ಕುಕ್ಕೆ ದೇವಳ ಕಚೇರಿ ಭಕ್ತರಲ್ಲಿ ಗೊಂದಲ ಮೂಡಿಸುತ್ತಿದೆ: ಬಾಳೆಕೋಡಿ ಸ್ವಾಮೀಜಿ

7

ಕುಕ್ಕೆ ದೇವಳ ಕಚೇರಿ ಭಕ್ತರಲ್ಲಿ ಗೊಂದಲ ಮೂಡಿಸುತ್ತಿದೆ: ಬಾಳೆಕೋಡಿ ಸ್ವಾಮೀಜಿ

Published:
Updated:

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೆರವೇರಿಸುವ  ಆಶ್ಲೇಷಾ ಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಮುಂತಾದ ಸೇವೆಗಳನ್ನು ಸುಬ್ರಹ್ಮಣ್ಯ ಮಠದಲ್ಲಿ ನಡೆಸಬಾರದು ಎಂದು ದೇವಳದ ಆಡಳಿತ ಕಚೇರಿ ವಿರೋಧಿಸುವುದು ಸರಿಯಲ್ಲ ಎಂದು ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ ಹೇಳಿದ್ದಾರೆ. 

ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರ ಭಾವನೆಗಳಲ್ಲಿ ಗೊಂದಲ ಮೂಡುವಂತೆ ದೇವಸ್ಥಾನದ ಆಡಳಿತ ಕಚೇರಿ ನಡೆದುಕೊಳ್ಳುತ್ತಿದ್ದು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕೂಡಲೇ ಕ್ರಮ ತೆಗೆದುಕೊಂಡು ಪ್ರಕರಣವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. 

ಕುಮಾರ ಪರ್ವತದಿಂದ ಕುಮಾರಧಾರಾ ನದಿಯವರೆಗೆ ಇರುವ ಕುಕ್ಕೆ ಸ್ಥಳವು ಪವಿತ್ರ ಭೂಮಿಯೆಂದೇ ಪರಿಗಣಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾನೂನುಗಳು ದೇವಸ್ಥಾನದೊಳಗೆ ಅನ್ವಯವಾಗುತ್ತವೆಯೇ ವಿನಃ ದೇವಸ್ಥಾನದ ಹೊರಗಿರುವ ಸುಬ್ರಹ್ಮಣ್ಯ ಮಠದಲ್ಲಿಯೂ ಸೇವೆಗಳನ್ನು ಮಾಡಬಾರದು ಎಂದು ಹೇಳುವುದು ಸರಿಯಲ್ಲ. ಅಲ್ಲದೆ ಪುರಾಣ ಕಾಲದಿಂದಲೂ ಸಂಪುಟ ಶ್ರೀ ನರಸಿಂಹ ದೇವರು  ಸುಬ್ರಹ್ಮಣ್ಯ ದೇವರನ್ನು ಒಂದೇ ಪಲ್ಲಕ್ಕಿಯಲ್ಲಿ ಇರಿಸಿ ಉತ್ಸವ ಮಾಡಲಾಗುತ್ತಿತ್ತು. ಇದೀಗ ಏಕಾ ಏಕಿ ಭಕ್ತರ ನಂಬಿಕೆಗಳಲ್ಲಿ ಗೊಂದಲ ಮೂಡಿಸುವಂತಹ ನಡೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮಾಡಬಾರದು ಎಂದು ಹೇಳಿದರು. 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಲಿತರ ಸೇವೆ ಪ್ರಧಾನವಾದುದು. ದಲಿತರು ಮತ್ತು ದೇವಸ್ಥಾನದ ಸಿಬ್ಬಂದಿ, ಮಠದ ಸ್ವಾಮೀಜಿ ಸಾಮರಸ್ಯದಿಂದ  ದೇವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಮಠದಲ್ಲಿ ಸಲ್ಲಿಸುವ ಸೇವೆಯನ್ನು ಅನಧಿಕೃತ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹೀಗೆ ವಿರೋಧಿಸುವ ವ್ಯಕ್ತಿಗಳು ದತ್ತಿಇಲಾಖೆಯ ಸಮಿತಿಯಲ್ಲಿ ಇರಲು ಅರ್ಹರೇ ಎಂಬ ಪ್ರಶ್ನೆಯೂ ಮೂಡುತ್ತದೆ ಎಂದು ಅವರು ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿಸಚಿನ್‌ ಕುಮಾರ್‌, ರೋಶನ್‌ ಕುಮಾರ್‌, ಸುಮನ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !