ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಯುತ್ತಿದೆ ಆರು ಸಾವಿರ ಎಕರೆ ಬಾಳೆಹಣ್ಣು

ಮಾರುಕಟ್ಟೆಗೆ ಸಾಗಿಸಲಾಗದ ಅಸಹಾಯಕತೆ; ಕೊಳ್ಳುವವರಿಲ್ಲದೆ ಕಂಗಾಲಾದ ರೈತ
Last Updated 14 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬಾಳೆಹಣ್ಣು ಗಿಡದಲ್ಲೇ ಕೊಳೆಯುತ್ತಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ.

ಲಾಕ್‌ಡೌನ್‌ನಿಂದ ರೈತರಿಗೆ ಬಾಳೆಹಣ್ಣು ಮಾರುಕಟ್ಟೆಗೆ ಸಾಗಿಸಲು ಆಗುತ್ತಿಲ್ಲ. ಕೆಲವರು ಅವರ ತೋಟಕ್ಕೆ ಬಂದು ಖರೀದಿಸಲು ಮುಂದಾದರೂ ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಅವರು ಹಾಕಿದ ಬಂಡವಾಳಕ್ಕಿಂತಲೂ ಅದು ಕಮ್ಮಿ ಆಗಿರುವುದರಿಂದ ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಇದರ ನಡುವೆ ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಬಿರುಗಾಳಿ ಮಳೆಯಿಂದ ಅನೇಕ ಕಡೆ ಬಾಳೆ ನೆಲಕಚ್ಚಿ ಹಾಳಾಗಿದೆ.

ಜಿಲ್ಲೆಯ ಹೊಸಪೇಟೆ, ಕಂಪ್ಲಿ ಸುತ್ತಮುತ್ತ ಸುಮಾರು ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತದೆ. ಈ ಎರಡು ತಾಲ್ಲೂಕುಗಳಿಗೆ ಹೊಂದಿಕೊಂಡಂತೆ ತುಂಗಭದ್ರಾ ನದಿ ಹರಿಯುತ್ತದೆ. ಕಾಲುವೆಗಳು ಇರುವುದರಿಂದ ಹೆಚ್ಚಿನ ರೈತರು ಬಾಳೆ ನೆಚ್ಚಿಕೊಂಡು ಕೃಷಿ ಮಾಡುತ್ತಾರೆ.

ಹೋದ ವರ್ಷ ಜಲಾಶಯ ಭರ್ತಿಯಾಗಿದ್ದರಿಂದ ಕಾಲುವೆಗಳಿಗೆ ಯಾವುದೇ ಅಡೆತಡೆಯಿಲ್ಲದೆ ನೀರು ಹರಿಸಲಾಗುತ್ತಿದೆ. ರೈತರು ಅಪಾರ ನಿರೀಕ್ಷೆ ಇಟ್ಟುಕೊಂಡು ಬಾಳೆ ಬೆಳೆಸಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಫಸಲು ಕೂಡ ಬಂದಿತ್ತು. ಇನ್ನೇನು ಅದನ್ನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ ರೈತರ ಯೋಚನೆಗಳೆಲ್ಲ ತಲೆಕೆಳಗಾಗುವಂತೆ ಮಾಡಿದೆ.

ಹತ್ತು ಸಾವಿರ ಎಕರೆ ಪೈಕಿ ಆರು ಸಾವಿರ ಎಕರೆಯಲ್ಲಿ ಬೆಳೆದಿರುವ ಬಾಳೆ ಹಣ್ಣಾಗಿದ್ದು, ಮಾರುಕಟ್ಟೆಗೆ ಸಾಗಿಸಲು ಆಗದ ಕಾರಣ ಅದು ಗಿಡದಲ್ಲೇ ಕೊಳೆಯುತ್ತಿದೆ. ಮಳೆಯಿಂದಾಗಿ ಐದು ನೂರು ಎಕರೆ ಬಾಳೆಹಣ್ಣು ನೆಲಕಚ್ಚಿದೆ. ಏ. 14ರ ನಂತರವಾದರೂ ಚಿತ್ರಣ ಬದಲಾಗಬಹುದು. ಅಳಿದುಳಿದ ಬಾಳೆಯಾದರೂ ಮಾರುಕಟ್ಟೆಗೆ ಸಾಗಿಸಬಹುದು ಎನ್ನುವುದು ರೈತರ ನಿರೀಕ್ಷೆಯಾಗಿತ್ತು. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತೆ ಲಾಕ್‌ಡೌನ್‌ ವಿಸ್ತರಿಸಲಾಗಿದ್ದು, ಇದು ರೈತರನ್ನು ಮತ್ತಷ್ಟು ಕಂಗಾಲಾಗಿಸಿದೆ.

‘ಎಂಟು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿರುವೆ. ಉತ್ತಮ ಫಸಲು ಬಂದಿದೆ. ಆದರೆ, ಎ.ಪಿ.ಎಂ.ಸಿ.ಯಲ್ಲಿ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ. ಕೆಲವರು ತೋಟಕ್ಕೆ ಬಂದು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಪ್ರತಿ ಕೆ.ಜಿ. ಏಲಕ್ಕಿ ₹3ಕ್ಕೆ, ಸುಗಂಧಿ ಬಾಳೆ ₹2ಕ್ಕೆ ಕೇಳುತ್ತಿದ್ದಾರೆ. ಸಾಮಾನ್ಯವಾಗಿ ಕೆ.ಜಿ. ಏಲಕ್ಕಿ ₹20ರಿಂದ 22, ಸುಗಂಧಿ ₹10ರಿಂದ ₹12ಕ್ಕೆ ಮಾರಾಟವಾಗುತ್ತದೆ. ಈಗ ಕೇಳುತ್ತಿರುವ ಬೆಲೆಗೆ ಮಾರಾಟ ಮಾಡಿದರೆ ಹಾಕಿರುವ ಬಂಡವಾಳವೂ ವಾಪಸ್‌ ಬರುವುದಿಲ್ಲ’ ಎಂದು ಹಂಪಿ ರೈತ ನದೀಮ್‌ ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡರು.

‘ಜಿಲ್ಲೆಯಲ್ಲಿ ಬೆಳೆಯುವ ಏಲಕ್ಕಿ ಬಾಳೆಯನ್ನು ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್‌, ಮುಂಬೈ ಸೇರಿದಂತೆ ಇತರೆ ಮಹಾನಗರಗಳ ಮಾರುಕಟ್ಟೆಗೆ ಕಳುಹಿಸಿಕೊಡುತ್ತಿದ್ದೆವು. ಅಲ್ಲಿನ ಮಾರುಕಟ್ಟೆ ಬಂದ್‌ ಆಗಿರುವುದರಿಂದ ಖರೀದಿಗೆ ಬೇಡಿಕೆ ಬರುತ್ತಿಲ್ಲ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಕಮಲಾಪುರದ ಬಾಳೆ ಬೆಳೆಗಾರ ನಾಗರಾಜ ಹೇಳಿದರು.

‘ರೈತರು ಬೆಳೆದ ಬಾಳೆ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಬಂದರೂ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸಿ, ಮಾರಾಟ ಮಾಡಬೇಕು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಅನೇಕ ಎಕರೆ ಪ್ರದೇಶದಲ್ಲಿ ಬಾಳೆ ಹಣ್ಣಾಗಿ ಕೊಳೆಯುತ್ತಿದೆ. ಇನ್ನಷ್ಟು ತಡ ಮಾಡಿದರೆ ಸಂಪೂರ್ಣವಾಗಿ ಹಾಳಾಗಲಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಆತಂಕ ವ್ಯಕ್ತಪಡಿಸಿದ್ದಾರೆ.

10,000 ಎಕರೆ

ಜಿಲ್ಲೆಯಲ್ಲಿ ಬಾಳೆ ಕೃಷಿ

6,000 ಎಕರೆ

ಕೊಳೆಯುವ ಹಂತ ತಲುಪಿರುವ ಫಸಲು

500 ಎಕರೆ

ಬಾಳೆ ಬಿರುಗಾಳಿಗೆ ಹಾಳು

3,500 ಎಕರೆ

ಬಾಳೆಕಾಯಿ ಫಸಲು

ಮುದುಡಿದ ಪುಷ್ಪ ಕೃಷಿ

ಚಿಕ್ಕೋಡಿ (ಬೆಳಗಾವಿ):ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಪುಷ್ಪ ಕೃಷಿ ನೆಚ್ಚಿದ್ದ ಕೃಷ್ಣಾ, ದೂಧ್‌ಗಂಗಾ ಮತ್ತು ವೇದಗಂಗಾ ನದಿ ಪಾತ್ರದ ಅನೇಕ ರೈತರಿಗೂ ಲಾಕ್‌ಡೌನ್‌ ಸಂಕಷ್ಟ ತಂದಿಟ್ಟಿದೆ.

ಇಲ್ಲಿ ಜರ್ಬೆರಾ, ಸೇವಂತಿಗೆ, ಗುಲಾಬಿ, ಚೆಂಡು ಹೂ ಬೆಳೆಯಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಸ್ಥಗಿತಗೊಂಡಿದ್ದು, ಹೂವು ಸಾಗಣೆಯಾಗದೆ ಗಿಡಗಳಲ್ಲೇ ಬಾಡಿ ಹೋಗುತ್ತಿವೆ.

ನಿಪ್ಪಾಣಿ ತಾಲ್ಲೂಕಿನ ಡೋಣೆವಾಡಿಯ ದೂಧ್‌ಗಂಗಾ ಫೂಲ್ (ಹೂವು) ಉತ್ಪಾದಕರ ಸಂಘವೇ ರೈತರಿಂದ ಹೂವುಗಳನ್ನು ಸಂಗ್ರಹಿಸಿ ಮುಂಬೈ ಮಾರುಕಟ್ಟೆಗೆ ಟನ್‌ಗಟ್ಟಲೆ ಕಳುಹಿಸುತ್ತಿತ್ತು. ಸಂಘವು ಸಾಗಣೆ ವೆಚ್ಚ ಭರಿಸಿ ಉಳಿದ ಹಣವನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.

‘ಪ್ರತಿ ಎರಡು ದಿನಕ್ಕೊಮ್ಮೆ ಸರಾಸರಿ 8 ಸಾವಿರ ಹೂವುಗಳನ್ನು ಮುಂಬೈಗೆ ಕಳುಹಿಸುತ್ತಿದ್ದೆವು. ಲಾಕ್‌ಡೌನ್‌ಗಿಂತ ಮುಂಚೆ 20 ಹೂವುಗಳ ಒಂದು ಬಾಕ್ಸ್‌ಗೆ ₹400 ದರವಿತ್ತು‘ ಎಂದು ಎಂದು ಡೋಣೆವಾಡಿಯ ದೂಧ್‌ಗಂಗಾ ಫೂಲ್‌ ಉತ್ಪಾದಕರ ಸಂಘದ ಮುಖ್ಯಸ್ಥ ಜನಾರ್ಧನ ಘಾಟಗೆ ಹೇಳುತ್ತಾರೆ.

‘10 ಗುಂಟೆ ಭೂಮಿಯಲ್ಲಿ ಪಾಲಿಹೌಸ್‌ನಲ್ಲಿ ಜರ್ಬೆರಾ ಕೃಷಿ ಮಾಡಿದ್ದೇವೆ. ಸಾಗಣೆಯಾಗದೆ ₹ 3.5 ಲಕ್ಷ ನಷ್ಟವಾಗಿದೆ’ ಎಂದು ಗಳತಗಾ ಗ್ರಾಮದ ಕೃಷಿಕ ರಾಜೇಂದ್ರ ಪವಾರ ಅಳಲು ತೋಡಿಕೊಂಡರು.

ಭಟ್ಕಳ: ನಿತ್ಯ ₹25 ಲಕ್ಷ ವಹಿವಾಟು ಕುಸಿತ

ಘಮಘಮಿಸುವ ಪರಿಮಳದಿಂದಾಗಿ ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದ ಭಟ್ಕಳ ಮಲ್ಲಿಗೆಗೂ ಲಾಕ್‌ಡೌನ್ ಬಿಸಿ ತಟ್ಟಿದೆ. ಮಲ್ಲಿಗೆ ಹೂವಿನ ಕೃಷಿಕರು ಕಂಗಾಲಾಗಿದ್ದಾರೆ.

ಜಾಲಿ, ಮಣಕುಳಿ, ಮುಟ್ಟಳ್ಳಿ, ಹೆಬಳೆ, ಶಿರಾಲಿ, ಬೇಂಗ್ರೆ, ಕಾಯ್ಕಿಣಿ, ಬೈಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿ ಮಲ್ಲಿಗೆ ಬೆಳೆಯಲಾಗುತ್ತಿದೆ. 9 ರಿಂದ 10 ಸಾವಿರ ಕುಟುಂಬಗಳು ಜೀವನ ನಿರ್ವಹಣೆಗೆ ಮಾರ್ಗವಾಗಿದೆ. ಇದು. ತಾಲ್ಲೂಕಿನಲ್ಲಿ ನಿತ್ಯ ₹ 25 ಲಕ್ಷ ವಹಿವಾಟು ನಡೆಯುತ್ತಿತ್ತು.

ಮಲ್ಲಿಗೆ ಮೊಗ್ಗು ಗಿಡದಲ್ಲೇ ಒಣಗುತ್ತಿರುವುದನ್ನು ನೋಡುವುದೇ ಸಂಕಟ. ಹೂವು ಮಾರಾಟದಿಂದ ದಿನಕ್ಕೆ ₹ 700 ರಿಂದ 800 ಸಂಪಾದಿಸುತ್ತಿದ್ದೆವು ಎಂದು ಬೆಳೆಗಾರರಾದ ಶಾಂತಿ ಮತ್ತು ಹೇಮಾ ಹೇಳಿದರು.

‘ಒಂದು ತಿಂಗಳಲ್ಲೇ 60 ಟನ್ ಹೂವು ಹಾನಿಯಾಗಿದ್ದು, ₹ 8.75 ಕೋಟಿ ನಷ್ಟ ಆಗಿರುವ ಅಂದಾಜಿದೆ.ಮೂರು ತಿಂಗಳ ನಷ್ಟದ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಿದ್ದೇವೆ‘ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸಂಧ್ಯಾ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

-ವರದಿ: ಶಶಿಕಾಂತ ಎಸ್‌. ಶೆಂಬೆಳ್ಳಿ,ಸುಧಾಕರ ತಳವಾರ, ರಾಘವೇಂದ್ರ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT