಟಿ

Published:
Updated:

ತುಮಕೂರು: ಬಗರ್‌ಹುಕುಂ ಜಮೀನು ಸಕ್ರಮಕ್ಕೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ 2019ರ ಮಾರ್ಚ್‌ವರೆಗೆ ಕಾಲಾವಕಾಶ ನೀಡಿದೆ. ಈ ಅವಕಾಶ ಜಿಲ್ಲೆಯಲ್ಲಿ ಭೂಗಳ್ಳರನ್ನು ಸೃಷ್ಟಿಸುತ್ತಿದೆ.

ಅರಣ್ಯ ಪ್ರದೇಶ ಎಂದು ಇಂಡೀಕರಣ ಆಗದ ಭೂಮಿಗಳನ್ನು ದಿಢೀರನೆ ನಗರ ಪ್ರದೇಶದ ಕೆಲವು ಜನರು ಒತ್ತುವರಿ ಮಾಡಿಕೊಂಡು ಗೇಯ್ಮೆ ಮಾಡಿದ್ದಾರೆ.

ಹೀಗೆ ಇಂಡೀಕರಣ ಆಗದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುತ್ತಿದ್ದಾಗ ದಾಳಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 2, ಗುಬ್ಬಿ 2, ಶಿರಾ 2, ಕೊರಟಗೆರೆ 1, ತುಮಕೂರು ತಾಲ್ಲೂಕಿನಲ್ಲಿ 2 ಜೆಸಿಬಿಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆಸಿಬಿ ಮಾಲೀಕರು ಮತ್ತು ಒತ್ತುವರಿ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೆಲವು ಕಡೆಗಳಲ್ಲಿ ಅಧಿಕಾರಿಗಳು ಭೇಟಿ ನೀಡಿದಾಗ ಜೆಸಿಬಿ ಬಿಟ್ಟು ಚಾಲಕರು ಪರಾರಿಯಾಗಿರುವ ನಿದರ್ಶನಗಳು ಇವೆ.

ಜಿಲ್ಲೆಯಲ್ಲಿ 87,697 ಹೆಕ್ಟೇರ್ ಅರಣ್ಯ ಭೂಮಿ ಇದೆ. ಇದರಲ್ಲಿ 64,768 ಹೆಕ್ಟೇರ್‌ಗೆ ಮ್ಯುಟೇಷನ್ ಇದೆ. ಉಳಿದ 23,207 ಹೆಕ್ಟೇರ್ ಅರಣ್ಯ ಭೂಮಿ ಇಂಡೀಕರಣ ಆಗಿಲ್ಲ. ಇದರ ಮೇಲೆ ಭೂಗಳ್ಳರು ದೃಷ್ಟಿ ನೆಟ್ಟಿದ್ದಾರೆ.

ಶಿರಾ ತಾಲ್ಲೂಕಿನ ಕೊಟ್ಟ ಗ್ರಾಮದ ಸರ್ವೆ ನಂ 371ರಲ್ಲಿರುವ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಜೆಸಿಬಿಯಿಂದ ಗಿಡಗಳನ್ನು ತೆರವುಗೊಳಿಸುತ್ತಿದ್ದರು. ಅರಣ್ಯದ ನಡುವೆ ಕೆಲಸ ಮಾಡುತ್ತಿದ್ದರೂ ಇಲಾಖೆ ಸಿಬ್ಬಂದಿ ಇಲ್ಲದಿರುವುದು ರೈತರಿಗೆ ಅನುಮಾನಕ್ಕೆ ಕಾರಣವಾಗಿದೆ. 

ಕೊಟ್ಟ, ರಂಗಾಪುರ, ಆದಲೂರು, ರಂಗನಾಥಪುರದ ರೈತರು ಈ ಬಗ್ಗೆ ವಿಚಾರಿಸಿದಾಗ ‘4.38 ಎಕರೆ ಜಮೀನು ನನ್ನ ಹೆಸರಿಗೆ ಆದೇಶವಾಗಿದೆ. ಗಿಡಗಳನ್ನು ತೆರವುಗೊಳಿಸುತ್ತಿರುವೆ’ ಎಂದು ಆ ವ್ಯಕ್ತಿ ಹೇಳಿದ್ದಾರೆ. ಆದೇಶ ಪ್ರತಿ ನೀಡುವಂತೆ ರೈತರು ಪಟ್ಟು ಹಿಡಿದಾಗ ಜೆಸಿಬಿ ತೆಗೆದುಕೊಂಡು ಮರಳಿದ್ದಾರೆ.

‘ಸರ್ಕಾರ ಬಗರ್ ಹುಕುಂ ಯೋಜನೆಯಡಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನಂತರ ಜಿಲ್ಲೆಯಲ್ಲಿ ಭೂಗಳ್ಳರು ಹುಟ್ಟಿಕೊಂಡಿದ್ದಾರೆ. ಸರಾಸರಿ ಎರಡು ಎಕರೆ ಅರಣ್ಯ ಒತ್ತುವರಿ ಮಾಡಿದ್ದಾರೆ. ಗಿಡಗಳನ್ನು ಜೆಸಿಬಿಯಿಂದ ನಾಶಗೊಳಿಸಿದ್ದಾರೆ. ಇಂತಹವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಪರಿಸರಕ್ಕೆ ಹಾನಿ ಮಾಡಿದ ಕಾರಣಕ್ಕೆ ದಂಡ ಸಹ ವಿಧಿಸಲಾಗುವುದು’ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ತಿಳಿಸಿದರು.

ಮನವಿ ಮಾಡಿದರೂ ಕ್ರಮವಿಲ್ಲ

‘ಗುಬ್ಬಿ ತಾಲ್ಲೂಕಿನ ಸೋರೆಕಾಯಿಪೇಟೆ ಗ್ರಾಮಕ್ಕೆ ಸೇರಿದ ಮರಡಿಗುಡ್ಡ ಮೀಸಲು ಅರಣ್ಯ ವ್ಯಾಪ್ತಿಯ 454.31 ಎಕರೆಯನ್ನು ‘ಅರಣ್ಯ’ ಎಂದು ತಹಶೀಲ್ದಾರ್ ಅವರು ಇಂಡೀಕರಿಸಿಲ್ಲ. ಕಂದಾಯ ದಾಖಲೆಗಳಲ್ಲಿ ‘ಫಡ’, ‘ಗೋಮಾಳ’ ಎಂದು ನಮೂದಿಸಿದ್ದಾರೆ. ಈ ಕಾರಣಕ್ಕೆ ಸುತ್ತಲಿನ ಎಂಟು ಗ್ರಾಮಗಳ ಕೆಲವರು ಅರಣ್ಯವನ್ನು ಅಕ್ರಮವಾಗಿ ಪ್ರವೇಶಿಸಿ ನೈಸರ್ಗಿಕವಾಗಿ ಬೆಳೆದಿರುವ ಗಿಡ ಮರಗಳನ್ನು ಕಡಿದು ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿದ್ದಾರೆ. ಈ ಕೃತ್ಯದ ಬಗ್ಗೆ ಪ್ರಕರಣ ಸಹ ದಾಖಲಿಸಲಾಗಿದೆ’ ಎಂದು ರಾಮಲಿಂಗೇಗೌಡ ಮಾಹಿತಿ ನೀಡಿದರು.

’ಅರಣ್ಯಭೂಮಿ ಎಂದು ಇಂಡೀಕರಿಸುವಂತೆ ಗುಬ್ಬಿ ತಹಶೀಲ್ದಾರ್ ಅವರನ್ನು ಕೋರಿದ್ದರೂ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ. ಇತ್ತೀಚೆಗೆ ಶಿರಾ ತಾಲ್ಲೂಕಿನಲ್ಲಿ 700 ಎಕರೆಯನ್ನು ಅರಣ್ಯಭೂಮಿ ಎಂದು ಇಂಡೀಕರಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !