ರಾಜ್ಯದ ಎಲ್ಲ ನಗರಗಳಲ್ಲೂ ಪಿಒಪಿ ಗಣಪತಿ ತಯಾರಿಕೆ, ಮಾರಾಟ ನಿಷೇಧ

7
ಹೊರ ರಾಜ್ಯಗಳ ಗಣಪತಿ ತಡೆಗೆ ಚೆಕ್‌ಪೋಸ್ಟ್‌ಗಳಲ್ಲಿ ನಿಗಾ: ಆರ್‌.ಶಂಕರ್

ರಾಜ್ಯದ ಎಲ್ಲ ನಗರಗಳಲ್ಲೂ ಪಿಒಪಿ ಗಣಪತಿ ತಯಾರಿಕೆ, ಮಾರಾಟ ನಿಷೇಧ

Published:
Updated:

ಬೆಂಗಳೂರು: ರಾಜ್ಯದ ಎಲ್ಲ ನಗರಗಳಲ್ಲೂ ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌) ಗಣಪತಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ನಿಷೇಧ ವಿಧಿಸಲಾಗಿದೆ ಎಂದು ಅರಣ್ಯ ಸಚಿವ ಆರ್‌.ಶಂಕರ್‌ ತಿಳಿಸಿದರು.

ಪರಿಸರಕ್ಕೆ ಮಾರಕವಾಗಿರುವ ಇಂತಹ ಗಣಪತಿಗಳನ್ನು ಕೆರೆಗಳು, ನದಿಗಳಲ್ಲಿ ವಿಸರ್ಜನೆಗೂ ಅವಕಾಶ ನೀಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಹಬ್ಬದ ಸಂದರ್ಭದಲ್ಲಿ ಪಿಒಪಿ ಗಣಪತಿಗಳನ್ನು ಖರೀದಿಸಬಾರದು ಎಂದು ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಅಲ್ಲದೆ, ಹೊರ ರಾಜ್ಯಗಳಿಂದ ತರುವ ಪಿಒಪಿ ಗಣಪತಿ ವಿಗ್ರಹಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ, ಆಯಾ ಪಟ್ಟಣ ಮತ್ತು ನಗರಗಳಲ್ಲಿ ಮಾರಾಟ ತಡೆಯಲು ಅಧಿಕಾರಿಗಳು ಸರ್ಕಾರದ ನಿರ್ದೇಶನವನ್ನು ಜಾರಿ ಮಾಡಬೇಕು ಎಂದರು.

ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಇಟ್ಟು ಪೂಜಿಸುವುದಕ್ಕೆ ಪ್ರೋತ್ಸಾಹ ನೀಡಲಾಗುವುದು. ಇದಕ್ಕೆ ರಾಸಾಯನಿಕ ಬಣ್ಣಗಳನ್ನು ಬಳಸುವುದು ಬೇಡ. ನೈಸರ್ಗಿಕ ಬಣ್ಣಗಳನ್ನು ಬಳಸುವುದು ಸೂಕ್ತ ಎಂದು ಅವರು ಹೇಳಿದರು.

ಕಾಗದದ ಗಣಪತಿ ಮಾಡುವುದಾಗಿ ಕೆಲವರು ಹೇಳಿತ್ತಿದ್ದಾರೆ. ಆದರೆ, ಅವು ಜೈವಿಕವಾಗಿ ಕರಗುವ ಸಾಮರ್ಥ್ಯವನ್ನು ಹೊಂದಿವೆಯೇ ಎಂಬುದನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ಬಳಿಕವೇ ಅನುಮತಿ ನೀಡುತ್ತೇವೆ ಎಂದರು.

ಗಣಪತಿ ವಿಗ್ರಹಗಳು ಐದು ಅಡಿಗಳಿಗಿಂತ ದೊಡ್ಡದಾಗಿರಬಾರದು. ಮಣ್ಣಿನ ಗಣಪತಿಗಳನ್ನು ಇದಕ್ಕಿಂತ ದೊಡ್ಡದಾಗಿ ಮಾಡಿದರೆ ಸಮಸ್ಯೆ ಉಂಟಾಗುತ್ತದೆ. ಬಾರಕ್ಕೆ ಕುಸಿಯುವ, ಬಿರುಕು ಬಿಡುವ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಸಣ್ಣ ಗಣಪತಿಗಳನ್ನು ತಯಾರಿಸಿ, ಪೂಜಿಸುವುದೇ ಸೂಕ್ತ ಎಂದು ಶಂಕರ್‌ ಹೇಳಿದರು.

2016 ರಲ್ಲಿ ಪಿಒಪಿ ಗಣಪತಿಗಳ ತಯಾರಿಕೆಗೆ ನಿಷೇಧ ವಿಧಿಸಲಾಯಿತು. ಎರಡು ವರ್ಷಗಳಲ್ಲಿ ಪಿಒಪಿ ಗಣಪತಿಗಳ ತಯಾರಿಕೆ ಪ್ರಮಾಣ ಕಡಿಮೆ ಆಗಿದೆ. ಶೇ 60 ರಿಂದ 65 ರಷ್ಟು ಜನ ಪಿಒಪಿ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !