ಬಜೆಟ್‌ ಸ್ವಗತ: ಉದ್ಯಾನ ನಗರಿಯ ಬಜೆಟ್‌ಗಾಥೆ

7

ಬಜೆಟ್‌ ಸ್ವಗತ: ಉದ್ಯಾನ ನಗರಿಯ ಬಜೆಟ್‌ಗಾಥೆ

Published:
Updated:

ಭಾರತದ ಸಿಲಿಕಾನ್‌ ಕಣಿವೆ, ಸಾಫ್ಟ್‌ವೇರ್‌ ರಾಜಧಾನಿ, ಸ್ಟಾರ್ಟ್‌ಅಪ್‌ ರಾಜಧಾನಿ, ಗಾರ್ಬೆಜ್‌ ಸಿಟಿ, ಕಾಂಕ್ರೀಟ್ ಸಿಟಿ, ಕಾಸ್ಮೊಪಾಲಿಟಿನ್‌ ಸಿಟಿ, ಸ್ಮಾರ್ಟ್‌ ಸಿಟಿ, ಒತ್ತುವರಿಯಿಂದ ಬತ್ತಿ ಹೋದ, ರಾಸಾಯನಿಕ ತ್ಯಾಜ್ಯದಿಂದ ಹೊತ್ತಿ ಉರಿಯುವ ಕೆರೆಗಳು – ಇಂತಹ ಹಲವು ಬಗೆಯ ಖ್ಯಾತಿ – ಕುಖ್ಯಾತಿಗಳನ್ನೆಲ್ಲ ನನ್ನ ಒಡಲ ಒಳಗೆ ಹುದುಗಿಸಿಕೊಂಡಿರುವ ಬೆಂಗಳೂರು ಮಹಾನಗರ ಖ್ಯಾತಿಯ ನಾನು ಎಂದೋ ಬೆಂದು ಹೋಗಿರುವೆ. ನನ್ನೆಲ್ಲ ಗಾಯಗಳಿಗೆ ಮುಲಾಮು ಹಚ್ಚುವ, ತುಂಡು ಗುತ್ತಿಗೆ ಹೆಸರಿನಲ್ಲಿ ತೇಪೆ ಹಾಕುವ ಬಜೆಟ್‌ನಲ್ಲಿ ಈ ಬಾರಿ ಭರಪೂರ ಕೊಡುಗೆ ಸಿಕ್ಕಿರುವುದು ಕಂಡು ನನ್ನಷ್ಟಕೆ ನಾನೇ ಹೆಮ್ಮೆ ಪಡುವ ಬಗ್ಗೆಯೇ ನನ್ನಲ್ಲಿಯೇ ಅನುಮಾನಗಳಿವೆ.

ಎಲಿವೇಟೆಡ್‌ ಕಾರಿಡಾರ್‌ಗೆ ಮೂರು ಸಾವಿರಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಏಟು. ಮಗುವಿನ ಬಲಿ ತೆಗೆದುಕೊಂಡ ಮೆಟ್ರೊ, ಸಂಪೂರ್ಣ ಜಾರಿಯಾಗದ ಸಬರ್ಬನ್‌ ರೈಲು ಸೇವೆ, ಸಾವಿನ ಕುಣಿಗಳಾಗಿ ಪರಿಣಮಿಸಿರುವ ರಸ್ತೆ ಗುಂಡಿಗಳು.. ಸಮಸ್ಯೆಗಳ ಸರಮಾಲೆಯೇ ಇದುವರೆಗಿನ ಅಭಿವೃದ್ಧಿಯನ್ನು ಅಣಕಿಸುತ್ತಲೇ ಇವೆ.

ಅಭಿವೃದ್ಧಿಯೇ ಆಗಿಲ್ಲ ಎಂದೇನೂ ನಾನು ದೂರುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ, ಸೆರಗಿನಲ್ಲಿ ಕಟ್ಟಿಕೊಂಡಿರುವ ನಗರೀಕರಣದ ಸಕಲ ರೋಗಗಳ ಕೆಂಡವು ನನ್ನ ಸುಡುತ್ತಿದೆ. ಉದ್ಯಾನ ನಗರಿಯ ಖ್ಯಾತಿಗೆ ಮಸಿ ಬಳಿಯುತ್ತಿರುವ ಬೆಳವಣಿಗೆಯ ವೇಗ ಕಂಡು ಅಸಹಾಯಕತೆಯಿಂದ ನರಳುತ್ತಿರುವೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬಜೆಟ್‌ ಮಂಡನೆಯ ಆಚೀಚಿನ ಎರಡು ಮೂರು ದಿನಗಳ ಕಾಲ ಚರ್ಚೆಯ ಕೇಂದ್ರ ಬಿಂದುವಾಗಿ ನಾನು ಗಮನ ಸೆಳೆಯುತ್ತೇನೆ. ಬಜೆಟ್‌ನಲ್ಲಿನ ಭರ್ಜರಿ ಕೊಡುಗೆಗಳು ಹೆಚ್ಚಾದಷ್ಟು, ಬಜೆಟ್‌ ಗಾತ್ರ ಹಿಗ್ಗಿದಷ್ಟು, ಸಿಮೆಂಟ್‌, ಡಾಂಬರ್‌ ತಿಂದು ತೇಗುವ ಪುಢಾರಿಗಳ ಗುಡಾಣದಂತಹ ಹೊಟ್ಟೆ ಕೂಡ ಇನ್ನಷ್ಟು ದೊಡ್ಡದಾಗುತ್ತದೆ. ಟೆಂಡರ್‌ಶ್ಯೂರ್‌, ವೈಟ್‌ಟಾಪಿಂಗ್‌ ಹೆಸರಿನ ಹೊಸ ಯೋಜನೆಗಳು ನುಂಗಣ್ಣರ ಹೊಸ ಆದಾಯದ ಮೂಲಗಳಾಗಿವೆ.

ವಿಧಾನಸಭೆಯಲ್ಲಿ ಬಜೆಟ್‌ ಮಂಡನೆಯಾಗುವಾಗಲೇ, ರಣ ಹದ್ದುಗಳು, ಹೆಗ್ಗಣಗಳು, ಕಮಿಷನ್‌ ಏಜೆಂಟರು, ಕಸ ವಿಲೆವಾರಿ ಮಾಫಿಯಾದವರು ಈ ವರ್ಷದ ಹೆಚ್ಚುವರಿ ಕಮಾಯಿ ಎಷ್ಟಿರಬಹುದು ಎಂದು ಲೆಕ್ಕ ಹಾಕುತ್ತಿದ್ದರೆ, ಚಾನೆಲ್‌ಗಳಲ್ಲಿ ಕುಳಿತ ಅಧಿಕಾರಸ್ಥರ ವಂದಿಮಾಗಧರು ಅಭಿವೃದ್ಧಿಯ ರೈಲು ಬಿಡುತ್ತಲೇ ಇರುತ್ತಾರೆ.

ಬಜೆಟ್‌ ಪ್ರಸ್ತಾವಗಳನ್ನು ಟೀಕಿಸುವುದು ನಮ್ಮ ಕರ್ಮ ಎಂದು ಹಲುಬುತ್ತಲೇ ಆಡಳಿತ ಪಕ್ಷದವರನ್ನು ಟಿವಿ ಕ್ಯಾಮರಾಮನ್‌ಗಳ ಎದುರು ವಿರೋಧಿ ಬಣದವರು ಟೀಕಿಸಿ ಬೈಟ್‌ ನೀಡಿ ಕಾಟಾಚಾರ ಪೂರ್ಣಗೊಳಿಸುತ್ತಾರೆ. ಸಂಜೆ ಪ್ರತಿಷ್ಠಿತ ಕ್ಲಬ್‌ಗಳಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ಜತೆಯಾಗಿ ಬ್ರ್ಯಾಂಡಿ, ವಿಸ್ಕಿ ಗುಟುಕರಿಸುತ್ತ ಈ ವರ್ಷದ ಕಮಾಯಿ ಎಷ್ಟಿರ ಬಹುದು ಎಂದು ಲೆಕ್ಕ ಹಾಕುತ್ತಿರುತ್ತಾರೆ. ಪಾಪದ ಜನಸಾಮಾನ್ಯರು ಅದೇ ಟಾರ್‌ ಕಾಣದ, ಹೈಕೋರ್ಟ್‌ ಛೀಮಾರಿ ಹೊರತಾಗಿಯೂ ಗುಂಡಿ ಮುಚ್ಚದ, ಎಲ್ಲೆಂದರಲ್ಲಿ ಅಗೆದ ರಸ್ತೆ, ಬಿಳಿಬಣ್ಣ ಬಳಿಯದ ಉಬ್ಬು ಮತ್ತಿತರ ಅಡಚಣೆಗಳ ಮಧ್ಯೆಯೇ ಎರ್ರಾಬಿರ್ರಾಗಿ ಸಾಗುವ ಬೈಕ್‌, ಕಾರ್‌, ಬಿಎಂಟಿಸಿ ಬಸ್‌ಗಳಡಿ ಸಿಲುಕುವ ಜೀವ ಭಯದಿಂದಲೇ ರಸ್ತೆ ದಾಟಿ ಬದುಕಿದೆಯಾ ಬಡಜೀವ ಎಂದು ನಿಟ್ಟುಸಿರು ಬಿಡುತ್ತಾರೆ.

ಬಜೆಟ್‌ ಕೊಡುಗೆ ಅನೇಕರ ಜೇಬನ್ನು ಭರ್ತಿ ಮಾಡುತ್ತದೆಯೇ ಹೊರತು, ನನ್ನ ಓರೆಕೋರೆಗಳನ್ನೆಲ್ಲ ನೇರ್ಪುಗೊಳಿಸಲಾರದು ಅನ್ನೋದು ನನ್ನ ಒಡಲ ಸಂಕಟ. ಓದುಗರ ಮುಂದೆ ಹೇಳಿಕೊಂಡರೆ ಭಾರ ಇಳಿಸಿಕೊಂಡಂತೆ ಆಗುವ ಕಾರಣಕ್ಕೆ ನಿಮ್ಮೊಂದಿಗೆ ಹಂಚಿ ಕೊಂಡಿರುವೆ. ವರ್ಷಕ್ಕೊಮ್ಮೆ ನನ್ನ ಅಭಿವೃದ್ಧಿ ಕಥೆ ಹೇಳಿಕೊಂಡು ದುಃಖಪಡುವುದು ನನ್ನ ಕರ್ಮ. ಕಟ್ಟಡಗಳ ನಿರ್ಮಾಣಕ್ಕೆ ಉತ್ತರ ಕರ್ನಾಟಕದಿಂದ ಗುಳೆ ಬಂದ, ಆಂಧ್ರ, ತಮಿಳು ನಾಡಿನಿಂದ ವಲಸೆ ಬಂದವರು ನಿಸರ್ಗ ಕರೆಗೆ ಓಗೊಡಲು ಸಮೀಪದ ಬಯಲು, ಕಾಡು, ಕಟ್ಟಡಗಳ ಮರೆಯನ್ನೆ ಆಶ್ರಯಿಸಿರುವುದು ನನ್ನ ಪಾಲಿನ ಕಪ್ಪು ಚುಕ್ಕೆಗಳಲ್ಲಿ ಒಂದಾಗಿದೆ.

ಸಮಗ್ರ ಅಭಿವೃದ್ಧಿ ಅನುದಾನ, ಬಜೆಟ್‌ ಕೊಡುಗೆಗಳಲ್ಲಿ ಬಹುಪಾಲು ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ ಮಧ್ಯೆ ಪರ್ಸೆಂಟ್‌ ಹಂಚಿಕೆ ನಂತರವೂ ಉಳಿಯುವ ಸಣ್ಣ ಮೊತ್ತವೂ ಸದ್ಬಳಕೆಯಾದರೆ, ನನ್ನ ಚಹರೆ ಖಂಡಿತವಾಗಿಯೂ ಬದಲಾಗುತ್ತದೆ.

ಇಂತಿ ನಿಮ್ಮ ಬೆಂಗಳೂರು ನಗರಿ

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !