ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದರ್ಶನ ಕಲೆಯಲ್ಲಿ ಗಡಿ ಗ್ರಾಮದ ಹುಡುಗನಿಗೆ ಪ್ರಥಮ ರ‍್ಯಾಂಕ್‌

ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆ–ನಾಟಕ ವಿಭಾಗ
Last Updated 21 ನವೆಂಬರ್ 2018, 20:45 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಗಡಿ ಗ್ರಾಮ ಬೈರಗಾಮ ದಿನ್ನೆಯ ಯುವಕ ಆರ್.ಪಿ.ಮಂಜುನಾಥ್, ಈಗ ಪ್ರಥಮ ರ‍್ಯಾಂಕ್‌ ಸಂಭ್ರಮದಲ್ಲಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆಯ ನಾಟಕ ವಿಭಾಗದಲ್ಲಿ ಮಂಜುನಾಥ್‌ ಮೊದಲಿಗರಾಗಿದ್ದು, ರ‍್ಯಾಂಕ್‌ ಪಡೆದವರ ಪಟ್ಟಿಯನ್ನು ವಿಶ್ವವಿದ್ಯಾಲಯ ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ನಾಲ್ಕು ನಾಟಕಗಳನ್ನು ರಚಿಸಿ, ಆರು ನಾಟಕಗಳನ್ನು ನಿರ್ದೇಶಿಸಿದ ಅವರು ಇದುವರೆಗೆ ಮೂವತ್ತು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರ ತಂದೆ ಕೆ.ಪ್ರಕಾಶ್‌ ಗೌಡ ಕೃಷಿಕ ಹಾಗೂ ಬಯಲಾಟ ಕಲಾವಿದರು.

ಕಾರಂತ ರಂಗಲೋಕ: ವಿದ್ಯಾಭ್ಯಾಸದ ಅವಧಿಯಲ್ಲೇ ಕಾರಂತ ರಂಗಲೋಕ ಸಂಸ್ಥೆಯನ್ನು ಸ್ಥಾಪಿಸಿದ್ದ ಮಂಜುನಾಥ್‌, ರಂಗಚಟುವಟಿಕೆಗಳನ್ನೂ ಹಮ್ಮಿಕೊಳ್ಳುತ್ತಿದ್ದರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಕಾಲೇಜಿನ ‘ಬೆಸ್ಟ್‌ ಔಟ್‌ ಗೋಯಿಂಗ್‌ ಸ್ಟೂಡೆಂಟ್‌’ ಆಗಿ 2013ರಲ್ಲಿ ಹೊರಹೊಮ್ಮಿದ್ದ ಅವರು, ಈಗ ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ‘ಬೆಸ್ಟ್ ಔಟ್ ಗೋಯಿಂಗ್‌ ಸ್ಟೂಡೆಂಟ್‌’ ಆಗಿದ್ದಾರೆ.

ಕೆ–ಸೆಟ್‌ನಲ್ಲೂ ಸಾಧನೆ: ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (ಕೆ–ಸೆಟ್) ನಾಟಕ ಕಲೆ ವಿಷಯದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂಕ (220) ಗಳಿಸಿ, ಉಪನ್ಯಾಸಕ ಹುದ್ದೆಗೆ ಅರ್ಹತೆ ಗಳಿಸಿರುವುದು ಮತ್ತೊಂದು ಹೆಗ್ಗಳಿಕೆ.

ಬಾಲ್ಯದಿಂದಲೂ ರಂಗಚಟುವಟಿಕೆಗಳತ್ತ ಆಸಕ್ತಿ ಮೂಡಿಸಿಕೊಂಡಿದ್ದ ಅವರು, ಡಿ.ಇಡಿ, ಬಿ.ಇಡಿ ಪದವೀಧರ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಇನ್‌ ಡ್ರಾಮಾ ಶಿಕ್ಷಣ ಪಡೆದಿದ್ದರು. ಏಳನೇ ತರಗತಿಯಲ್ಲಿದ್ದಾಗಲೇ ‘ನಮ್ಮ ಗುಂಡ’ ಎಂಬ ನಾಟಕವನ್ನು ರಚಿಸಿ, ಅಭಿನಯಿಸಿ ನಿರ್ದೇಶಿಸಿದ್ದರು.

ಇಂಡಿಯನ್ ಡಿ.ಇಡಿ ತರಬೇತಿ ಸಂಸ್ಥೆಯಲ್ಲಿ ಓದುವಾಗ ‘ಕರಾವಳಿ ಕೇಸರಿ’ ನಾಟಕವನ್ನು ನಿರ್ದೇಶಿಸಿ, ಅಭಿನಯಿಸಿ ಬಹುಮಾನ ಪಡೆದು ರಂಗತೋರಣ ರಾಜ್ಯ ನಾಟಕೋತ್ಸವಕ್ಕೆ ಆಯ್ಕೆಯಾಗಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ‘ಜನಪದ ನೃತ್ಯ’ ಪ್ರದರ್ಶಿಸಿ ಪ್ರಥಮ ಬಹುಮಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

‘ಪ್ರಜಾವಾಣಿ’ ಕಾರಣ: ‘ಈ ಸಾಧನೆಗೆ ಪ್ರಜಾವಾಣಿಯೇ ಕಾರಣ ಮತ್ತು ಪ್ರೇರಣೆ’ ಎಂಬುದು ಮಂಜುನಾಥ್‌ ಅವರ ಕೃತಜ್ಞತೆಯ ನುಡಿ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಪದವಿ ಓದುವಾಗ, ಬಡ ವಿದ್ಯಾರ್ಥಿಯೊಬ್ಬ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಎಂಬ ವರದಿಯನ್ನು ಪತ್ರಿಕೆಯಲ್ಲಿ ಓದಿದ್ದೆ. ಅದೇ ನನ್ನನ್ನು ಹುರಿದುಂಬಿಸಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT