ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಾರಿಗಲ್ಲದವಳು... ಬಿದಿರು

Last Updated 25 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಕಬ್ಬನ್‌ ಉದ್ಯಾನಕ್ಕೊಂದು ಕಲಶವಿಟ್ಟಂತೆ ಬಿದಿರು ಮೆಳೆ ಉದ್ದಕ್ಕೆ, ದಟ್ಟವಾಗಿ ಒಂದೆಡೆ ಹಬ್ಬಿಕೊಂಡಿದ್ದವು. ಇಡೀ ಉದ್ಯಾನದ ಅಂದ ಹೆಚ್ಚಿಸುವಲ್ಲಿ ಬಿದಿರು ಮೆಳೆಯ ಪಾತ್ರ ಹಿರಿದು. ತಮ್ಮ ಪಾತ್ರವನ್ನು ಶ್ರದ್ಧೆಯಿಂದ ನಿಭಾಯಿಸಿದ ಅವಕ್ಕೀಗ 60ರ ಪ್ರಾಯವಂತೆ! ಹೀಗಾಗಿ ಅವುಗಳ ಕಟಾವಿನ ಕೆಲಸ ಇದೀಗ ಭರದಿಂದ ಸಾಗುತ್ತಿದೆ.

ಇತ್ತೀಚೆಗೆ ಅವು ಹೂ ಬಿಡತೊಡಗಿದ್ದವು. ಅಂದರೆ ಅವುಗಳ ಕಥೆ ಮುಗಿಯಿತು ಅಂತಲೇ ಲೆಕ್ಕ. ತುಂಬ ಒಣಗಿದ್ದ ಬಿದಿರು ಮೆಳೆ ಕಟಾವಿಗೆ ಬಂದು ವರ್ಷಗಳೇ ಕಳೆದಿವೆ. ಕೆಲವು ಕೊಳೆತು ಹೋಗಿವೆ. ಒಣಗಿದ ಬಿದಿರು ಬೇಸಿಗೆಯಲ್ಲಿ ತುಂಬ ಅಪಾಯಕಾರಿ. ಬೆಂಕಿ ಹೊತ್ತಿಕೊಂಡರೆ ಆಪತ್ತು ಗ್ಯಾರಂಟಿ. ಹೀಗಾಗಿ ಅವುಗಳ ತೆರವು ಮಾಡಲೇಬೇಕಿತ್ತು ಎನ್ನುತ್ತದೆ ತೋಟಗಾರಿಕೆ ಇಲಾಖೆ.

ಪರಿಸರದ ವಿಷಯವಾದ್ದರಿಂದ ಮರಗಳಿಗೆ ಕೊಡಲಿ ಹಾಕುವುದು ಅತ್ಯಂತ ಸೂಕ್ಷ್ಮ ವಿಚಾರ. ಪರಿಸರ ಸಂರಕ್ಷಣೆ ಮತ್ತಿತರ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರನ್ನೊಳಗೊಂಡ ಒಂದು ಸಲಹಾ ಸಮಿತಿ ಇದೆ. ಸಮಿತಿಯನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಇದರ ಜೊತೆಗೆ ಅರಣ್ಯ ಇಲಾಖೆಯ ಡಿಎಫ್‌ಒ, ಆರ್‌ಎಫ್‌ಒ ಮತ್ತಿತರ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆಯನ್ನೂ ತೆಗೆದುಕೊಳ್ಳಲಾಗಿದೆ. ಎಲ್ಲರೂ ಕಟಾವು ಮಾಡಬೇಕೆಂಬ ಸಲಹೆ ನೀಡಿದರು. ಹೀಗಾಗಿ ಹರಾಜು ಹಾಕಿ ಬಿದಿರು ಮಾರಾಟ ಮಾಡಲಾಯಿತು. ಅದರಂತೆ ತುಂಬ ದಿನಗಳಿಂದ ಕಟಾವು ಕೆಲಸ ನಡೆಯುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಮಹಾಂತೇಶ್‌ ಮುರಗೋಡ ಮಾಹಿತಿ ನೀಡಿದರು.

ಲೇಬರ್‌ ಸಮಸ್ಯೆ ಇದ್ದುದರಿಂದ ಕಟಾವು ಕೆಲಸವನ್ನು ಇಲಾಖೆ ಕೈಗೆತ್ತಿಕೊಳ್ಳಲಿಲ್ಲ. ಇದರಿಂದ ಕಟಾವು ಕೆಲಸ ವಿಳಂಬವಾಗಿತ್ತು. ಈಗ ಅಫ್ರೋಜ್‌ ಎನ್ನುವವರು ಹರಾಜಿನಲ್ಲಿ ಬಿದಿರು ಕೊಂಡುಕೊಂಡಿದ್ದರಿಂದ ಅವರೇ ಕಟಾವು ಮಾಡಿಸಿಕೊಳ್ಳುತ್ತಿದ್ದಾರೆ.ಸಂಪೂರ್ಣ ಕಟಾವಿಗೆ ಇನ್ನೂ ಸಮಯ ಹಿಡಿಯುತ್ತದೆ. ಇದಿನ್ನೂ ತಿಂಗಳು ಕಾಲ ತೆಗೆದುಕೊಳ್ಳಬಹುದು ಎಂದೂ ಅವರು ಹೇಳಿದರು.

ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಬಿದಿರು ಬೆಳೆಸಲಾಗುವುದು. ಈಗಾಗಲೇ ಹನ್ನೆರಡು ವಿವಿಧ ತಳಿಯ ಬಿದಿರು ಸಸಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭೀಮಾ, ಬುದ್ಧ, ಬೆಳಗಾವಿ, ಮಾರಿಹಾಳ ಮತ್ತು ಅಸ್ಸಾಂನಿಂದ ತರಿಸಿದ ಕೆಲವು ಬಿದಿರು ತಳಿಗಳಿವೆ. ಇವೆಲ್ಲವನ್ನು ಬರುವ ಜೂನ್‌ ತಿಂಗಳಲ್ಲಿ ತೆರವುಗೊಳಿಸಿದ ಜಾಗದಲ್ಲೇ ಬೆಳೆಸಲಾಗುವುದು ಎಂದೂ ಮುರುಗೋಡ ವಿವರಿಸಿದರು.

*
ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಬಿದಿರು ಬೆಳೆಸಲಾಗುವುದು. ಈಗಾಗಲೇ ಹನ್ನೆರಡು ವಿವಿಧ ತಳಿಯ ಬಿದಿರು ಸಸಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭೀಮಾ, ಬುದ್ಧ, ಬೆಳಗಾವಿ, ಮಾರಿಹಾಳ ಮತ್ತು ಅಸ್ಸಾಂನಿಂದ ತರಿಸಿದ ಕೆಲವು ಬಿದಿರು ತಳಿಗಳಿವೆ. ಬರುವ ಜೂನ್‌ ತಿಂಗಳಲ್ಲಿ ತೆರವುಗೊಳಿಸಿದ ಜಾಗದಲ್ಲೇ ಈ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು.
-ಮಹಾಂತೇಶ್‌ ಮುರಗೋಡ, ತೋಟಗಾರಿಕೆ ಇಲಾಖೆಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT