ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಅಧ್ಯಯನ: ಟ್ಯಾಂಕರ್ ಮೊರೆ

Last Updated 18 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿಗೆ ಭಾನುವಾರ ಭೇಟಿ ನೀಡಿದ್ದ ಕೇಂದ್ರ ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್ ಚೌಧರಿ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡದ ಎದುರು ನೀರಿನ ಸಮಸ್ಯೆ ವಿವರಿಸಲು ಪುರಸಭೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು
ಪೂರೈಸುವ ನಾಟಕಕ್ಕೆ ಮೊರೆ ಹೋದರು!

ವೆಂಕಟಾಪುರ ಬಳಿ ತೊಗರಿ ಬೆಳೆ ಪರಿಶೀಲಿಸಿ ತಂಡ ಪಟ್ಟಣಕ್ಕೆ ಬಂದಿತು. ಈ ವೇಳೆಗೆ ಎರಡು ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿಕೊಂಡು ಪುರಸಭೆ ಸಿಬ್ಬಂದಿ ಶಿರಾ ರಸ್ತೆಯಲ್ಲಿ ಕಾಯುತ್ತಿದ್ದರು. ನೀರು ಕೊಡುವುದಾಗಿ ಭೋವಿ ಕಾಲೊನಿಯ ನೂರಾರು ಮಹಿಳೆಯರನ್ನು ಕರೆ ತಂದಿದ್ದರು.

‘ಇನ್ನೂ ಎಷ್ಟು ಹೊತ್ತು ಕಾಯಬೇಕು, ಬೇಗ ನೀರು ಬಿಡಿ. ಮನೆಯಲ್ಲಿ ಕೆಲಸ ಇದೆ’ ಎಂದು ಮಹಿಳೆಯರು ಜೋರು ಮಾಡಿದರು. ‘ಸ್ವಲ್ಪ ತಡೆಯಿರಿ ಅಧಿಕಾರಿಗಳು ಬಂದ ಮೇಲೆ ನೀರು ಬಿಡುತ್ತೇವೆ’ ಎಂದು ಸಿಬ್ಬಂದಿ ಸಮಾಧಾನ ಪಡಿಸಿದರು.

ಅಧಿಕಾರಿಗಳು ಬಂದ ತಕ್ಷಣ ನೀರು ಸರಬರಾಜು ಆರಂಭಿಸಲಾಯಿತು. ‘ತಿಂಗಳಿನಿಂದ ನೀರು ಬಿಟ್ಟಿರಲಿಲ್ಲ. ಫೋಟೊ ತೆಗೆಸಿ
ಕೊಳ್ಳಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ’ ಎಂದು ಮಹಿಳೆಯರು ಅಸಮಾಧಾನದಿಂದ ನುಡಿದರು.

ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಹೊರಟ ನಂತರ ಟ್ಯಾಂಕರ್‌ಗಳೊಂದಿಗೆ ಸಿಬ್ಬಂದಿಯೂ ಹೊರಟರು.

ಟಾರ್ಚ್ ಬೆಳಕಿನಲ್ಲಿ ಹೊಲ ವೀಕ್ಷಣೆ
ಮೊಳಕಾಲ್ಮುರು: ತಾಲ್ಲೂಕಿನ ಮುತ್ತಿಗಾರಹಳ್ಳಿಗೆ ಸಂಜೆ 4.30ಕ್ಕೆ ತಾಲ್ಲೂಕಿಗೆ ತಂಡ ಬರಬೇಕಿತ್ತು. ಆದರೆ ತಂಡ ಬಂದಾಗ ಸಂಜೆ 6.50 ಆಗಿತ್ತು. ಹೀಗಾಗಿ ರಾಯಾಪುರದಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿರುವುದನ್ನು ವೀಕ್ಷಿಸುವುದು ರದ್ದಾಯಿತು. ಮುತ್ತಿಗಾರಹಳ್ಳಿಯಲ್ಲಿ ಕೇವಲ 15 ನಿಮಿಷದಲ್ಲಿ ಟಾರ್ಚ್‌ ಬೆಳಕಿನಲ್ಲಿ ರಾಗಿ ಹೊಲ ವೀಕ್ಷಿಸಿ, ಇಳುವರಿ, ನಷ್ಟದ ಪ್ರಮಾಣ ಹಾಗೂ ಗೋಶಾಲೆಯಲ್ಲಿ ದೇವರ ಎತ್ತುಗಳ ಮಾಹಿತಿಯನ್ನು ತಂಡ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT