ಬಂಡೀಪುರ: ಬೇಸಿಗೆ ರಜೆಯಲ್ಲಿ ಹೆಚ್ಚಿದ ಆದಾಯ

ಮಂಗಳವಾರ, ಜೂನ್ 18, 2019
24 °C
ವನ್ಯಜೀವಿಗಳ ಕಾಣಲು ಬಂಡೀಪುರಕ್ಕೆ ಪ್ರವಾಸಿಗರ ದಂಡು

ಬಂಡೀಪುರ: ಬೇಸಿಗೆ ರಜೆಯಲ್ಲಿ ಹೆಚ್ಚಿದ ಆದಾಯ

Published:
Updated:
Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯದ 14 ಸಾವಿರ ಎಕರೆಗೂ ಹೆಚ್ಚು ಪ್ರದೇಶ ಫೆಬ್ರುವರಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದರೂ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯ ಮೇಲೆ ಅದು ಪರಿಣಾಮ ಬೀರಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಬೇಸಿಗೆ ರಜೆಯಲ್ಲಿ (ಏಪ್ರಿಲ್‌ ಮತ್ತು ಮೇ) ಅರಣ್ಯ ಇಲಾಖೆಗೆ ಹೆಚ್ಚು ಆದಾಯವೂ ಬಂದಿದೆ. 

ಈ ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 45,469 ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ. ಏಪ್ರಿಲ್‌ನಲ್ಲಿ 19,766 ಮಂದಿ ಬಂದಿದ್ದರೆ, ಮೇನಲ್ಲಿ 25,703 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಎರಡು ತಿಂಗಳಲ್ಲಿ ₹ 2.18 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ ₹ 1.96 ಕೋಟಿ ಸಂಗ್ರಹವಾಗಿತ್ತು. 

ಮೇ ತಿಂಗಳಿನಲ್ಲೇ ಹೆಚ್ಚು: ಏಪ್ರಿಲ್‌ಗಿಂತ ಮೇ ತಿಂಗಳಲ್ಲೇ ಹೆಚ್ಚು ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ₹ 1.15 ಕೋಟಿಯಷ್ಟು ಆದಾಯ ಬಂದಿದ್ದರೆ, ಈ ವರ್ಷ ‌₹ 1.40 ಕೋಟಿ ಸಂಗ್ರಹವಾಗಿದೆ.   

ಪ್ರತಿ ವರ್ಷ ಬೇಸಿಗೆ ರಜೆ‌ಯಲ್ಲಿ ಬಂಡೀಪುರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಈ ಬಾರಿ ಕಾಳ್ಗಿಚ್ಚಿನಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿ ಆದಾಯ ಕಡಿಮೆಯಾಗಬಹುದು ಎಂದು ಕೆಲವು ಅಧಿಕಾರಿಗಳು ಅಂದಾಜಿಸಿದ್ದರು. ಆದರೆ, ಅದು ಸುಳ್ಳಾಗಿದೆ. 

2018ರಲ್ಲಿ 1.91 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರು. ಒಟ್ಟು ₹ 8.52 ಕೋಟಿ ಆದಾಯ ಬಂದಿತ್ತು. 

‘ಸಫಾರಿ, ವಸತಿಗೃಹಗಳು ಮತ್ತು ವಾಹನ ನಿಲುಗಡೆಗೆ ವಿಧಿಸುವ ಶುಲ್ಕಗಳೇ ಇಲ್ಲಿ ಆದಾಯದ ಮೂಲ. ಪ್ರತಿ ತಿಂಗಳು ಸರಾಸರಿ ₹ 50 ಲಕ್ಷ ಆದಾಯ ಇರುತ್ತದೆ. ದಸರಾ ಮತ್ತು ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಆದಾಯವೂ ಹೆಚ್ಚಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಂಡೀಪುರದಲ್ಲಿ 21 ವಸತಿಗೃಹಗಳಿವೆ ಇದೆ. ಎರಡು ಹಾಸಿಗೆಗಳಿರುವ 17 ಕೊಠಡಿ, 4 ಹಾಸಿಗೆಗಳ 1 ಕೊಠಡಿ ಮತ್ತು ಮೂರು ಡಾರ್ಮೆಟರಿಗಳಿವೆ. ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು 7 ಬಸ್ ಮತ್ತು 5 ಜಿಪ್ಸಿಗಳಿವೆ. ದಿನಂಪ್ರತಿ ಜಿಪ್ಸಿಗಳಲ್ಲಿ ಎರಡು ಟ್ರಿಪ್ ಮತ್ತು ಬಸ್ಸಿನಲ್ಲಿ ಮೂರು ಟ್ರಿಪ್ ಸಫಾರಿ ಹೋಗಲಾಗುತ್ತದೆ.

 ***

ಕಾಳ್ಗಿಚ್ಚಿನಿಂದ ಸಫಾರಿ ವಲಯಕ್ಕೆ ತೊಂದರೆಯಾಗಿರಲಿಲ್ಲ. ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿಲ್ಲ. ಈ ಬಾರಿ ಆದಾಯದ ಪ್ರಮಾಣ ಹೆಚ್ಚಾಗಿದೆ
– ಟಿ.ಬಾಲಚಂದ್ರ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

**

ಅಂಕಿ ಅಂಶ

₹ 77.37 ಲಕ್ಷ – ಏಪ್ರಿಲ್‌ನಲ್ಲಿ ಬಂದ ಆದಾಯ

₹ 1.41 ಕೋಟಿ – ಮೇ ತಿಂಗಳ ಆದಾಯ

₹ 2.18 ಕೋಟಿ – ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಬಂದಿರುವ ಆದಾಯ

45,469 – ಎರಡು ತಿಂಗಳಲ್ಲಿ ಭೇಟಿ ನೀಡಿರುವ ಪ್ರವಾಸಿಗರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !