ಬಿಜೆಪಿಯವರು ಬುರ್ಖಾ ಹಾಕಿಕೊಂಡು ಬರಲಿ: ಸಿದ್ದರಾಮಯ್ಯ ಲೇವಡಿ

ಶುಕ್ರವಾರ, ಏಪ್ರಿಲ್ 19, 2019
22 °C
‘ಅರಸನೂ ಅಲ್ಲ, ಮಗನೂ ಅಲ್ಲ’: ಸದಾನಂದ ಗೌಡ ವ್ಯಂಗ್ಯ

ಬಿಜೆಪಿಯವರು ಬುರ್ಖಾ ಹಾಕಿಕೊಂಡು ಬರಲಿ: ಸಿದ್ದರಾಮಯ್ಯ ಲೇವಡಿ

Published:
Updated:
Prajavani

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ ಎಂದು ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಮನವಿ ಮಾಡುತ್ತಿದ್ದಾರೆ. ಅವರು ಮುಖ ಮುಚ್ಚಿಕೊಂಡು, ಬುರ್ಖಾ ಹಾಕಿಕೊಂಡು ಪ್ರಚಾರಕ್ಕೆ ಬರಲಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರವಾಗಿ ಪ್ರಚಾರ ಮಾಡಿ ಅವರು ಮಾತನಾಡಿ, ‘ಬಿಜೆಪಿಯ ಸಂಸದರು ಐದು ವರ್ಷಗಳಲ್ಲಿ ಏನೂ ಕೆಲಸ ಮಾಡಿಲ್ಲ. ಹಾಗಾಗಿ, ನಮ್ಮ ಮುಖ ನೋಡಿ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ’ ಎಂದರು.

‘ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡರಿಗೆ ನಗುವುದು ಬಿಟ್ಟು ಮತ್ತೇನೂ ಗೊತ್ತಿಲ್ಲ. ಎಲ್ಲದಕ್ಕೂ ಹಲ್ಲು ಕಿಸಿಯುತ್ತಾರೆ. ಕೃಷ್ಣ ಬೈರೇಗೌಡರು ಇಲ್ಲಿನವರೇ. ಕೈಗೆ ಸಿಗುತ್ತಾರೆ. ಸದಾನಂದ ಗೌಡರು ಪುತ್ತೂರು ಸುಳ್ಯದವರು. ಅರೆಭಾಷೆ ಒಕ್ಕಲಿಗರು. ಅವರನ್ನು ಸೋಲಿಸಿ ಸುಳ್ಯಕ್ಕೆ ಓಡಿಸಿ’ ಎಂದು ಕರೆ ನೀಡಿದರು.

‘ಸದಾ+ ಆನಂದ ಸವರ್ಣದೀರ್ಘ ಸಂಧಿ. ಸದಾನಂದ ಗೌಡರು ಆನಂದದಲ್ಲಿದ್ದಾರೆ. ಅವರು ಮತದಾರರನ್ನು ಆನಂದದಲ್ಲಿ ಇಟ್ಟಿಲ್ಲ. ರೈಲ್ವೆ ಖಾತೆ ಕಿತ್ತುಕೊಂಡಿದ್ದು ಏಕೆ ಎಂದು ಒಂದು ಸಲ ಅವರನ್ನು ಕೇಳಿದ್ದೆ. ಅದಕ್ಕೆ ಸದಾನಂದ ಗೌಡರು ನಕ್ಕರು ಅಷ್ಟೇ. ಅವರು ಅಸಮರ್ಥ ವ್ಯಕ್ತಿ ಎಂಬುದು ಆಗ ಗೊತ್ತಾಯಿತು’ ಎಂದರು.

‘ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಚುನಾವಣೆ ಮಾಡುತ್ತಾರೆ. ಹಿಂದೂ - ಮುಸ್ಲಿಂ ಎಂದು ಭೇದ ಭಾವ ಮಾಡುತ್ತಾರೆ. ಯಡಿಯೂರಪ್ಪ ಅವರಿಗೆ ಒಂದು ವೇಳೆ ಆಪರೇಷನ್ ಆಗಿ ರಕ್ತ ಬೇಕಾದಾಗ ಹಿಂದೂ ರಕ್ತನೇ ಕೊಡಿ ಅಂತ ಕೇಳುತ್ತಾರಾ. ಮುಸ್ಲಿಮರು ರಕ್ತ ಕೊಡುವುದು ಬೇಡವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಸೂರ್ಯ ಅಲ್ಲ ಅಮಾವಾಸ್ಯೆ’
‘ಬಿಜೆಪಿಯವರು ಬೆಂಗಳೂರು ದಕ್ಷಿಣದಲ್ಲಿ ಒಬ್ಬನಿಗೆ ಟಿಕೆಟ್‌ ಕೊಟ್ಟಿದ್ದಾರೆ. ಅವರ ಹೆಸರು ತೇಜಸ್ವಿ ಸೂರ್ಯ ಅಂತ. ಅವನನ್ನು ಸೂರ್ಯ ಅಲ್ಲ ಅಮಾವಾಸ್ಯೆ ಅಂತ ಕರೆಯಬೇಕು’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

‘ಅಂಬೇಡ್ಕರ್‌ ಪ್ರತಿಮೆ ಸುಡಬೇಕು ಎಂದು ತೇಜಸ್ವಿ ಸೂರ್ಯ ಹೇಳುತ್ತಾನೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ‘ಸಿದ್ದರಾಮಯ್ಯ ಅವರ ಹೇಳಿಕೆಯೇ ನನಗೆ ಆಶೀರ್ವಾದ’ ಎಂದು ಪ್ರತಿಕ್ರಿಯಿಸಿದರು.

ಉತ್ತರದಲ್ಲಿ ದೇವೇಗೌಡ ಪ್ರಚಾರ
ಕೃಷ್ಣ ಬೈರೇಗೌಡರ ಪರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಶುಕ್ರವಾರ ಸಂಜೆ ಜಂಟಿ ಪ್ರಚಾರ ನಡೆಸಿದರು.

‘ನನ್ನ ಮಗ ಸಿ.ಎಂ ಆಗಿದ್ದರೂ ಪ್ರಚಾರಕ್ಕೆ ಹೆಲಿಕಾಪ್ಟರ್‌ ಪಡೆಯಲು ಆಗುತ್ತಿಲ್ಲ. ನಾನು ಸಿದ್ದರಾಮಯ್ಯ ಅವರೊಂದಿಗೆ ಹೋಗಿ ಪ್ರಚಾರ ಮಾಡಿ, ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ’ ಎಂದು ದೇವೇಗೌಡರು ಹೇಳಿದರು. ನಗರಕ್ಕೆ 9 ಟಿಎಂಸಿ ಅಡಿ ಕಾವೇರಿ ನೀರು ಕೊಟ್ಟವರು ನಾವು. ಕೊಳೆಗೇರಿ ಜನರ ಅಭಿವೃದ್ಧಿಗೆ ಪಣ ತೊಟ್ಟ ಪಕ್ಷ ನಮ್ಮದು’ ಎಂದರು.

‘ಅರಸನೂ ಅಲ್ಲ, ಮಗನೂ ಅಲ್ಲ’
‘ಮಾನ್ಯ ಸಿದ್ದರಾಮಯ್ಯನವರೇ ನನ್ನ ಸಾಧನೆ ಏನೆಂದು ತಿಳಿಸಲು ನಿಮ್ಮ ವಿಳಾಸ ಕೇಳಿದ್ದೆ. ಆದರೆ, ನಿಮಗೆ ವಿಳಾಸ ಇಲ್ಲ. ಹಾಗಾಗಿ ನೀವು ಕೊಡಲಿಲ್ಲ, ನೀವು ಊರಿಗೂ ಅರಸನಲ್ಲ. ಹೆತ್ತೂರಿಗೆ ಮಗನೂ ಅಲ್ಲ. ಒಂದು ರೀತಿಯಲ್ಲಿ ರಾಜಕೀಯ ಪರಿತ್ಯಕ್ತ ವ್ಯಕ್ತಿ ನೀವು. ಹಾಗಾಗಿ ನಿಮಗೆ ವಿಳಾಸ ಇಲ್ಲ’ ಎಂದು ಡಿ.ವಿ.ಸದಾನಂದ ಗೌಡ ಟ್ವೀಟ್‌ ಮಾಡಿದ್ದಾರೆ.

**

ಸದಾನಂದ ಗೌಡರನ್ನು ಬೆಂಗಳೂರಿನ ಜನರು ಸುಳ್ಯಕ್ಕೆ ಕಳುಹಿಸದಿದ್ದರೆ, ಇಲ್ಲಿನ ಯುವಕರು ಮನೆಯಲ್ಲೇ ಉಳಿಯಬೇಕಾಗುತ್ತದೆ.
–ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

**
ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ದೈಹಿಕವಾಗಿ, ಮಾನಸಿಕವಾಗಿ ದೂರ ಹೋಗಿದ್ದಾರೆ. ಕೈಗೆ ಸಿಗದ ,ಕಣ್ಣಿಗೆ ಕಾಣದ, ಕೆಲಸ ಮಾಡದ ಸಂಸದರು ಬೇಕಾ.
–ಕೃಷ್ಣ ಬೈರೇಗೌಡ, ಮೈತ್ರಿ ಅಭ್ಯರ್ಥಿ

**

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಎಷ್ಟು ಸಲ ಬಂದಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಅವರ ಕೊಡುಗೆ ಏನು?
–ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ಸಿ.ಎನ್‌.ಅಶ್ವತ್ಥನಾರಾಯಣ ಆಪರೇಷನ್‌ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ರಯತ್ನಪಟ್ಟವರಲ್ಲಿ ಒಬ್ಬರು. ಸಮಯ ಬಂದಾಗ ಅವರ ಬಗ್ಗೆ ಮಾತನಾಡುತ್ತೇನೆ.
–ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 1

  Sad
 • 1

  Frustrated
 • 11

  Angry

Comments:

0 comments

Write the first review for this !