ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಯಲ್ಲಿ ಬಸ್, ರೈಲು ಟಿಕೆಟ್ ಬುಕ್ಕಿಂಗ್

‘ಬಾಪೂಜಿ ಸೇವಾ ಕೇಂದ್ರ’ದಲ್ಲಿ ಹೆಚ್ಚುವರಿ ಸೇವೆ ಪರಿಚಯ
Last Updated 9 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದೇ ಸೂರಿನಡಿ ನಾಗರಿಕರಿಗೆ ಹಲವು ಬಗೆಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆದಿರುವ ‘ಬಾಪೂಜಿ ಸೇವಾ ಕೇಂದ್ರ’ದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ರೈಲ್ವೆ ಟಿಕೆಟ್‌ ಬುಕ್ಕಿಂಗ್ ಸೇವೆ ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೆಲವು ತಿಂಗಳಿನಿಂದ ಈ ಹೊಸ ಸೇವೆಯ ಅನುಷ್ಠಾನದ ಬಗ್ಗೆ ಇಲಾಖೆಯಲ್ಲಿ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ನಿಗದಿಯಂತೆ ಎಲ್ಲ ಪ್ರಕ್ರಿಯೆಗಳು ಸಕಾಲಕ್ಕೆ ಪೂರ್ಣಗೊಂಡರೆ ಸುಮಾರು ಮೂರು ತಿಂಗಳಲ್ಲಿ ಹಳ್ಳಿಯ ಜನರು ತಮ್ಮ ಪಂಚಾಯಿತಿಯಲ್ಲೇ ಬಸ್‌ ಮತ್ತು ರೈಲ್ವೆ ಪ್ರಯಾಣದ ಮುಂಗಡ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ದೊರೆಯಲಿದೆ.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರನ್ನು ವಿಚಾರಿಸಿದರೆ, ‘ಗ್ರಾಮ ಪಂಚಾಯಿತಿಗಳಲ್ಲಿ ಬಸ್‌ ಮತ್ತು ರೈಲ್ವೆ ಟಿಕೆಟ್‌ ಬುಕ್ಕಿಂಗ್ ಸೇವೆ ಕಲ್ಪಿಸುವ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ. ತಂತ್ರಾಂಶ ಮತ್ತು ಟಿಕೆಟ್ ಹಣ ಪಾವತಿ ಪೋರ್ಟಲ್ ವಿನ್ಯಾಸ ಮಾಡಬೇಕಾಗಿದೆ’ ಎಂದು ಹೇಳಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ‘ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೆಚ್ಚುವರಿ ಸೇವೆ ಪರಿಚಯಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪೂರಕವಾಗಿ ಆನ್‌ಲೈನ್‌ ಪಾವತಿ ಪೋರ್ಟಲ್ ಸಿದ್ಧವಾಗಬೇಕಿದೆ. ಇದನ್ನು ಟೆಂಡರ್‌ ಅಥವಾ ಒಪ್ಪಂದದ ಮೂಲಕ ಬ್ಯಾಂಕ್ ಅಥವಾ ಕಂಪನಿಯೊಂದಕ್ಕೆ ವಹಿಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

ಕಂದಾಯ ಇಲಾಖೆಯ 40ಕ್ಕೂ ಅಧಿಕ ಸೇವೆಗಳನ್ನು ನೀಡುತ್ತಿರುವ ಬಾಪೂಜಿ ಸೇವಾ ಕೇಂದ್ರದಲ್ಲಿ ಪರಿಚಯಿಸಲಾಗುತ್ತಿರುವ ಈ ನೂತನ ಸೇವೆಯಿಂದ ಗ್ರಾಮೀಣ ಜನರಿಗೆ ಸಮಯದ ಜತೆಗೆ ಹಣವೂ ಉಳಿತಾಯವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

*ಯೋಜನೆಯ ಟೆಂಡರ್‌ ಅಥವಾ ಒಡಂಬಡಿಕೆ ಆದ ತಕ್ಷಣವೇ ನಾವು ಸೇವೆ ಆರಂಭಿಸುತ್ತೇವೆ. ಎರಡ್ಮೂರು ತಿಂಗಳಲ್ಲಿ ಟಿಕೆಟ್ ಬುಕ್ಕಿಂಗ್ ಸೇವೆ ಪ್ರಾರಂಭವಾಗಲಿದೆ

–ಎಲ್.ಕೆ.ಅತೀಕ್, ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT