133 ಗ್ರಾಮಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯ ಇಲ್ಲ!

7
ಬ್ಯಾಂಕ್‌ಗಳ ಹುಟ್ಟೂರಿನಲ್ಲಿಯೇ ಆರ್ಥಿಕ ಸೇರ್ಪಡೆ ಅನುಷ್ಠಾನ ವಿಳಂಬ

133 ಗ್ರಾಮಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯ ಇಲ್ಲ!

Published:
Updated:

ಮಂಗಳೂರು: ಬ್ಯಾಂಕ್‌ಗಳ ಹುಟ್ಟೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 133 ಗ್ರಾಮಗಳಲ್ಲಿ ಈಗಲೂ ಬ್ಯಾಂಕಿಂಗ್‌ ಸೌಲಭ್ಯ ಇಲ್ಲ!

ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 10.91 ಲಕ್ಷ ಜನರು 331 ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ 198 ಗ್ರಾಮಗಳಿಗೆ ಮಾತ್ರ ಸಂಪೂರ್ಣವಾದ ಬ್ಯಾಂಕಿಂಗ್‌ ಸೇವೆ ಲಭ್ಯವಿದೆ. ಉಳಿದ ಗ್ರಾಮಗಳಲ್ಲಿ ಬ್ಯಾಂಕ್‌ ಶಾಖೆ, ಎಟಿಎಂ ಸೇರಿದಂತೆ ಯಾವುದೇ ರೀತಿಯ ಬ್ಯಾಂಕಿಂಗ್‌ ಸೇವೆಯೂ ಲಭ್ಯವಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನದಂತೆ ಜಿಲ್ಲೆಯ ಎಲ್ಲ ಗ್ರಾಮಗಳನ್ನು ನೇರವಾದ ಬ್ಯಾಂಕಿಂಗ್‌ ಸೇವೆಯಡಿ (ಆರ್ಥಿಕ ಸೇರ್ಪಡೆ) ತರಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಬ್ಯಾಂಕ್‌ಗಳ ನಿರಾಸಕ್ತಿ, ಸ್ಥಳಾವಕಾಶದ ಕೊರತೆ ಮತ್ತಿತರ ಕಾರಣಗಳಿಂದಾಗಿ ಇನ್ನೂ 133 ಗ್ರಾಮಗಳಲ್ಲಿ ನೇರ ಬ್ಯಾಂಕಿಂಗ್‌ ಸೇವೆ ಕಲ್ಪಿಸಲು ಸಾಧ್ಯವಾಗಿಲ್ಲ.

ವರದಿ ಸಲ್ಲಿಕೆ: ‘ಯಾವುದೇ ರೀತಿಯ ಬ್ಯಾಂಕಿಂಗ್ ಸೇವೆ ಲಭ್ಯವಿಲ್ಲದ ಗ್ರಾಮಗಳ ಪಟ್ಟಿ ಒದಗಿಸುವಂತೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯು ಸೂಚಿಸಿತ್ತು. ಎಲ್ಲ ಗ್ರಾಮಗಳ ಮಾಹಿತಿಯನ್ನು ಕಲೆಹಾಕಿ ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಬಂಧಕರ ಮೂಲಕ ಮಾಹಿತಿ ಒದಗಿಸಲಾಗಿದೆ. ತ್ವರಿತವಾಗಿ ಈ ಗ್ರಾಮಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಪ್ರಯತ್ನ ಜಾರಿಯಲ್ಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್‌.ರವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಿಯಮಿತವಾಗಿ ಸಭೆ ನಡೆಸುತ್ತಿರುವ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯು, ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಪ್ರಗತಿ ಪರಿಶೀಲಿಸುತ್ತಿದೆ. ದಕ್ಷಿಣ ಕನ್ನಡವೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೇರ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು ವಿಳಂಬ ಆಗುತ್ತಿರುವುದನ್ನು ಸಮಿತಿ ಗುರುತಿಸಿತ್ತು.

ಆರು ಕಡೆ ಶಾಖೆ ಬೇಕು: ಆರ್‌ಬಿಐ ಮಾರ್ಗಸೂಚಿ ಪ್ರಕಾರ, 5,000 ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್‌ ಶಾಖೆ ಪ್ರಾರಂಭಿಸಬೇಕಾದುದು ಕಡ್ಡಾಯ. ದಕ್ಷಿಣ ಕನ್ನಡ ಜಿಲ್ಲೆಯ ಆರು ಗ್ರಾಮಗಳು ಈ ಮಾನದಂಡದ ವ್ಯಾಪ್ತಿಯಲ್ಲಿದ್ದೂ, ಅಲ್ಲಿ ಬ್ಯಾಂಕ್‌ ಶಾಖೆಗಳಿಲ್ಲ. ಕೆಲವು ಗ್ರಾಮಗಳಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಶಾಖೆಗಳಿವೆ. ಆದರೆ, ಈ ಆರು ಗ್ರಾಮಗಳಲ್ಲಿ ಶಾಖೆ ತೆರೆಯಲು ಬ್ಯಾಂಕ್‌ಗಳು ಆಸಕ್ತಿ ತೋರುತ್ತಿಲ್ಲ.

‘5,000ಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಶೀಘ್ರದಲ್ಲಿ ಬ್ಯಾಂಕ್‌ ಶಾಖೆ ಆರಂಭಿಸಲು ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲಾಡಳಿತವು ವಿವಿಧ ಬ್ಯಾಂಕ್‌ಗಳ ಜೊತೆ ಹಲವು ಸುತ್ತಿನ ಚರ್ಚೆ ನಡೆಸಿದೆ. ಕೆಲವೇ ತಿಂಗಳುಗಳೊಳಗೆ ಈ ಪ್ರಕ್ರಿಯೆ
ಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಲೀಡ್‌ ಬ್ಯಾಂಕ್ ಪ್ರಬಂಧಕ ಫ್ರಾನ್ಸಿಸ್‌ ಬೊರ್ಜಿಯಾ ಎ. ಹೇಳುತ್ತಾರೆ.

ನಿತ್ಯದ ಬವಣೆ: ಬ್ಯಾಂಕಿಂಗ್‌ ಸೌಲಭ್ಯ ಇಲ್ಲದ 133 ಗ್ರಾಮಗಳ ಪೈಕಿ ಹಲವು ಗ್ರಾಮಗಳು ನಗರ ಪ್ರದೇಶದಿಂದ ದೂರದಲ್ಲಿವೆ. ಇದರಿಂದಾಗಿ ಸಣ್ಣ ಪ್ರಮಾಣದ ವ್ಯವಹಾರಗಳಿಗೂ ಹಳ್ಳಿಯ ಜನರು ಹತ್ತಾರು ಕಿಲೋಮೀಟರ್‌ ಕ್ರಮಿಸಿ ಬರಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಕೆಲವು ಕಡೆಗಳಲ್ಲಿ ಸಮೀಪದಲ್ಲಿರುವ ಎಟಿಎಂ ಯಂತ್ರಗಳೂ ಸರಿಯಾಗಿ ಕೆಲಸ ಮಾಡದಿರುವುದು ಜನರ ಬವಣೆಯನ್ನು ಹೆಚ್ಚಿಸಿದೆ.

ಪಂಚಾಯಿತಿಗಳಲ್ಲೇ ಬ್ಯಾಂಕಿಂಗ್‌

ಗ್ರಾಮಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯದ ಕೊರತೆಯನ್ನು ನೀಗಲು ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೈಜೋಡಿಸಿದೆ. ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಬ್ಯಾಂಕ್ ಸಮಾಲೋಚಕರಿಗೆ ಮೈಕ್ರೋ ಎಟಿಎಂ ಯಂತ್ರಗಳ ಮೂಲಕ ಬ್ಯಾಂಕಿಂಗ್ ಸೇವೆ ಒದಗಿಸಲು ಸ್ಥಳಾವಕಾಶ ಒದಗಿಸುವಂತೆ ಜುಲೈ 25ರಂದು ಪಂಚಾಯತ್‌ ರಾಜ್‌ ಇಲಾಖೆಯ ನಿರ್ದೇಶಕರು ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಮತ್ತು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 331 ಗ್ರಾಮಗಳಿವೆ

10.91 ಲಕ್ಷ ಜನರು ಗ್ರಾಮಗಳಲ್ಲಿದ್ದಾರೆ

198 ಗ್ರಾಮಗಳಲ್ಲಿ ಬ್ಯಾಂಕಿಂಗ್‌ ಸೇವೆ ಲಭ್ಯ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !