ಭಾನುವಾರ, ಆಗಸ್ಟ್ 1, 2021
27 °C

ಸಂದರ್ಶನ | ಬಂಡವಾಳಶಾಹಿಗಳಿಗಾಗಿ ರೈತರನ್ನು ಬಲಿಕೊಡುವುದು ನ್ಯಾಯವೇ?

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ‘ಬಂಡವಾಳಶಾಹಿಗಳಿಗಾಗಿ ರೈತರನ್ನು ಬಲಿಕೊಡುವ ಅಪಾಯಕಾರಿ ನಿರ್ಧಾರ’ ಎಂಬುದು ರಾಜ್ಯದ ಕೃಷಿ ಖಾತೆಯ ಮಾಜಿ ಸಚಿವ, ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶೆಂಪೂರ‌ ಅವರ ಆಕ್ಷೇಪ. ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಇದನ್ನೇ ಪ್ರತಿಪಾದಿಸಿದರು.

ಭೂಸುಧಾರಣೆ ಕಾಯ್ದೆ ತಿದ್ದುಪಡಿ ಬಗ್ಗೆ ನಿಮ್ಮ ನಿಲುವೇನು?
ರೈತರ ಜಮೀನು ರೈತರಿಗೇ ಸಿಗಬೇಕು ಎಂಬುದು ನನ್ನ ಹಾಗೂ ರಾಜ್ಯದ ಪ್ರತಿ ರೈತನ ನಿಲುವು. ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಬಹುದು ಎಂದಾದರೆ ನಮ್ಮ ಕೃಷಿ ವ್ಯವಸ್ಥೆ ಬುಡಮೇಲಾಗುತ್ತದೆ. ಉದ್ಯಮಿಗಳಿಗೆ ಸರಳವಾಗಿ ಜಮೀನು ದೊರಕಿಸಿಕೊಡುವ ವ್ಯವಸ್ಥೆ ಇದ್ದರೂ ಈ ತರಾತುರಿಯ ನಿರ್ಧಾರ ಏಕೆ?

* ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುನ್ನುಡಿ ಬರೆದಿದ್ದೇ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಎಂಬ ಮಾತಿದೆಯಲ್ಲ?
ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಅನುಗುಣವಾಗಿ ಕಾಲಕಾಲಕ್ಕೆ ಈ ಕಾಯ್ದೆಗೆ ತಿದ್ದುಪಡಿಗಳು ಆಗಿವೆ. ಜಮೀನು ಖರೀದಿ ಮಿತಿ ಎರಡು ಎಕರೆಯಿಂದ ಐದು ಎಕರೆಗೆ, ಐದು ಎಕರೆಯಿಂದ 10 ಎಕರೆಗೆ ಹೆಚ್ಚಿಸುತ್ತ ಬರಲಾಗಿದೆ. ಆದರೆ, ಈ ವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳೂ ‘ರೈತರ ಜಮೀನನ್ನು ರೈತರೇ ಖರೀದಿಸಬೇಕು’ ಎಂಬ ಕಾನೂನನ್ನು ಸಂರಕ್ಷಿಸಿಕೊಂಡು ಬಂದಿದ್ದವು.

* ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಕಾನೂನು ತಿದ್ದುಪಡಿಯ ಚಿಂತನೆ ನಡೆದಿತ್ತಲ್ಲವೇ?
ಇಲ್ಲ, ರೈತರ ಕತ್ತು ಹಿಸುಕುವ ಯತ್ನ ನಾವೆಂದೂ ಮಾಡಿಲ್ಲ. ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ನಾನು ಕೃಷಿ ಸಚಿವನಾಗಿದ್ದಾಗ ರೂಪಿಸಿದ ಕೃಷಿ ನೀತಿ, ಎಚ್‌.ಡಿ.ಕುಮಾರಸ್ವಾಮಿ ಅವರ 2019–20ನೇ ಸಾಲಿನ ಬಜೆಟ್‌ ಅನ್ನು ಈ ಸರ್ಕಾರ ಅನುಷ್ಠಾನಕ್ಕೆ ತಂದರೆ ಸಾಕು. ರೈತರ ಕಲ್ಯಾಣವಾಗುತ್ತದೆ. ಈ ಸರ್ಕಾರದ ನಿರ್ಧಾರ ರೈತರ ಸರ್ವನಾಶಕ್ಕೆ ಪ್ರವಾಹದ ಗೇಟ್‌ ತೆರೆದಂತಿದೆ.

* ಇದು ಹೇಗೆ ಅಪಾಯಕಾರಿ?
ನಮ್ಮ ರಾಜ್ಯದಲ್ಲಿ 75 ಲಕ್ಷ ರೈತರು ಇದ್ದಾರೆ. ಅವರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ 55 ಲಕ್ಷ. 1ರಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಹಿಡುವಳಿದಾರರ ಪ್ರಮಾಣವೇ ಹೆಚ್ಚು. ಸಣ್ಣ ರೈತರು ತಮಗಿರುವ ಅಲ್ಪ ಜಮೀನಿನಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ರೈತರಿಗೆ ಉತ್ತೇಜನ ನೀಡುವುದನ್ನು ಬಿಟ್ಟು ಜಮೀನು ಮಾರಾಟ ಮಾಡಿ ಎಂದು ಸರ್ಕಾರವೇ ಅವರನ್ನು ಪ್ರೇರೇಪಿಸುವುದು ಎಷ್ಟು ಸರಿ? ಉದ್ಯಮಿಗಳು ಸಾವಿರಾರು ಎಕರೆ ಜಮೀನು ಖರೀದಿಸಿ, ಅದರ ಮೇಲೆ ಸಾಲ ಪಡೆಯುತ್ತಾರೆ. ಕೃಷಿ ಸಾಲದ ಪ್ರಮಾಣದಲ್ಲಿ ಅವರಿಗೇ ಸಿಂಹ ಪಾಲು ದೊರೆಯುವುದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಣ್ಣ ಸಣ್ಣ ರೈತರಿಗೆ ಸಾಲ ಸಿಗದ ಸ್ಥಿತಿ ತಲೆದೋರಬಹುದು. ಇದು ಇನ್ನೊಂದು ಬಿಕ್ಕಟ್ಟಿಗೆ ಕಾರಣವಾಗಬಹುದು.

* ಕಾರ್ಪೊರೇಟ್‌ ಕೃಷಿ ಅಭಿವೃದ್ಧಿಗೆ ಪೂರಕವೇ?
ಖಂಡಿತ ಇಲ್ಲ. ಉತ್ತುಂಗ ಸ್ಥಿತಿಯಲ್ಲಿದ್ದ ಉದ್ಯಮಿಗಳು, ಕೆಲವೇ ವರ್ಷಗಳಲ್ಲಿ ದಿವಾಳಿ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಅಂತಹವರು ಸಾವಿರಾರು ಎಕರೆ ಜಮೀನು ಖರೀದಿಸಿ, ನಂತರ ಅವರ ಉದ್ಯಮ ದಿವಾಳಿ ಅಂಚಿಗೆ ತಲುಪಿದರೆ ಅವರು ಖರೀದಿಸಿದ ಜಮೀನು ಪಾಳು ಬಿದ್ದು ಕೃಷಿ ಉತ್ಪಾದನೆ ಕಡಿಮೆಯಾಗುತ್ತದೆ. ಇದು ನಮ್ಮ ದೇಶದ ಆಹಾರ ಸ್ವಾವಲಂಬನೆಗೂ ಅಪಾಯ ತಂದೊಡ್ಡಲಿದೆ. 

* ಕಪ್ಪು ಹಣದ ಕುಳಗಳಿಗೆ ನೆರವಾಗಲು ಈ ತಿದ್ದುಪಡಿಯೇ?
ಈ ಪ್ರಶ್ನೆಗೆ ನಾನು ಪ್ರತಿಕ್ರಿಯಿಸಲ್ಲ. ರೈತರ ಜಮೀನು ಹಣವಂತರ ಪಾಲಾಗುತ್ತದೆ. ಸಣ್ಣ ರೈತರು ಬೀದಿಪಾಲಾಗುತ್ತಾರೆ ಅಷ್ಟೇ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು