ಧಗಧಗಿಸಿದ ಪ್ರದೇಶದಲ್ಲಿ ಬೀಜ ಬಿತ್ತನೆ

ಭಾನುವಾರ, ಮೇ 26, 2019
26 °C
ಬಂಡೀಪುರ: ಕಾಳ್ಗಿಚ್ಚಿಗೆ ತುತ್ತಾದ ಪ್ರದೇಶದಲ್ಲಿ ಕಾಡು ಬೆಳೆಸ‌ಲು ಪಣ

ಧಗಧಗಿಸಿದ ಪ್ರದೇಶದಲ್ಲಿ ಬೀಜ ಬಿತ್ತನೆ

Published:
Updated:
Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಳ್ಗಿಚ್ಚಿಗೆ ತುತ್ತಾಗಿದ್ದ ವ್ಯಾಪ್ತಿಯಲ್ಲಿ ಮತ್ತೆ ಹಸಿರು ಬೆಳೆಸಲು ಪಣ ತೊಟ್ಟಿರುವ ಅರಣ್ಯ ಇಲಾಖೆಯು ವಿವಿಧ ಮರ, ಬಿದಿರು, ಹುಲ್ಲುಗಳ ಬೀಜಗಳ ಬಿತ್ತನೆ ಕಾರ್ಯದಲ್ಲಿ ತೊಡಗಿದೆ.

ಫೆಬ್ರುವರಿ ಕೊನೆಯ ವಾರದಲ್ಲಿ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯಗಳಲ್ಲಿ ಬೆಂಕಿಗೆ 14 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಹೋಗಿತ್ತು. ಬೆಂಕಿಯಿಂದಾಗಿ ಸೊರಗಿ ಹೋಗಿದ್ದ ಮರಗಳು ಎರಡು ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಚಿಗುರಲು ಆರಂಭಿಸಿವೆ.

ಮಳೆ ಆರಂಭವಾಗಿರುವುದರಿಂದ ಹಸಿರು ನಾಶವಾದ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡಲು ಇಲಾಖೆ ಆರಂಭಿಸಿದೆ.

‘ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ, ಮೊದಲ ಹಂತದ ಬಿತ್ತನೆಗೆ ಚಾಲನೆ ನೀಡಲಾಗಿದೆ. ಬೆಂಕಿ ಬಿದ್ದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ 15 ಮಂದಿ ಸಿಬ್ಬಂದಿ ಮೂರು ದಿನಗಳಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

25 ಟನ್‌ ಬಿತ್ತುವ ಗುರಿ: ‘ಪ್ರಾಥಮಿಕವಾಗಿ 25 ಟನ್‌ಗಳಷ್ಟು ಬೀಜ ಬಿತ್ತುವ ಗುರಿ ಹೊಂದಲಾಗಿದೆ. ಮೊದಲು ಬೆಂಕಿ ಬಿದ್ದ ಪ್ರದೇಶದಲ್ಲಿ ಬಿತ್ತುತ್ತೇವೆ. ಆ ನಂತರ ಖಾಲಿ ಜಾಗ ಇರುವ ಕಡೆ ಬಿತ್ತನೆ ಮಾಡುತ್ತೇವೆ’ ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ರವಿಕುಮಾರ್‌ ಹೇಳಿದರು.

ಹುಲ್ಲು, ಬಿದಿರಿಗೆ ಒತ್ತು: ಹುಲ್ಲು ಮತ್ತು ಬಿದಿರಿನ ಬೀಜಗಳನ್ನು ಬಿತ್ತನೆ ಮಾಡಲು ಹೆಚ್ಚು ಒತ್ತು ನೀಡಲಾಗಿದೆ.  ‘ಹೆಮಟಾ’ ಎಂಬ ಹುಲ್ಲಿನ ಬೀಜವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತಿದೆ. 

‘ಕಾಳ್ಗಿಚ್ಚು ಕಂಡು ಬಂದ ಪ್ರದೇಶದಲ್ಲಿ ಬೆಂಕಿಯ ಶಾಖ ನೆಲದಲ್ಲಿ ತುಂಬಾ ಆಳಕ್ಕೆ ಹೋಗದಿದ್ದರೆ, ಅಲ್ಲಿರುವ ಗಿಡ ಮರಗಳ ಬೇರುಗಳು ಮಳೆಗಾಲದಲ್ಲಿ ಚಿಗುರುವ ಸಂಭವ ಇರುತ್ತದೆ. ಆದರೆ, ಹುಲ್ಲು ಸಂಪೂರ್ಣವಾಗಿ ನಾಶವಾಗಿರುತ್ತದೆ. ಮಣ್ಣಿನ ಸವಕಳಿಯನ್ನು ಕಾಪಾಡಲು ಹುಲ್ಲು ಮುಖ್ಯ. ಹೀಗಾಗಿ, ಹುಲ್ಲಿನ ಬೀಜವನ್ನು ಬಿತ್ತನೆ ಮಾಡಲಾಗುತ್ತಿದೆ’ ಎಂದು ಬಾಲಚಂದ್ರ ವಿವರಿಸಿದರು.

‘ಸದ್ಯ 3 ಟನ್‌ಗಳಷ್ಟು ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಲಾಗುವುದು. ಪ್ರಾಥಮಿಕವಾಗಿ ಎರಡು ಟನ್‌ಗಳಷ್ಟು ಬಿದಿರಿನ ಬೀಜಗಳನ್ನು ಹಾಕುತ್ತಿದ್ದೇವೆ’ ಎಂದು ರವಿಕುಮಾರ್‌ ಹೇಳಿದರು.

ಹುಲ್ಲು, ಬಿದಿರಿನ ಜೊತೆಗೆ, ಕಾಡು ನೆಲ್ಲಿ, ಅಂಟುವಾಳ,‌ ಹುಣಸೆ, ನೇರಳೆ ಬೀಜಗಳನ್ನು ಸಣ್ಣ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತಿದೆ. 

ರಾಜ್ಯ ಬೀಜ ನಿಗಮ ಹಾಗೂ ಅರಣ್ಯ ಇಲಾಖೆಯ ಬೀಜ ಬ್ಯಾಂಕ್‌ಗಳಿಂದ ಬಿತ್ತನೆ ಬೀಜಗಳನ್ನು ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

*
ಈ ಭಾಗದಲ್ಲಿ ಸೆಪ್ಟೆಂಬರ್‌ ನಂತರ ಉತ್ತಮ ಮಳೆಯಾಗುವುದರಿಂದ ಆಗ ದೊಡ್ಡ ಪ್ರಮಾಣದಲ್ಲಿ ಬೀಜ ಬಿತ್ತನೆ ಮಾಡುತ್ತೇವೆ. 
-ಬಾಲಚಂದ್ರ, ಬಂಡೀಪುರ ಹುಲಿಯೋಜನೆ ನಿರ್ದೇಶಕ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !