ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರನ್ನೇ ಬೇರೊಂದು ಸ್ಥಳಕ್ಕೆ ಏಕೆ ವರ್ಗಾಯಿಸಬಾರದು?: ಹೈಕೋರ್ಟ್‌ ಪ್ರಶ್ನೆ

Last Updated 9 ಜನವರಿ 2019, 19:25 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರವನ್ನೇ ಬೇರೊಂದು ಸ್ಥಳಕ್ಕೆ ಏಕೆ ವರ್ಗಾಯಿಸಬಾರದು...?

ಬೆಂಗಳೂರು ಎದುರಿಸುತ್ತಿರುವ ಸಮಸ್ತ ಸಮಸ್ಯೆಗಳ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರಶ್ನಿಸಿರುವ ಪರಿ ಇದು.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್ ತೆರವುಗೊಳಿಸಬೇಕು, ಮತ್ತು ರಸ್ತೆ ಗುಂಡಿ ಭರ್ತಿಗೆ ನಿರ್ದೇಶಿಸಬೇಕು’ ಎಂಬ ಕೋರಿಕೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ಬೆಂಗಳೂರು ನಗರ ಎದುರಿಸುತ್ತಿರುವ ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಬಿಬಿಎಂಪಿ, ಪರಿಸರ ಮಂಡಳಿ ಮತ್ತು ಅಡ್ವೊಕೇಟ್‌ ಜನರಲ್‌ ಅವರಿಂದ ವಿವರವಾದ ಮಾಹಿತಿ ಪಡೆಯಿತು.

ಈ ವೇಳೆ ಪರಿಸರ ಮಂಡಳಿ ಪರ ವಕೀಲ ಗುರುರಾಜ ಜೋಷಿ ಅವರನ್ನು, ‘ಏಕೆ ಬೆಂಗಳೂರು ನಗರವನ್ನೇ ಬೇರೊಂದು ಸ್ಥಳಕ್ಕೆ ವರ್ಗಾಯಿಸಬಾರದು’ ಎಂದು ಲಘು ಧಾಟಿಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಅಷ್ಟೇ ಗಂಭೀರವಾಗಿ ಉತ್ತರಿಸಿದ ಜೋಷಿ, ‘ನವಿ ಮುಂಬೈ ತೆರದಲ್ಲಿ ನವ ಬೆಂಗಳೂರನ್ನು ಬೆಳೆಸುವ ಅವಶ್ಯಕತೆ ಇದೆ. ಇದಕ್ಕೆ ತುಮಕೂರು ಮಾರ್ಗ ಸೂಕ್ತವಾಗಿದೆ’ ಎಂದರು.

ಹೆಬ್ಬಾಳ ಮೇಲ್ಸೇತುವೆಯಿಂದ ವಿಂಡ್ಸರ್‌ ಮ್ಯಾನರ್‌ವರೆಗಿನ ಸಂಚಾರ ದಟ್ಟಣೆಯನ್ನು ಪ್ರಸ್ತಾಪಿಸಿದ ದಿನೇಶ್‌ ಮಾಹೇಶ್ವರಿ, ‘ಏಕೆ ಈ ರೀತಿಯ ದಟ್ಟಣೆ ಆಗುತ್ತಿದೆ, ಸಿಟಿ ಬಸ್‌ಗಳ ಬದಲಿಗೆ ಮಿನಿ ಬಸ್‌ಗಳನ್ನು ಏಕೆ ಓಡಿಸಬಾರದು, ಈ ದಿಸೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ, ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ, ‘ಬಳ್ಳಾರಿ ರಸ್ತೆಯಲ್ಲಿನ ಅರಮನೆ ಮೈದಾನ ಪ್ರದೇಶದ ವಿಸ್ತರಣೆಗೆ ಜಾಗ ಬಿಟ್ಟುಕೊಡಲಾಗಿದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಸ್ಥಿರಾಸ್ತಿಯ ವಾರಸುದಾರರ ನಡುವಿನ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು ಇನ್ನೂ ವಿಲೇವಾರಿ ಆಗಿಲ್ಲ. ಇದರಿಂದಾಗಿ ಉದ್ದೇಶಿತ ವಿಸ್ತರಣೆಗೆ ತೊಂದರೆ ಆಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಜೋಷಿ ಅವರು, ‘ನಗರದ ಜನಸಂಖ್ಯೆ ಈಗ್ಗೆ ನಾಲ್ಕು ವರ್ಷಗಳ ಹಿಂದೆ 55 ಲಕ್ಷದಷ್ಟಿತ್ತು. ಈಗ 74 ಲಕ್ಷಕ್ಕೇರಿದೆ. ಇದರಿಂದಾಗಿ ವಾಹನಗಳ ಸಂಖ್ಯೆ ಹೆಚ್ಚಿದೆ. ಅಂತೆಯೇ 15 ವರ್ಷ ಅವಧಿ ಪೂರೈಸಿದ ವಾಹನಗಳನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಮಾಹೇಶ್ವರಿ, ‘ಈ ದಿಸೆಯಲ್ಲಿ ಏನಾದರೂ ಒಂದು ಮಾರ್ಗೋಪಾಯ ಕಂಡು ಹಿಡಿಯಲೇ ಬೇಕು. ಬೆಂಗಳೂರಿನ ಗತ ವೈಭವ ಮತ್ತೆ ಮರುಕಳಿಸಲೇ ಬೇಕು’ ಎಂದರು.

ಇದೇ ವೇಳೆ ಉದಯ ಹೊಳ್ಳ ಅವರು, ‘ಜಾಹೀರಾತು ನೀತಿಗೆ ಸಂಬಂಧಿಸಿದ ಉದ್ದೇಶಿತ ಬೈ–ಲಾ ಅನ್ನು ನಾಲ್ಕೈದು ದಿನಗಳಲ್ಲಿ ರಾಜ್ಯ ಸರ್ಕಾರ ಅಂತಿಮಗೊಳಿಸಲಿದೆ’ ಎಂದು ತಿಳಿಸಿದರು.

**

‘ಜಾಹೀರಾತು ಫಲಕಮುಕ್ತ ಬೆಂಗಳೂರು’

‘ನಗರದಲ್ಲಿ ಸದ್ಯ ಯಾವುದೇ ಅನಧಿಕೃತ ಜಾಹೀರಾತುಗಳು ಇಲ್ಲ’ ಎಂದು ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ದಿನೇಶ್‌ ಮಾಹೇಶ್ವರಿ ‘ಮರದ ಮೇಲೆ ಅಂಟಿಸುವ ಜಾಹೀರಾತುಗಳೂ ಕಾಣಿಸಕೂಡದು’ ಎಂದು ತಾಕೀತು ಮಾಡಿದರು.

ಅನಧಿಕೃತವಾಗಿ ಜಾಹೀರಾತು ಫಲಕ ಹಾಕುವವರ ಮೇಲೆ ಪೊಲೀಸರು ನಿಗಾ ಇರಿಸಬೇಕು ಎಂದು ಪುನರುಚ್ಚರಿಸಿದರು.

**

ನಾವು ಇಲ್ಲಿ ಬಹಳಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿದ್ದೇವೆ. ಇದರಿಂದಾಗಿ ಬೆಂಗಳೂರು ನಲುಗುತ್ತಿದೆ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದೇ ಹೋದರೆ ಭವಿಷ್ಯದಲ್ಲಿ ಕಷ್ಟವಿದೆ.

–ದಿನೇಶ್ ಮಾಹೇಶ್ವರಿ,ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT