ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಪ್ರಗತಿಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ

ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಎನ್ ರವೀಂದ್ರ ಸಲಹೆ
Last Updated 29 ಮಾರ್ಚ್ 2018, 9:33 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಒಂದೇ ಒಂದು ಮತದಿಂದ ಸೋತವರಿಗೆ ಅಥವಾ ಗೆದ್ದವರಿಗೆ ಮಾತ್ರ ‘ಒಂದು ಮತ’ದ ಮಹತ್ವದ ಅರಿವಿರುತ್ತದೆ’ ಎಂದು   ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಎನ್ ರವೀಂದ್ರ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮತದಾನದ ಮಹತ್ವ ಹಾಗೂ ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಒಂದು ಶಕ್ತಿ. ಮತದಾನ ನಮ್ಮ ಹಕ್ಕು. ಉತ್ತಮ ಅಭ್ಯರ್ಥಿಗಳಿಗೆ ಮತ ಹಾಕಿದರೆ ಪ್ರಜಾಪ್ರಭುತ್ವ ವ್ಯವಸೆಯಲ್ಲಿ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು’ ಎಂದರು.

‘ಜನವರಿ 1, 2018ಕ್ಕೆ 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಬೇಕು. ಹಾಗೆಯೇ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ಉತ್ತೇಜಿಸಬೇಕು’ ಎಂದು ಅವರು ಮನವಿ ಮಾಡಿದರು. ‘ನಾನು ಹಾಕುವ ಮತ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬುದನ್ನು ಅರಿತು ಪ್ರತಿಯೊಬ್ಬರೂ ಮತ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ಮೇ 12ರಂದು ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಮೇ 15ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಥಮ ಬಾರಿಗೆ ಮತ ಚಲಾಯಿಸುವವರು ವಿದ್ಯುನ್ಮಾನ ಮತಯಂತ್ರದ (ಇ.ವಿಎಂ ಹಾಗೂ ವಿ.ವಿ ಪ್ಯಾಟ್) ಬಗ್ಗೆ ತಿಳಿದುಕೊಳ್ಳಬೇಕು ನೀವೇ ನಿಮ್ಮ ಕೈಯಿಂದ ಅಣುಕು ಮತದಾನ ಮಾಡುವ ಮೂಲಕ ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು 7 ಸೆಕೆಂಡ್‌ಗಳಲ್ಲಿ ಖಾತರಿಪಡಿಸಿಕೊಳ್ಳಬಹುದು. ನಂತರ ಅದರು ವಿ.ವಿ ಪ್ಯಾಟ್‌ನಲ್ಲಿ ಮುದ್ರಣಗೊಂಡಿರುವ ಚೀಟಿಯಲ್ಲಿ ದಾಖಲೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಚಿದಾನಂದಪ್ಪ, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ ಅವರು, ಮಹಿಳೆಯರು ಹೆಚ್ಚಾಗಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದ್ದರು. ನಮ್ಮ ಹಿರಿಯರು ತಮ್ಮೊಳಗಿನ ಪ್ರಜ್ಞಾವಂತಿಕೆ, ವಿವೇಚನೆ ಬಳಸಿ, ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಿ, ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುತ್ತಿದ್ದರು. ಅದು ನಮಗೂ ಮಾದರಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆ ಮತ್ತು ಮತದಾನ ಅನಿವಾರ್ಯ ಪ್ರಕ್ರಿಯೆ. ಸಮರ್ಪಕವಾಗಿ ಮತಚಲಾವಣೆ ಮಾಡಿ. ಮತದಾನದಿಂದ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಕರಿಸಿ’ ಎಂದು ಸಲಹೆ ನೀಡಿದರು.

ಈ ಹಿಂದಿನ ಚುನಾವಣೆಯಲ್ಲಿ ಶೇ 64ರಷ್ಟು ಮತದಾನವಾಗಿದೆ. ಉಳಿದ ಶೇ 36 ರಷ್ಟು ಜನ ತಮ್ಮ ಮತ ಚಲಾಯಿಸದೇ ಚುನಾವಣೆಯಿಂದ ದೂರ ಉಳಿದಿದ್ದಾರೆ. ಇದು ಬಹಳ ಬೇಸರದ ವಿಷಯ. ಈ ಬಾರಿ ಹೆಚ್ಚುಪ್ರಮಾಣದಲ್ಲಿ ಮತದಾನವಾಗಬೇಕು. ಯುವಕರು ಮತ ಚಲಾವಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಹನಿ ಹನಿ ನೀರು ಸೇರಿದರೆ ಹಳ್ಳ. ಆ ಹಳ್ಳ ಸಮುದ್ರಕ್ಕೆ ಸೇರಿ ಶಕ್ತಿಯಾಗುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣಾ ಪ್ರಕ್ರಿಯೆಯಲ್ಲಿ ಒಂದೊಂದು ಮತವೂ ಹನಿ ಹನಿ ರೂಪದಲ್ಲಿ ಸೇರಿ ಆಡಳಿತವೆಂಬ ಶಕ್ತಿಯಾಗುತ್ತದೆ. ಹಾಗಾಗಿ ಚುನಾವಣೆ ಮತದಾರರಿಗೆ ತಮ್ಮ ಮತ ಚಲಾಯಿಸುವುದು ಒಂದು ಸಡಗರದ ಹಬ್ಬವಾಗಬೇಕು. ಅದಕ್ಕಾಗಿ ಪ್ರಜ್ಞಾವಂತ ಪ್ರಜೆಗಳು ಆಸೆ, ಅಮಿಷಕ್ಕೆ ಬಲಿಯಾಗದೇ, ಪ್ರಾಮಾಣಿಕವಾಗಿ ಮತ ಚಲಾಯಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀಪತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಮ್ಮ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರೇಖಾ, ಹಾಗೂ ಸಹಾಯಕ ನಿರ್ದೇಶಕ ಹನುಮಂತಪ್ಪ, ಮತ್ತಿತರ ಗಣ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಚಾರ ಸಮಿತಿಯ ಕಾರ್ಯದರ್ಶಿ ಬಿ. ಧನಂಜಯಪ್ಪ ಸರ್ವರನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು ಪ್ರತಿಯೊಬ್ಬರೂ ಮತ ಚಲಾಯಿಸಬೇಕೆಂದು ಪ್ರತಿಜ್ಞಾ ವಿಧಿ ಭೋಧಿಸಿದರು. ಸೃಷ್ಠಿ ಸಾಕ್ಷರತ ಕಲಾ ತಂಡದಿಂದ ಮತದಾರರ ಜಾಗೃತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಮತ ಚಲಾಯಿಸಿ, ಮತದಾನಕ್ಕೂ ಉತ್ತೇಜಿಸಿ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಚಲಾವಣೆ ಕಡ್ಡಾಯ. ಉತ್ತಮ ಆಡಳಿತ ನಡೆಸುವವರನ್ನು ಆಯ್ಕೆ ಮಾಡುವ ಅಧಿಕಾರ ಮತದಾರರ ಕೈಯಲ್ಲಿದೆ. ಕೇವಲ ಮತದಾರರು ಮತ ಚಲಾಯಿಸುವುದು ಅಷ್ಟೆ ಅಲ್ಲ, ಆರ್ಹ ಎಲ್ಲಾ ಮತದಾರರು ಮತ ಚಲಾಯಿಸುವಂತೆ ಮನವರಿಕೆ ಮಾಡಿಕೊಡಬೇಕು. ಇದು ಯುವ ಮತದಾರರ ಜವಾಬ್ದಾರಿ’ ಎಂದು ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಎನ್ ರವೀಂದ್ರ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT