ಗುರುವಾರ , ಅಕ್ಟೋಬರ್ 17, 2019
22 °C
ಕಡಿಮೆ ಸಂಬಳಕ್ಕೆ ಕಾಫಿ ತೋಟ, ಹೋಟೆಲ್‌, ರೆಸಾರ್ಟ್‌ನಲ್ಲಿ ಕೂಲಿ

ಕೊಡಗಿನಲ್ಲೂ ಬಾಂಗ್ಲಾ ವಲಸಿಗರ ಹಾವಳಿ?

Published:
Updated:

ಮಡಿಕೇರಿ: ಬೆಟ್ಟ–ಗುಡ್ಡಗಳಲ್ಲಿ ಹಬ್ಬಿಕೊಂಡಿರುವ ಕೊಡಗಿನ ಕಾಫಿ ತೋಟಗಳಲ್ಲೂ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಶಂಕೆ ಸ್ಥಳೀಯರಲ್ಲಿ ಬಲವಾಗಿದೆ. ಏಜೆನ್ಸಿಗಳ ಮೂಲಕ ಕಾಫಿ ಕಣಿವೆಗೆ ತೋಟದ ಕಾರ್ಮಿಕರಾಗಿ ಬಂದವರು ಈಗ ಹಣ್ಣಿನ ವ್ಯಾಪಾರ, ದಿನಸಿ ಅಂಗಡಿಗಳಲ್ಲಿ ಕೂಲಿ, ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

‘ಬಹುತೇಕರಿಗೆ ಗುರುತಿನ ಚೀಟಿ ಸೇರಿದಂತೆ ಸರ್ಕಾರಿ ಸೌಲಭ್ಯಗಳೂ ಲಭಿಸುತ್ತಿವೆ. ಇದರ ಹಿಂದೆ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದೆ. ಗಾರೆ ಕೆಲಸದಲ್ಲಿ ಹೆಚ್ಚಿನವರು ತೊಡಗಿಸಿಕೊಂಡಿದ್ದಾರೆ. ಅವರೆಲ್ಲರೂ ಸ್ಥಳೀಯರೇ ಆಗಿಬಿಟ್ಟಿದ್ದಾರೆ. ಹೊರಗಿನವರೆಂಬ ಗುರುತೂ ಸಿಗುತ್ತಿಲ್ಲ. ಕನ್ನಡವನ್ನೂ ಕಲಿತಿದ್ದಾರೆ’ ಎನ್ನುತ್ತಾರೆ ವಿಶ್ವ ಹಿಂದೂ ಪರಿಷತ್‌ ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ.

ಮಾಲೀಕರೇ ಬಾಯ್ಬಿಡುವುದಿಲ್ಲ!:

ಕಾಫಿ ತೋಟಗಳಲ್ಲಿ ಕಾರ್ಮಿಕರ ಸಮಸ್ಯೆ ಎದುರಾದಾಗ, ಉತ್ತರ ಭಾರತದ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ ವಲಸಿಗರೂ ಕೊಡಗಿಗೆ ಬಂದಿದ್ದಾರೆ ಎನ್ನಲಾಗಿದೆ. ಪ್ರತ್ಯೇಕ ತಂಡವಾಗಿ ಬಂದವರು, ಕಾಫಿ ತೋಟದ ಲೈನ್‌ಮನೆಗೆ ಸೇರಿಕೊಂಡಿದ್ದಾರೆ. ಕಾರ್ಮಿಕರ ಕೊರತೆ ಎದುರಿಸುತ್ತಿದ್ದ ಕೆಲವರು ವಲಸೆ ಬಂದವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಸ್ಥಳೀಯರಿಗೆ ದಿನಕ್ಕೆ ₹ 300ರಿಂದ ₹ 350ರ ತನಕ ಕೂಲಿ ನೀಡಬೇಕು. ಆದರೆ, ವಲಸಿಗರಿಗೆ ₹ 100ರಿಂದ ₹ 150 ನೀಡಿದರೂ ಸಾಕು ಎನ್ನುತ್ತಾರೆ ಸ್ಥಳೀಯರು.

ಸಮೀಕ್ಷೆ ಮುಂದಾಗಿದ್ದ ಇಲಾಖೆ:

‘ಎರಡು ವರ್ಷಗಳ ಹಿಂದೆ ಕೊಡಗು ಪೊಲೀಸ್‌ ಇಲಾಖೆ ಸಮೀಕ್ಷೆಗೆ ಮುಂದಾಗಿತ್ತು. ಆದರೆ, ಕೆಲಸದ ಒತ್ತಡ, ಪ್ರಕೃತಿ ವಿಕೋಪ ಹಾಗೂ ಸಿಬ್ಬಂದಿ ಕೊರತೆಯಿಂದ ಆ ಸಮೀಕ್ಷೆ ಪೂರ್ಣಗೊಂಡಿಲ್ಲ’ ಎನ್ನುತ್ತವೆ ಪೊಲೀಸ್ ಮೂಲಗಳು.

ಬಾಂಗ್ಲಾ ವಲಸಿಗರು ಕೊಡಗಿನ ಕಾಫಿ ತೋಟದ ಲೈನ್‌ಮನೆಗಳಲ್ಲಿ ನೆಲೆಸಿದ್ದಾರೆ ಎಂದು ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಹಾಗೂ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಅವರನ್ನು ಹೊರಹಾಕುವಂತೆ ಮನವಿ ಮಾಡಿದ್ದರು. ಬಳಿಕ ಪೊಲೀಸ್‌ ಇಲಾಖೆ ಸಮೀಕ್ಷೆ ಕೈಗೆತ್ತಿಕೊಂಡಿತ್ತು. ಲೈನ್‌ಮನೆಗಳಲ್ಲಿ ವಾಸವಿರುವ ಕಾರ್ಮಿಕರ ಸಂಖ್ಯೆ, ದಾಖಲೆ, ಸಂಶಯ ಬಂದವರ ವಿಚಾರಣೆಗೂ ತೋಟದ ಮಾಲೀಕರು ಸಹಕರಿಸಬೇಕು ಎಂದು ಕೋರಲಾಗಿತ್ತು. ಪೊಲೀಸರು ಸಮೀಕ್ಷೆಗೆ ತೆರಳಿದಾಗ ವಲಸಿಗರು ಬೇರೊಂದು ತೋಟಕ್ಕೆ ತೆರಳಿದ್ದಾರೆ ಎಂಬ ಅನುಮಾನವೂ ವ್ಯಕ್ತವಾಗಿತ್ತು. 

‘ಸುಂಟಿಕೊಪ್ಪ ಸುತ್ತಮುತ್ತ ಸಾಕಷ್ಟು ಮಂದಿ ವಲಸಿಗರಿದ್ದಾರೆ. ಆಸ್ಸಾಂನವರೆಂದು ಹೇಳಿಕೊಂಡು ನೆಲೆಸಿದ್ದಾರೆ. ಅವರನ್ನು ಹೊರಹಾಕುವ ಕ್ರಮವಾಗಿಲ್ಲ. 2018ರಲ್ಲಿ ಭೂಕುಸಿತವಾಗಿದ್ದ ವೇಳೆ ಇಲ್ಲಿಯೂ ನೆಲೆ ಕಳೆದುಕೊಂಡು ಬೇರೊಂದು ಸ್ಥಳಕ್ಕೆ ತೆರಳಿದ್ದರು. ಈಗ ಮತ್ತೆ ಜಿಲ್ಲೆಯತ್ತ ತಂಡವಾಗಿ ಬರುತ್ತಿದ್ದಾರೆ’ ಎಂದು ಮುಖಂಡರೊಬ್ಬರು ಹೇಳಿದರು.

‘ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗುರುತೇ ಸಿಗದಂತೆ ಉಡುಗೆಯಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ. ಆಸ್ಸಾಂ ಮೂಲದವರಾಗಿದ್ದರೆ ಅಲ್ಲಿ ಹಿಂದೂಗಳೂ ಇಲ್ಲವೇ? ಅವರಿಗೆ ಕಷ್ಟ ಬಂದಿಲ್ಲವೇ? ಇವರೆಲ್ಲಾ ಮೇಲ್ನೋಟಕ್ಕೆ ಬಾಂಗ್ಲಾದವರೇ ಎಂಬ ಶಂಕೆಯಿದೆ. ಸಂಶಯಗೊಂಡು ವಿಚಾರಣೆ ನಡೆಸಿದರೆ ಗುರುತಿನ ಚೀಟಿ ತೋರಿಸುತ್ತಾರೆ. ಸುಲಭವಾಗಿ ದಾಖಲಾತಿಗಳೂ ಸಿಗುತ್ತಿವೆ’ ಎಂದು ಡಿ.ನರಸಿಂಹ ಹೇಳಿದರು.   

Post Comments (+)